ADVERTISEMENT

‘ಅಂತರಾಳದ ಒಳದನಿಗಳು’ ಕವನಸಂಕಲನ ಬಿಡುಗಡೆ ಮಾಡಿದ ನಾಗಭೂಷಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 8:51 IST
Last Updated 28 ನವೆಂಬರ್ 2022, 8:51 IST
ಮೈಸೂರಿನಲ್ಲಿ ಸೋಮವಾರ ಅನ್ವೇಷಣಾ ಸೇವಾ ಟ್ರಸ್‌ನಿಂದ ಅಭಿಯಂತರರು ಸಂಸ್ಥೆಯ ಅಧ್ಯಕ್ಷ ಎಚ್‌.ಎಂ.ಸುರೇಶ್‌ಬಾಬು, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಹಾಗೂ ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ ಅವರಿಗೆ ‘ಒಡೆಯರ್‌’ ಪ್ರಶಸ್ತಿಯನ್ನು ವಿಧಾನ‍ಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಮತ್ತು ತವರು ಅರಸು ಮಹಿಳಾ ಸಂಘದ ಸ್ಥಾಪಕ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್ ಪ್ರದಾನ ಮಾಡಿದರು/ ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ಸೋಮವಾರ ಅನ್ವೇಷಣಾ ಸೇವಾ ಟ್ರಸ್‌ನಿಂದ ಅಭಿಯಂತರರು ಸಂಸ್ಥೆಯ ಅಧ್ಯಕ್ಷ ಎಚ್‌.ಎಂ.ಸುರೇಶ್‌ಬಾಬು, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಹಾಗೂ ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ ಅವರಿಗೆ ‘ಒಡೆಯರ್‌’ ಪ್ರಶಸ್ತಿಯನ್ನು ವಿಧಾನ‍ಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಮತ್ತು ತವರು ಅರಸು ಮಹಿಳಾ ಸಂಘದ ಸ್ಥಾಪಕ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್ ಪ್ರದಾನ ಮಾಡಿದರು/ ಪ್ರಜಾವಾಣಿ ಚಿತ್ರ   

ಮೈಸೂರು: ‘ಸಮಾನತೆ ಭಿಕ್ಷೆ ಅಲ್ಲ. ಅದು ಎಲ್ಲರಿಗೂ ಸಿಗಬೇಕಾದುದಾಗಿದೆ’ ಎಂದು ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ ಪ್ರತಿಪಾದಿಸಿದರು.

ಇಲ್ಲಿನ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ವೈದ್ಯವಾರ್ತಾ ಪ್ರಕಾಶನ ಪ್ರಕಟಿಸಿರುವ, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ವಿರಚಿತ ‘ಅಂತರಾಳದ ಒಳದನಿಗಳು’ ಕವನಸಂಕಲನದ ಬಿಡುಗಡೆ ಕಾರ್ಯಕ್ರಮದಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್‌ನಿಂದ ಕೊಡಮಾಡುವ ‘ಒಡೆಯರ್‌’ ಪ್ರಶಸ್ತಿಯನ್ನು ಸೋಮವಾರ ಸ್ವೀಕರಿಸಿ ಅವರು ಮಾತನಾಡಿದರು.

‘ಬೇಕೋ, ಬೇಡವೋ ಜಾತಿ ಎಂಬುದು ನಮ್ಮೆಲ್ಲರನ್ನೂ ಕರ್ಣನ ಕವಚದಂತೆ ಅಂಟಿಕೊಂಡುಬಿಟ್ಟಿದೆ. ಜಾತಿಯನ್ನೇ ರಕ್ಷಾ ಕವಚ ಮಾಡಿಕೊಂಡು ಬದುಕುತ್ತಿರುವವರೂ ಬಹಳಷ್ಟು ಇದ್ದಾರೆ. ಜಾತಿಗಳಿಂದ, ಅವಮಾನದಿಂದ‌ ನೋಡುವುದು ಈಗಲೂ ನಿಂತಿಲ್ಲ. ಪರಿಶಿಷ್ಟ ಮಹಿಳೆ ನೀರು ಕುಡಿದಿದ್ದಕ್ಕೆ ಇಡೀ ಟ್ಯಾಂಕ್‌ನ ನೀರನ್ನೆಲ್ಲಾ ಖಾಲಿ ಮಾಡಿಸಿದ್ದು ಮೊದಲಾದ ಪ್ರಕರಣಗಳು ಇಂದಿಗೂ ನಡೆಯುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಎಲ್ಲಿವರೆಗೆ ಕಾಯಬೇಕು?: ‘ತಮ್ಮನ್ನು ಮನುಷ್ಯರೆಂದು ನೋಡುವುದಕ್ಕೆ ಪರಿಶಿಷ್ಟರು ಎಲ್ಲಿಯವರೆಗೆ ಕಾಯಬೇಕು? ಜಾತಿಯಿಂದಲೋ, ಬಡತನದ ಕಾರಣದಿಂದಲೋ ಸಂಕಟದಿಂದ ಒದ್ದಾಡುತ್ತಿರುವ ಲಕ್ಷಾಂತರ ಜನರು ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ’ ಎಂದರು.

‘ವ್ಯಕ್ತಿಯನ್ನು ಅಧಿಕಾರ, ಹಣ, ಜಾತಿ ಅಥವಾ ತೋಳ್ಬಲದಿಂದ ಗುರುತಿಸುವುದು ಕಂಡುಬರುತ್ತಿದೆ. ಇವೆಲ್ಲವನ್ನೂ ಬಿಟ್ಟು ಮನುಷ್ಯರು ಎಂದು ಗುರುತಿಸುವುದು ಯಾವಾಗ? ಎಲ್ಲರ‌ ಹೃದಯಗಳೂ ಒಂದೇ‌ ರೀತಿಯಲ್ಲಿರುವಾಗ ಜಾತಿ, ಅಧಿಕಾರ, ಹಣ ಎಂಬಿತ್ಯಾದಿ ಹೆಮ್ಮೆಗಳೇಕೆ?’ ಎಂದು ಕೇಳಿದರು.

‘ನಾವು, ನಮ್ಮ ಧರ್ಮ, ಸಂಸ್ಕೃತಿ, ಆಚಾರ‌–ವಿಚಾರ, ಆಹಾರವೇ ಶ್ರೇಷ್ಠ ಎಂಬ ಭ್ರಮೆಯಿಂದಾಗಿ ಇಲ್ಲದ ಹಲವು ತೊಂದರೆಗಳಿಗೆ ಸಿಲುಕಿಕೊಂಡಿದ್ದೇವೆ. ಸಂಸ್ಕೃತಿ, ದೇಶ, ರಾಷ್ಟ್ರ ಪ್ರೇಮ, ಜಾತಿಯ ಭ್ರಮೆಗಳಲ್ಲಿ ಬದುಕುತ್ತಿದ್ದೇವೆ. ಇಂತಹ ಭಾವನೆಗಳೆಂಬ ಇಲಿಗಳಿಂದಾಗಿಯೇ ಬದುಕು ಎಂಬ ಆಲದ ಮರ ನಾಶವಾಗುತ್ತಿದೆ’ ಎಂದು ವಿಶ್ಲೇಷಿಸಿದರು.

ಅಧಿಕಾರಕ್ಕೋಸ್ಕರ ಸುಳ್ಳು: ‘ದೇಶದ ದುರಂತಕ್ಕೆ ಮುಖ್ಯ ಕಾರಣವಿದ್ದರೆ ಅದು ಅಧಿಕಾರಕ್ಕೋಸ್ಕರ ಸುಳ್ಳು ಹೇಳುವುದು. ರಾಜಕಾರಣಿಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ. ಯಾವುದೋ ಮಹಾರಾಜ ಬಹಳ ಹಿಂದೆಯೇ ಸತ್ತು ಹೋಗಿದ್ದಾನೆ. ಆತನನ್ನು ಹೊಗಳಿದರೆ ಅಥವಾ ತೆಗಳಿದರೆ ಏನೂ ಆಗುವುದಿಲ್ಲ. ಹೀಗಿರುವಾಗ, ಅವನನ್ನು ಇಟ್ಟುಕೊಂಡು ಅಧಿಕಾರ ಪಡೆಯಲು ಮುಂದಾಗಿರುವುದು ಸರಿಯಲ್ಲ’ ಎಂದರು.

ವಿಧಾನಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ‘ಸಮಾಜಕ್ಕಾಗಿ ಕೆಲಸ ಮಾಡಿದ ಮೈಸೂರು ಒಡೆಯರು, ದೇವರಾಜ ಅರಸು, ಈಗ ಶ್ರಮಿಸುತ್ತಿರುವ ಸಿದ್ದರಾಮಯ್ಯ ಮೊದಲಾದವರ ಹೆಸರು ಸದಾ ಹಸಿರಾಗಿರುತ್ತದೆ’ ಎಂದರು.

ಅಭಿಯಂತರರು ಸಂಸ್ಥೆಯ ಅಧ್ಯಕ್ಷ ಎಚ್‌.ಎಂ.ಸುರೇಶ್‌ಬಾಬು ಹಾಗೂ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಅವರಿಗೆ ‘ಒಡೆಯರ್‌’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತವರು ಅರಸು ಮಹಿಳಾ ಸಂಘದ ಸ್ಥಾಪಕ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್ ಅಧ್ಯಕ್ಷತೆ ವಹಿಸಿದ್ದರು. ಅನ್ವೇಷಣಾ ಸೇವಾ ಟ್ರಸ್ಟ್‌ ಅಧ್ಯಕ್ಷ ಅಮರನಾಥರಾಜೇ ಅರಸ್, ‘ಅಂತರಾಳದ ಒಳದನಿಗಳು’ ಸಂಪಾದಕ ಡಾ.ಎಂ.ಜಿ.ಆರ್.ಅರಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.