ADVERTISEMENT

ಹುಣಸೂರು: ಗುಣಮಟ್ಟದ ಕಾಮಗಾರಿಗೆ ಆಗ್ರಹ

ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಅಣೆಕಟ್ಟೆ ದುರಸ್ತಿಗೆ ಟೆಂಡರ್‌

ಎಚ್.ಎಸ್.ಸಚ್ಚಿತ್
Published 12 ಜೂನ್ 2020, 8:58 IST
Last Updated 12 ಜೂನ್ 2020, 8:58 IST
ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಅಣೆಕಟ್ಟೆ ಪ್ರವಾಹಕ್ಕೆ ಸಿಲುಕಿ ಹಾನಿಯಾಗಿರುವುದು (ಎಡಚಿತ್ರ). ತಡೆಗೋಡೆಗೆ ಹಾಕಿದ್ದ ಕಲ್ಲುಗಳು ಕಿತ್ತುಹೋಗಿರುವುದು
ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಅಣೆಕಟ್ಟೆ ಪ್ರವಾಹಕ್ಕೆ ಸಿಲುಕಿ ಹಾನಿಯಾಗಿರುವುದು (ಎಡಚಿತ್ರ). ತಡೆಗೋಡೆಗೆ ಹಾಕಿದ್ದ ಕಲ್ಲುಗಳು ಕಿತ್ತುಹೋಗಿರುವುದು   

ಹುಣಸೂರು: ತಾಲ್ಲೂಕಿನ ಲಕ್ಷ್ಮಣತೀರ್ಥ ನದಿಗೆ ಕಟ್ಟೆಮಳಲವಾಡಿ ಗ್ರಾಮದಲ್ಲಿ ನಿರ್ಮಿಸಿರುವ ಅಣೆಕಟ್ಟೆ ಕಳೆದ ವರ್ಷ ಪ್ರವಾಹಕ್ಕೆ ಸಿಲುಕಿ ಹಾನಿಯಾಗಿದ್ದು, ಗುಣಮಟ್ಟದ ಕಾಮಗಾರಿ ನಡೆಸುವಂತೆ ಈ ಭಾಗದ ರೈತರು ಆಗ್ರಹಿಸಿದ್ದಾರೆ.

ಚೋಳರ ಕಾಲದಲ್ಲಿ ನಿರ್ಮಿಸಿರುವ ಈ ಅಣೆಕಟ್ಟೆಗೆ 700 ವರ್ಷಗಳ ಇತಿಹಾಸವಿದೆ. ಇಟ್ಟಿಗೆ ಮತ್ತು ಕಾಡುಗಲ್ಲು ಬಳಸಿ
ನಿರ್ಮಿಸಿದ್ದ ಅಣೆಕಟ್ಟೆ 30 ಅಡಿ ಆಳವಿದೆ. ಇಲ್ಲಿ ವರ್ಷಪೂರ್ತಿ ನೀರು ಇರುತ್ತದೆ. ಕಟ್ಟೆಯಿಂದ ನೂರಾರು ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಲಭಿಸಿದೆ.

‘ಅಣೆಕಟ್ಟೆ ಮೇಲೆ 30 ರಿಂದ 35 ಕ್ಯುಸೆಕ್ ನೀರು ಹರಿದು ಹೋಗುವ ಸಾಮರ್ಥ್ಯ ಹೊಂದಿದ್ದು, 2019ರಲ್ಲಿ ಸುರಿದ ಭಾರಿ ಮಳೆಯಿಂದ ಪ್ರವಾಹ ಬಂದು ಒಳಹರಿವು ಹೆಚ್ಚಿ 50 ಸಾವಿರ ಕ್ಯುಸೆಕ್ ನೀರು ಹರಿದ ಕಾರಣ ಶಿಥಿಲಗೊಂಡಿದೆ’ ಎಂದು ಹಾರಂಗಿ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್‌ ಮಾಹಿತಿ ನೀಡಿದರು.

ADVERTISEMENT

‘2015ರಲ್ಲಿ ಶಿಥಿಲಗೊಂಡಿದ್ದ ಅಣೆಕಟ್ಟೆ ಭಾಗವನ್ನು ಹಾರಂಗಿ ನೀರಾವರಿ ಇಲಾಖೆ ₹ 2 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆಸಿತ್ತು. ಆಗ ಅಣೆಕಟ್ಟೆಗೆ646 ಅಡಿ ಉದ್ದದ ಕಾಂಕ್ರಿಟ್ ಗೋಡೆ ನಿರ್ಮಿಸಲಾಗಿತ್ತು. ನೀರು ಸೋರಿಕೆ ಹೆಚ್ಚಾಗುತ್ತಿದ್ದ ಕಾರಣ ಮುಂಭಾಗಕ್ಕೆ ತಳಮಟ್ಟದಲ್ಲಿ 2 ಮೀಟರ್ ಅಗಲದ ಗೋಡೆ ನಿರ್ಮಿಸಿ ಬಂದೋಬಸ್ತ್‌ ಮಾಡಲಾಗಿತ್ತು’ ಎಂದು ಹೇಳಿದರು.

‘ಕಳೆದ ವರ್ಷ ಭಾರಿ ಪ್ರವಾಹದಿಂದ ಕಟ್ಟೆಯ ಮೇಲ್ಭಾಗಕ್ಕೆ ಅನಾಹುತ ಸಂಭವಿಸಿದೆ. ಕಾಡುಗಲ್ಲುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕಟ್ಟೆ ದುರಸ್ತಿಗೆ ಈಗ ₹ 98 ಲಕ್ಷ ವೆಚ್ಚದ ಟೆಂಡರ್ ಕರೆಯಲಾಗಿದೆ. ನೀರು ಬೀಳುವ ಭಾಗಕ್ಕೆ ಕಾಡುಗಲ್ಲು ತುಂಬಿಸಿ, ಮೇಲ್ಭಾಗಕ್ಕೆ ಕಾಂಕ್ರೀಟ್ ಹಾಕುವುದರಿಂದ ಪ್ರವಾಹ ಬಂದರೂ ಯಾವುದೇ ಅನಾಹುತ ಆಗದು’ ಎಂದು ಹಾರಂಗಿ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸುವರು.

‘2015 ರಲ್ಲಿ ₹ 2 ಕೋಟಿ ಅನುದಾನದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದರ ಫಲವಾಗಿ ನಾಲ್ಕು ವರ್ಷಗಳಲ್ಲೇ ಕಟ್ಟೆಗೆ ಹಾನಿಯಾಗಿದೆ. ಮತ್ತೆ ಕಾಮಗಾರಿ ನಡೆಸಬೇಕಾದ ಸ್ಥಿತಿ ಬಂದಿದೆ. ಗುಣಮಟ್ಟದ ಕಾಮಗಾರಿ ಕೈಗೊಂಡು ಅಣೆಕಟ್ಟೆ ಉಳಿಸಬೇಕು’ ಎಂದು ಕಟ್ಟೆಮಳಲವಾಡಿ ರೈತ ಕಿರಣ್ ಕುಮಾರ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.