ADVERTISEMENT

ಮೀನುಗಾರರಿಗೆ ರಾಷ್ಟ್ರೀಯ ಯೋಜನೆ ಘೋಷಿಸಲಿ: ಮಂಜುನಾಥ್ ಸುಣಗಾರ

ಕೇಂದ್ರ ಸರ್ಕಾರಕ್ಕೆ ಕೆಪಿಸಿಸಿ ಮೀನುಗಾರರ ಘಟಕದ ಅಧ್ಯಕ್ಷ ಮಂಜುನಾಥ್ ಸುಣಗಾರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 13:58 IST
Last Updated 27 ಫೆಬ್ರುವರಿ 2024, 13:58 IST
ಮೈಸೂರಿನ ಕಾಂಗ್ರೆಸ್‌ ಭವನದಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್‌ ಸಮಿತಿಯು ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮೀನುಗಾರರ ಸಮಾವೇಶ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಮೀನುಗಾರ ಮಹಿಳೆ ಅಯ್ಯಮ್ಮ ಮೀನು ಹಿಡಿಯುವ ಬುಟ್ಟಿಯ ಮೇಲೆ ದೀಪ ಬೆಳಗಿ ಉದ್ಘಾಟಿಸಿದರು. ಮರೀಗೌಡ, ಬಿ.ಜೆ.ವಿಜಯಕುಮಾರ್, ಮಂಜುನಾಥ್ ಸುಣಗಾರ ಹಾಗೂ ಕಾಂಗ್ರೆಸ್‌ ಮುಖಂಡರು ಹಾಜರಿದ್ದರು
ಮೈಸೂರಿನ ಕಾಂಗ್ರೆಸ್‌ ಭವನದಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್‌ ಸಮಿತಿಯು ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮೀನುಗಾರರ ಸಮಾವೇಶ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಮೀನುಗಾರ ಮಹಿಳೆ ಅಯ್ಯಮ್ಮ ಮೀನು ಹಿಡಿಯುವ ಬುಟ್ಟಿಯ ಮೇಲೆ ದೀಪ ಬೆಳಗಿ ಉದ್ಘಾಟಿಸಿದರು. ಮರೀಗೌಡ, ಬಿ.ಜೆ.ವಿಜಯಕುಮಾರ್, ಮಂಜುನಾಥ್ ಸುಣಗಾರ ಹಾಗೂ ಕಾಂಗ್ರೆಸ್‌ ಮುಖಂಡರು ಹಾಜರಿದ್ದರು   

ಮೈಸೂರು: ‘ಶೋಷಿತ ಮೀನುಗಾರ ಸಮುದಾಯದ ಆರ್ಥಿಕ ಸ್ವಾವಲಂಬನೆಗೆ ರಾಷ್ಟ್ರೀಯ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಬೇಕು’ ಎಂದು ಕೆಪಿಸಿಸಿ ಮೀನುಗಾರರ ಘಟಕದ ಅಧ್ಯಕ್ಷ ಮಂಜುನಾಥ್ ಎಸ್. ಸುಣಗಾರ ಒತ್ತಾಯಿಸಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್‌ ಸಮಿತಿಯು ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮೀನುಗಾರರ ಸಮಾವೇಶ ಹಾಗೂ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕಳೆದ 10 ವರ್ಷದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಮುದಾಯದ ಅಭಿವೃದ್ಧಿಗೆ ಒಂದೇ ಒಂದು ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಕೇವಲ ಮಂದಿರ ಹಾಗೂ ಕೋಮುವಾದವೇ ಬಿಜೆಪಿಗರ ಚುನಾವಣಾ ವಿಷಯಗಳಾಗಿವೆ’ ಎಂದು ಕಿಡಿಕಾರಿದರು.

ADVERTISEMENT

‘ಮಹಿಳಾ ಮೀನುಗಾರರಿಗೆ ಸಾಲ ಸೌಲಭ್ಯವನ್ನು ₹ 50 ಸಾವಿರದಿಂದ ₹ 3 ಲಕ್ಷಕ್ಕೇರಿಸುವುದಾಗಿ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಸಿದ್ದರಾಮಯ್ಯ ಅವರ ರಾಜ್ಯ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ. ಮೀನುಗಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 10 ಸಾವಿರ ಮನೆ ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಿಳಿಸಬೇಕು’ ಎಂದು ಕಾರ್ಯಕರ್ತರಿಗೆ ಸೂಚಿಸಿದರು.

‘ಮೀನು ಮಾರಾಟ ಮಾಡುವ ಶ್ರಮ ಸಮುದಾಯವನ್ನು ರಾಜಕೀಯವಾಗಿ ಮುನ್ನಲೆಗೆ ತರಲು ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾಗ 2017ರಲ್ಲಿ ಪ್ರತ್ಯೇಕ ಘಟಕವನ್ನು ಆರಂಭಿಸಿದರು. ಘಟಕವು ಸಮುದಾಯದ ಸಂಘಟನೆ ಹಾಗೂ ಅಭಿವೃದ್ಧಿಗೆ ಶ್ರಮಿಸುತ್ತಿದೆ’ ಎಂದು ತಿಳಿಸಿದರು.

‘ತಂತ್ರಜ್ಞಾನವು ಶ್ರಮ ಸಮುದಾಯಕ್ಕೆ ಸಿಗಬೇಕು. ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರವು ಮತ್ತಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ‘ಸಿದ್ದರಾಮಯ್ಯ ಸರ್ಕಾರವು ಸಮುದಾಯದ ಅಭಿವೃದ್ಧಿಗೆ ₹ 3 ಸಾವಿರ ಕೋಟಿ ಮೀಸಲಿಟ್ಟಿದೆ. ದೇಶವು ಮೀನುಗಾರಿಕೆಯಲ್ಲಿ ವಿಶ್ವದ 3ನೇ ಸ್ಥಾನದಲ್ಲಿದೆ. ಮೀನುಗಾರರ ಬೇಡಿಕೆ ಈಡೇರಿಸಿದರೆ ಮೊದಲ ಸ್ಥಾನ ತಲುಪಬಹುದು’ ಎಂದರು. 

ಜಿಲ್ಲಾ ಮೀನುಗಾರರ ಘಟಕದ ಅಧ್ಯಕ್ಷರಾಗಿ ರಾಮನಹಳ್ಳಿ ಎಸ್.ಸಿದ್ದಯ್ಯ ಅಧಿಕಾರ ಸ್ವೀಕರಿಸಿದರು. ಕೆಪಿಸಿಸಿ ಸದಸ್ಯ ಕೆ.ಮರೀಗೌಡ, ಕಾರ್ಯದರ್ಶಿ ಅಶೋಕಪುರಂ ಭಾಸ್ಕರ್‌, ಮುಖಂಡರಾದ ಶಿವಪ್ರಸಾದ್, ಎಡತಲೆ ಮಂಜುನಾಥ್, ಪ್ರೊ.ಶಿವಕುಮಾರ್, ಯೋಗೇಶ್ ಉಪ್ಪಾರ್, ಶ್ಯಾಮ್ ಯೋಗೇಶ್, ಸಂತೋಷ್ ಮಳೆಯೂರ್, ಸುನಂದ್ ಕುಮಾರ್, ನಾಗನಹಳ್ಳಿ ಉಮಾ ಶಂಕರ್, ಜವರೇಗೌಡ, ನಾಗರಾಜ್, ತಲಕಾಡು ಮಂಜುನಾಥ್, ಅರುಣ್ ಕುಮಾರ್ , ಶ್ರೀನಿವಾಸ್ ನಾಯಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.