ADVERTISEMENT

ಮಾರುಕಟ್ಟೆ–ಗ್ರಾಹಕರಿಗೆ ಎಐ ಸಹಾಯಸೇತು: ಛಾಯನ್‌ ಗುಪ್ತ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 6:06 IST
Last Updated 24 ಜನವರಿ 2026, 6:06 IST
ಮೈಸೂರಿನ ಎಸ್‌ಡಿಎಂ–ಐಎಂಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಚಾರಸಂಕಿರಣವನ್ನು ಅವಿವಾ ಇಂಡಿಯಾದ ಬ್ಯಾಂಕ್‌ ಅಶ್ಯೂರನ್ಸ್‌ನ ನ್ಯಾಷನಲ್‌ ಹೆಡ್‌ ಛಾಯನ್‌ ಗುಪ್ತ ಉದ್ಘಾಟಿಸಿದರು
ಮೈಸೂರಿನ ಎಸ್‌ಡಿಎಂ–ಐಎಂಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಚಾರಸಂಕಿರಣವನ್ನು ಅವಿವಾ ಇಂಡಿಯಾದ ಬ್ಯಾಂಕ್‌ ಅಶ್ಯೂರನ್ಸ್‌ನ ನ್ಯಾಷನಲ್‌ ಹೆಡ್‌ ಛಾಯನ್‌ ಗುಪ್ತ ಉದ್ಘಾಟಿಸಿದರು   

ಮೈಸೂರು: ‘ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಮಾರುಕಟ್ಟೆ ಮತ್ತು ಗ್ರಾಹಕರ ನಡುವಿನ ಸಹಾಯಸೇತು ಆಗಬಲ್ಲದು’ ಎಂದು ಅವಿವಾ ಇಂಡಿಯಾದ ಬ್ಯಾಂಕ್‌ ಅಶ್ಯೂರನ್ಸ್‌ನ ನ್ಯಾಷನಲ್‌ ಹೆಡ್‌ ಛಾಯನ್‌ ಗುಪ್ತ ಹೇಳಿದರು.

ಇಲ್ಲಿನ ಚಾಮುಂಡಿಬೆಟ್ಟ ರಸ್ತೆಯ ಎಸ್‌ಡಿಎಂ ಮ್ಯಾನೇಜ್‌ಮೆಂಟ್‌ ಸಂಸ್ಥೆ (ಎಸ್‌ಡಿಎಂ–ಐಎಂಡಿ)
ಯಲ್ಲಿ ‘ಮಾರುಕಟ್ಟೆಯಲ್ಲಿ ತಂತ್ರಜ್ಞಾನ ಮತ್ತು ರೂಪಾಂತರ: ಸುಧಾರಣೆ ಉದ್ದೇಶ, ಕಾರ್ಯಕ್ಷಮತೆ ಮತ್ತು ಪರಿಣಾಮಕ್ಕಾಗಿ ವೈಯಕ್ತಿಕಗೊಳಿಸುವಿಕೆ’ ಕುರಿತು ಶುಕ್ರವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

‘ಭಾರತೀಯ ಬ್ಯಾಂಕಿಂಗ್‌ ಇಂದು ಪ್ರಸ್ತುತ ಗಮನಾರ್ಹವಾದ ಡಿಜಿಟಲ್‌ ಸ್ಥಿತ್ಯಂತರಕ್ಕೆ ಸಾಕ್ಷಿಯಾಗಿದೆ. ದೇಶದಲ್ಲಿ ಪ್ರಸ್ತುತ ನಿತ್ಯ ಏಳು ಲಕ್ಷದಷ್ಟು ಡಿಜಿಟಲ್‌ ವಹಿವಾಟುಗಳು ನಡೆಯುತ್ತಿವೆ. ಇದು ಅದ್ಭುತ ಎನಿಸಿದರೂ ರಾಷ್ಟ್ರದ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದಾಗ ಈ ವಹಿವಾಟಿನ ಸಂಖ್ಯೆ ಅತ್ಯಲ್ಪ ಎನಿಸುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ಹೊಸ ಆಯಾಮ:

‘ಪ್ರಸ್ತುತ ಹೆಚ್ಚಿನ ಬ್ಯಾಂಕಿಂಗ್‌ ವಹಿವಾಟುಗಳು ಆನ್‌ಲೈನ್‌ನಲ್ಲಿ ನಡೆಯುತ್ತಿದ್ದು, ಗ್ರಾಹಕರೊಂದಿಗೆ ನೇರವಾಗಿ ಒಡನಾಡುವ ಅವಕಾಶಗಳು ಕಡಿಮೆಯಾಗಿವೆ. ಆದಾಗ್ಯೂ, ಜನರೇಟಿವ್‌ ಎಐನಂತಹ ತಂತ್ರಜ್ಞಾನಗಳು ಈ ಅಂತರವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತಿವೆ. ಜೊತೆಗೆ, ಗ್ರಾಹಕರ ಅಗತ್ಯತೆಗಳನ್ನು ಆಳವಾಗಿ ಅರ್ಥೈಸಿಕೊಳ್ಳುವ ಅವಕಾಶ ಕಲ್ಪಿಸಿವೆ’ ಎಂದರು.

‘ಇಂದಿನ ಗ್ರಾಹಕರ ಅಗತ್ಯಗಳು, ನಿರೀಕ್ಷೆಗಳು ನಿರಂತರವಾಗಿ ಬದಲಾಗುತ್ತಲೇ ಇದ್ದು, ಇದು ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಹೊಸ ಬಗೆಯ ಸವಾಲಾಗಿದೆ. ಆದರೆ, ತಂತ್ರಜ್ಞಾನದ ಸಹಾಯದೊಂದಿಗೆ ಡೇಟಾ ಸೆಟ್‌ಗಳ ಆಧಾರದಲ್ಲಿ ಗ್ರಾಹಕರ ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡು ಪೂರಕ ಸೇವೆಗಳನ್ನು ಸಲ್ಲಿಸಬಹುದಾಗಿದೆ’ ಎಂದು ತಿಳಿಸಿದರು.

ಮುನ್ನೆಚ್ಚರಿಕೆ ಕ್ರಮ: 

‘ಮಾಹಿತಿ ಕಳವು ಮತ್ತು ಡಿಜಿಟಲ್‌ ವಂಚನೆಗಳಂತಹ ವಿಷಯದಲ್ಲಿ, ಗ್ರಾಹಕರ ರಕ್ಷಣೆಗಾಗಿ ಬ್ಯಾಂಕ್‌ಗಳು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿವೆ. ಜನರೂ ಆರ್ಥಿಕ ಶಿಸ್ತು ಮತ್ತು ಅರಿವನ್ನು ಹೊಂದುವುದೂ ಮುಖ್ಯವಾಗುತ್ತದೆ’ ಎಂದು ಹೇಳಿದರು.

‘ಭಾರತಲ್ಲಿ ಶೇ 6ರಷ್ಟು ಜನರು ಮಾತ್ರವೇ ವಿಮಾ ಸೌಲಭ್ಯ ಹೊಂದಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರವು, 2047ರ ವೇಳೆಗೆ ಪ್ರತಿ ಭಾರತೀಯನೂ ಬ್ಯಾಂಕ್‌ ಖಾತೆ ಹಾಗೂ ವಿಮೆ ಹೊಂದುವಂತೆ ಮಾಡುವ ಗುರಿ ಇಟ್ಟುಕೊಂಡಿದೆ’ ಎಂದರು.

ಅಡ್ಡಿಯಾದೀತು: 

ಐಸೋಕ್ರಾಟ್ಸ್‌ ಐಎನ್‌ಸಿಯ ಕಂಟ್ರಿ ಹೆಡ್‌ ಅಶ್ವಿನಿ ತಮ್ಮಯ್ಯ, ‘ಶೇ 80ರಷ್ಟು ಮಾರುಕಟ್ಟೆ ಪರಿಣತರು ಸೂಕ್ತ ಹಾಗೂ ತಕ್ಷಣಕ್ಕೆ ಕಾರ್ಯತತ್ಪರ ಆಗಬಹುದಾದ ಡೇಟಾಗಳ (ದತ್ತಾಂಶ) ಕೊರತೆಯನ್ನು ಎದುರಿಸುತ್ತಿದ್ದಾರೆ. ಇದು ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಡ್ಡಿ ಉಂಟು ಮಾಡಬಹುದು’ ಎಂದು ಅಭಿಪ್ರಾಯಪಟ್ಟರು.

ಎಸ್‌ಡಿಎಂ–ಐಎಂಡಿ ಡೀನ್‌ ಮೊಹಮ್ಮದ್‌ ಮಿನ್ಹಾಜ್‌, ‘ತಂತ್ರಜ್ಞಾನವು ಈಗ ಎಲ್ಲ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದ್ದು, ಎಐ ಅದೆಲ್ಲದರ ಕೇಂದ್ರಸ್ಥಾನದಲ್ಲಿದೆ’ ಎಂದರು.

ಮಾರುಕಟ್ಟೆ ವಿಭಾಗದ ಸಹ ಪ್ರಾಧ್ಯಾಪಕಿ ಕೀರ್ತನ್‌ ರಾಜ್‌, ತಾಂತ್ರಿಕ ವಿಚಾರಗೋಷ್ಠಿಯಲ್ಲಿ ಟಿಟಿಕೆ ಪ್ರೆಸ್ಟೀಜ್‌ ಇಂಡಿಯಾದ ಇ-ಕಾಮರ್ಸ್‌ ವಿಭಾಗದ ಹೆಡ್‌ ಪವನ್‌ಕುಮಾರ್‌ ರಸ್ತೋಗಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ಲಿಮಿಟೆಡ್‌ ಆರ್‌ಒಕೆ ಮತ್ತು ಗೋವಾ ವಿಭಾಗದ ಉಪಾಧ್ಯಕ್ಷ ಗಗನ್‌ ರಂಕಾ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.