ಮೈಸೂರು: ‘ಕಲೆ ಮತ್ತು ಸಾಹಿತ್ಯ ಮನಸ್ಸನ್ನು ಸಂತಸಗೊಳಿಸುವುದಲ್ಲದೇ ಬದುಕನ್ನು ಅರ್ಥಪೂರ್ಣವಾಗಿ ಸಾಗಿಸಲು ಸಹಕರಿಸುತ್ತದೆ’ ಎಂದು ದೃಶ್ಯ ಕಲಾವಿದ ಶ್ರೀದರ್ಶನ್ ಭಾಸ್ಕರ್ ಮಲ್ವಾಂಕರ್ ಹೇಳಿದರು.
ಮಹಿಳೆ ಮತ್ತು ಮಕ್ಕಳ ರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ರಾಣಿ ಕೆಂಪನಂಜಮ್ಮಣ್ಣಿ ಅಮ್ಮನವರ ಉದ್ಯಾನದಲ್ಲಿ ಇಂಗ್ಲಿಷ್ ವಿಭಾಗದಿಂದ ಬುಧವಾರ ಆಯೋಜಿಸಿದ್ದ ಭಿತ್ತಿಪತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
‘ವಿಜ್ಞಾನ ಓದಿನ ಜತೆಗೆ ಕಲೆ ಮತ್ತು ಸಾಹಿತ್ಯ ಅಭ್ಯಾಸ ಬದುಕನ್ನು ರೂಪಿಸಲು ಅನುವು ಮಾಡಿಕೊಡಲಿದ್ದು, ಅದರ ಕಡೆಗೂ ಗಮನಹರಿಸಿ. ಕೃತಕ ಬುದ್ಧಿಮತ್ತೆ ಆಳುತ್ತಿರುವ ಈ ದಿನಗಳಲ್ಲಿ ಆಧುನಿಕ ತಾಂತ್ರಿಕ ಕೌಶಲ ಕಲಿಕೆ ಉದ್ಯೋಗ ಒದಗಿಸಲಿದೆ’ ಎಂದು ಸಲಹೆ ನೀಡಿದರು.
ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿ, ‘ಬದುಕಿನ ಹಾದಿ ಕಂಡುಕೊಳ್ಳುವಲ್ಲಿ ಕ್ರಿಯಾಶೀಲತೆ ಬಹುಮುಖ್ಯ ಪಾತ್ರ ವಹಿಸಲಿದೆ’ ಎಂದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗೋವಿಂದರಾಜು, ‘ಭಿತ್ತಿಪತ್ರ ರಚನೆ ಕೇವಲ ಶೈಕ್ಷಣಿಕ ಅಗತ್ಯ ಪ್ರಕ್ರಿಯೆ ಮಾತ್ರ ಆಗದೆ, ಉದ್ಯೋಗ ಮತ್ತು ಬದುಕಿನ ಮಾರ್ಗವಾಗಿಯೂ ಮಾಡಿಕೊಳ್ಳಲು ಸಾಧ್ಯ’ ಎಂದರು.
ದ್ವಿತೀಯ ಬಿಎಸ್‌ಸಿ ಪದವಿ ತರಗತಿಯ ಸುಮಾರು 165 ವಿದ್ಯಾರ್ಥಿಗಳು ಸಮಾಜಮುಖಿ, ಮಹಿಳಾ ಅಭ್ಯುದಯ ಕೇಂದ್ರಿತ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ರಕ್ತದಾನ, ಕೃತಕ ಬುದ್ಧಿಮತ್ತೆ, ನಿಧಾನವೇ ಪ್ರಧಾನ, ಆಹಾರ ವಿಜ್ಞಾನ, ಮಕ್ಕಳ ಸುರಕ್ಷತೆ, ಪ್ಲಾಸ್ಟಿಕ್ ಬಳಕೆ ನಿಷೇಧ, ಭೂಮಂಡಲ ರಕ್ಷಣೆ, ಡ್ರಗ್ಸ್ ನಿಷೇಧ, ಹವಾಮಾನ ವೈಪರೀತ್ಯ, ಆರೋಗ್ಯ ರಕ್ಷಣೆ, ಮಾನವ ಅಂಗಾಂಗ ದಾನ, ಹೆಣ್ಣುಮಕ್ಕಳ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆಯೂ ಬೆಳಕು ಚೆಲ್ಲಲಾಯಿತು.
ಎಚ್.ಎಸ್.ಪರಶಿವಮೂರ್ತಿ ಮತ್ತು ಎನ್.ಶೋಭಲತಾ ತೀರ್ಪುಗಾರರಾಗಿದ್ದರು. ರಾಮಚಂದ್ರ, ಎನ್ಎಸ್ಎಸ್ ಅಧಿಕಾರಿ ಲಕ್ಷ್ಮಣ ಬಿ, ನಂಜುಂಡಸ್ವಾಮಿ, ಅಧ್ಯಾಪಕರಾದ ರಂಗನಾಥ ಎಚ್.ಎಸ್, ದಿನೇಶ ಎಚ್.ಆರ್, ಮಂಜುನಾಥ ಕೆ.ಎಂ, ಲೋಕೇಶ್ ಟಿ.ವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.