ADVERTISEMENT

ಮೈಸೂರು: ಪಡಿತರ ಚೀಟಿಗೆ ಅರ್ಜಿ; ಪೋರ್ಟಲ್ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 25 ಮೇ 2023, 7:46 IST
Last Updated 25 ಮೇ 2023, 7:46 IST
ಪಡಿತರ ಚೀಟಿ (ಸಾಂದರ್ಭಿಕ ಚಿತ್ರ)
ಪಡಿತರ ಚೀಟಿ (ಸಾಂದರ್ಭಿಕ ಚಿತ್ರ)   

ಮೈಸೂರು : ಕಾಂಗ್ರೆಸ್‌ ಸರ್ಕಾರವು ಘೋಷಿಸಿರುವ ವಿವಿಧ ‘ಗ್ಯಾರಂಟಿ’ಗಳ ಲಾಭವನ್ನು ಪಡೆದುಕೊಳ್ಳಲು ಉತ್ಸುಕರಾಗಿರುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ತವರಾದ ಜಿಲ್ಲೆಯಲ್ಲಿ ಬಿ‍‍ಪಿಎಲ್‌ (ಬಡತನ ರೇಖೆಗಿಂತ ಕೆಳಗಿರುವವರು) ಕಾರ್ಡ್‌ ಮಾಡಿಸಲು ಮುಗಿಬೀಳುತ್ತಿದ್ದಾರೆ. ಆದರೆ, ಅರ್ಜಿ ಸಲ್ಲಿಕೆಯ ಆನ್‌ಲೈನ್‌ ಪೋರ್ಟಲ್‌ ಅನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಸ್ಥಗಿತಗೊಳಿಸಿರುವುದು ಜನರ ಉತ್ಸಾಹಕ್ಕೆ ತಣ್ಣೀರೆರಚಿದೆ.

ಸೌಲಭ್ಯಗಳನ್ನು ಪಡೆದು ಕೊಳ್ಳಲು ಬಿಪಿಎಲ್‌ ಕಾರ್ಡ್‌ ಇರಬೇಕು ಎಂಬ ಮಾನದಂಡ ಮಾಡಲಾಗಿದೆ. ಹೀಗಾಗಿ, ಹೊಸ ‘ಗ್ಯಾರಂಟಿ’ಗಳಿಗೂ ಇದೇ ಮಾನ ದಂಡ ಆಗಬಹುದು ಎಂದು ಭಾವಿಸಿ ಜನರು ಬಿಪಿಎಲ್‌ ಕಾರ್ಡ್‌ ಬಯಸುತ್ತಿದ್ದಾರೆ. ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸ ಬೇಕಿರುವುದರಿಂದ ಸಂಬಂಧಿಸಿದ ಇಲಾಖೆಯ ಕಚೇರಿಗಳು, ಗ್ರಾಮ ಒನ್‌, ಸಾಮಾನ್ಯ ಸೇವಾ ಕೇಂದ್ರಗಳಿಗೆ (ಸಿಎಸ್‌ಸಿ) ಎಡತಾಕುತ್ತಿದ್ದಾರೆ. ಆದರೆ, ಸದ್ಯ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಸ್ವೀಕರಿಸುವ ಅಥವಾ ಸಲ್ಲಿಸುವ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿಲ್ಲ.

ನೀತಿಸಂಹಿತೆ ಕಾರಣ: ‘ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಾಗುತ್ತಿ ದ್ದಂತೆಯೇ, ಆನ್‌ಲೈನ್‌ ಪೋರ್ಟಲ್‌ ಸ್ಥಗಿತಗೊಳಿಸಲಾಗಿತ್ತು. ಈಗ ಸರ್ಕಾರದ ಆದೇಶಕ್ಕಾಗಿ ಕಾಯಲಾಗುತ್ತಿದೆ. ಹೊಸ ಸರ್ಕಾರ ನಿರ್ದೇಶನ ನೀಡಿದ ನಂತರವಷ್ಟೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶವಾಗಲಿದೆ. ಮಾರ್ಗ ಸೂಚಿಗಳ ಪ್ರಕಾರ ಅರ್ಹರಿಗೆ ಬಿಪಿಎಲ್ ಪಡಿತರ ಚೀಟಿ ಕೊಡಲಾಗುತ್ತದೆ’ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

ADVERTISEMENT

‘ಚುನಾವಣೆಯಲ್ಲಿ ಘೋಷಿಸಿದ್ದ ಗ್ಯಾರಂಟಿಗಳನ್ನು ಜಾರಿಗೊಳಿಸಿಯೇ ತೀರುತ್ತೇವೆ. ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ ₹2 ಸಾವಿರ ದೊರೆಯಲಿದೆ. ಬಿಪಿಎಲ್‌ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು. ಮಹಿಳೆಯರು ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಚಿವ ಸಂಪುಟದಲ್ಲಿ ತಾತ್ವಿಕ ಅನುಮೋದನೆಯೂ ದೊರೆತಿದೆ. ಈ ಹಿನ್ನೆಲೆಯಲ್ಲಿ ಎಲ್ಲದಕ್ಕೂ ಬಿಪಿಎಲ್‌ ಕಾರ್ಡ್‌ ಮಾನದಂಡವಾಗಬಹುದು ಎಂಬ ನಂಬಿಕೆಯ ಕಾರಣದಿಂದ ಬಿಪಿಎಲ್‌ ಕಾರ್ಡ್‌ಗೆ ಬೇಡಿಕೆ ಕಂಡುಬಂದಿದೆ.

ಹೊಸದಾಗಿ ‘ಬಿಪಿಎಲ್ ಕಾರ್ಡ್’ಗೆ ಅರ್ಜಿ ಸಲ್ಲಿಸಲು ‘ಗ್ರಾಮ ಒನ್’ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಿಗೆ ಜನರು ನಿತ್ಯವೂ ಭೇಟಿ ನೀಡಿ ವಿಚಾರಿಸುವುದು ಕಂಡುಬರುತ್ತಿದೆ. ‘ಗ್ಯಾರಂಟಿ’ ಯೋಜನೆಗಳಿಗೆ ಬಿಪಿಎಲ್‌ ಕಾರ್ಡ್‌ ಮಾನದಂಡ ಎಂದು ಜನರು ಭಾವಿಸಿರುವುದರಿಂದ ಅರ್ಜಿ
ಸಲ್ಲಿಸಲು ಬರುವವರ ಸಂಖ್ಯೆ ಹೆಚ್ಚಾಗಿದೆ. ಸದ್ಯಕ್ಕೆ ಅರ್ಜಿ ಸ್ವೀಕಾರ ಪ್ರಕ್ರಿಯೆಗೆ ಸರ್ಕಾರ ಅನುವು ಮಾಡಿಕೊಟ್ಟಿಲ್ಲ’ ಎಂದು ಗ್ರಾಮ ಒನ್‌ಗಳ ಸಿಬ್ಬಂದಿ ಹೇಳುತ್ತಾರೆ.

‘ಅರ್ಜಿ ಸ್ವೀಕಾರ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದಾಗಿ ಬಿಪಿಎಲ್‌ ಕಾರ್ಡ್‌ಗೆ ಬೇಡಿಕೆ ಹೆಚ್ಚಿದೆಯೇ ಇಲ್ಲವೇ ಎಂದು ಹೇಳುವುದು ಕಷ್ಟ. ಅಂಕಿ–ಅಂಶವೂ ಸಿಗುವುದಿಲ್ಲ. ಸರ್ಕಾರದ ಆದೇಶ ಬಂದ ನಂತರ ಅರ್ಜಿ ಸಲ್ಲಿಸಬಹುದು. ಪರಿಶೀಲಿಸಿ ಕಾರ್ಡ್‌ ಒದಗಿಸಲಾಗುತ್ತದೆ’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕಿ ಕುಮುದಾ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ 1,009 ನ್ಯಾಯಬೆಲೆ ಅಂಗಡಿಗಳಿವೆ. 7,07,547 ಆದ್ಯತಾ (ಬಿಪಿಎಲ್‌– 6,57,039, ಅಂತ್ಯೋದಯ ಯೋಜನೆ–50,508) ಚೀಟಿಗಳಿವೆ. 1,07,647 ಎಪಿಎಲ್‌ ಚೀಟಿಗಳಿವೆ. ಹೊಸದಾಗಿ ಬಿಪಿಎಲ್‌ ಪಡಿತರ ಚೀಟಿ ಕೋರಿ ಸಲ್ಲಿಕೆಯಾಗಿರುವ 6,661 ಅರ್ಜಿಗಳ ಪರಿಶೀಲನೆ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.

ಬಿಪಿಎಲ್‌ ಪಡಿತರ ಚೀಟಿ ವಿತರಣೆಯನ್ನು ವಿಧಾನ ಸಭೆ ಚುನಾವಣೆ ನೀತಿ ಸಂಹಿತೆ ಕಾರಣ ದಿಂದಾಗಿ ಸ್ಥಗಿತಗೊಳಿಸಲಾಗಿತ್ತು. ಸರ್ಕಾರದ ನಿರ್ದೇಶನದ ನಂತರ ಪ್ರಕ್ರಿಯೆ ಆರಂಭವಾಗಲಿದೆ
ಕುಮುದಾ, ಉಪ ನಿರ್ದೇಶಕಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ

ಹೆಸರು ಸೇರ್ಪಡೆಗೆ ಪ್ರಯತ್ನ

‘ಗೃಹಲಕ್ಷ್ಮಿ’ ಯೋಜನೆಯಡಿ ಕುಟುಂಬದ ಯಜಮಾನಿಗೆ ತಿಂಗಳಿಗೆ ₹2 ಸಾವಿರ ಘೋಷಿಸಿರುವುದರಿಂದ ಪ್ರತಿ ಕುಟುಂಬದ ಮಹಿಳೆಯರೂ ಪ್ರತ್ಯೇಕ ಕಾರ್ಡ್‌ ಪಡೆಯಲು ಬಯಸಿದ್ದಾರೆ. ‘ಅನ್ನಭಾಗ್ಯ’ ಯೋಜನೆಯಡಿ ಕುಟುಂಬದ ಪ್ರತಿಯೊಬ್ಬರಿಗೆ 10 ಕೆ.ಜಿ. ಅಕ್ಕಿ ಘೋಷಿಸಿರುವುದರಿಂದ ಈಗಾಗಲೇ ಗಳಿಸಿರುವ ಕಾರ್ಡ್‌ನಲ್ಲಿ ಬಿಟ್ಟು ಹೋಗಿರುವವರ ಹೆಸರು ಸೇರ್ಪಡೆಗೆ ಪ್ರಯತ್ನ ನಡೆಯುತ್ತಿದೆ’ ಎಂದು ಸಾಮಾನ್ಯ ಸೇವಾ ಕೇಂದ್ರದ ಸಿಬ್ಬಂದಿ ತಿಳಿಸಿದರು.

‘ಬಿಪಿಎಲ್ ಪಡಿತರ ಚೀಟಿ ಪಡೆಯಲು ಆನ್‌ಲೈನ್‌ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬಹುದಾಗಿದೆ. ಜಾತಿ ಹಾಗೂ ಆದಾಯ ಪ್ರಮಾಣಪತ್ರವು ಮಹಿಳೆಯ ಹೆಸರಿನಲ್ಲಿ ಇರಬೇಕು ಹಾಗೂ ಉಳಿದ ಎಲ್ಲ ಸದಸ್ಯರ ಆಧಾರ್ ಕಾರ್ಡ್‌ ಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಹಲವರು ನಮ್ಮ ಕೇಂದ್ರಕ್ಕೆ ಬಂದು ವಿಚಾರಿಸುತ್ತಿದ್ದಾರೆ. ಆದರೆ ಪೋರ್ಟಲ್‌ ತೆರೆದಿಲ್ಲದಿರುವುದರಿಂದ ನಿರಾಸೆಯಿಂದ ವಾಪಸಾಗುತ್ತಿದ್ದಾರೆ’ ಎಂದು ರಾಘವೇಂದ್ರ ನಗರ ಸಾಮಾನ್ಯ ಸೇವಾ ಕೇಂದ್ರದ ಕಿರಣ್‌ ಪ್ರತಿಕ್ರಿಯಿಸಿದರು.

‘ದಾಖಲೆ ಸಲ್ಲಿಸಿದಾಕ್ಷಣ ಬಿಪಿಎಲ್‌ ಕಾರ್ಡ್‌ ಸುಲಭವಾಗಿ ಸಿಗುವುದಿಲ್ಲ. ಹಲವು ಮಾನದಂಡಗಳಿವೆ. ಇಲಾಖೆಯವರು ಪರಿಶೀಲನೆ ನಡೆಸಿದ ಬಳಿಕವಷ್ಟೇ ಪ್ರಕ್ರಿಯೆ ನಡೆಯುತ್ತದೆ. ಅರ್ಹರಿಗೆ ಕಾರ್ಡ್‌ ಸಿಗಲು 2–3 ತಿಂಗಳುಗಳಾದರೂ ಬೇಕಾಗುತ್ತದೆ. ಎಲ್ಲದಕ್ಕೂ ಮಿಗಿಲಾಗಿ ಅರ್ಜಿ ಸಲ್ಲಿಕೆಯ ಪೋರ್ಟಲ್‌ ತೆರೆಯಬೇಕಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.