ನಂಜನಗೂಡು: ‘ಪಶುಸಂಗೋಪನೆಯು ಲಾಭದಾಯಕ ಉದ್ಯಮವಾಗಿದ್ದು, ರೈತರು ವೈಜ್ಞಾನಿಕ ಮಾಹಿತಿಯನ್ನು ಪಡೆದು ತಾಂತ್ರಿಕ ವಿಷಯಗಳನ್ನು ಅಳವಡಿಸಿಕೊಂಡು ಪಶುಸಂಗೋಪನೆ ಮಾಡಿದರೆ, ಹೆಚ್ಚಿನ ಆದಾಯಗಳಿಸಬಹುದು’ ಎಂದು ಪಶುಸಂಗೋಪನೆ ಇಲಾಖೆಯ ಜಂಟಿ ಆಯುಕ್ತ ಡಾ. ಎಚ್ ತೆಗ್ಗಿ ಹೇಳಿದರು.
ತಾಲ್ಲೂಕಿನ ಸುತ್ತೂರು ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಶುಸಂಗೋಪನೆ ಶ್ರೇಷ್ಠತೆ ಕೇಂದ್ರದ ಸಹಯೋಗದೊಂದಿಗೆ ಮಂಗಳವಾರ ನಡೆದ ಜಾನುವಾರು ಉದ್ಯಮಿಗಳಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ರೈತರು ಕೃಷಿಯ ಜೊತೆಗೆ ಉಪಕಸುಬಾಗಿ ಹೈನುಗಾರಿಕೆ, ಜಾನುವಾರು ಸಾಕಣೆಯಲ್ಲಿ ತೊಡಗಿಸಿಕೊಂಡು ಸ್ವ–ಉದ್ಯಮ ಸೃಷ್ಟಿ ಮಾಡಿಕೊಂಡು ಇತರೆ ರೈತರಿಗೆ ಮಾದರಿಯಾಗಬಹುದು. ರೈತರು ಮಾರುಕಟ್ಟೆ ಕಡೆ ಹೆಚ್ಚು ಗಮನಹರಿಸಿ ಕುರಿ, ಮೇಕೆ ಸಾಕಣೆಯನ್ನು ಮಾಡಬೇಕು. ನಮ್ಮ ಸಂಸ್ಥೆಯಲ್ಲಿ ನಿರಂತರವಾಗಿ ತರಬೇತಿಗಳು ನಡೆಯುತ್ತಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವೈಜ್ಞಾನಿಕ ಮಾಹಿತಿಯನ್ನು ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಮೋಹನ್ ಕುಮಾರ್ ಮಾತನಾಡಿ, ‘ಕಡಿಮೆ ವೆಚ್ಚದಿಂದ ಕೊಟ್ಟಿಗೆ ನಿರ್ಮಿಸಿಕೊಂಡು ವೈಜ್ಞಾನಿಕವಾಗಿ ಕುರಿ, ಮೇಕೆ ಸಾಕಬೇಕು. ಹಲವು ತಿಂಗಳು ಅನುಭವಗಳನ್ನು ಪಡೆದು ಮುಂದಿನ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಕಬಹುದು. ರೈತರು ಇಲಾಖೆ ಸೇವೆಗೆ ಇದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಡಾ. ಜ್ಞಾನೇಶ್ , ಡಾ. ರಾಜೇಶ್, ಡಾ. ದಿವ್ಯಾ, ಡಾ. ರಕ್ಷಿತ್ ರಾಜ್, ಡಾ. ಪ್ರಸಾದ್, ಡಾ. ದೀಪಕ್, ಪ್ರಗತಿಪರ ರೈತ ಹೇಮಂತ್ ಕುಮಾರ್, ಮಹೇಶ್, ಮಲ್ಲೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.