ಆರ್. ಆಶೋಕ, ಸಿದ್ದರಾಮಯ್ಯ
ಪ್ರಜಾವಾಣಿ ಚಿತ್ರ
ಮೈಸೂರು: ‘ದಸರಾ ಉದ್ಘಾಟನೆಗೆ ಆಯ್ಕೆ ಮಾಡಲು ಆರು ಕೋಟಿ ಹಿಂದೂಗಳಲ್ಲಿ ಒಬ್ಬ ಸಾಧಕ ಸಿಗುವುದಿಲ್ಲವೇ? ಕನ್ನಡಕ್ಕೆ ಅಗೌರವ ತೋರಿದವರನ್ನೇ ಕರೆಯಬೇಕಿತ್ತಾ?’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ ಕೇಳಿದರು.
ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ದಸರೆಗೆ ದೊಡ್ಡ ಸಂಪ್ರದಾಯವಿದೆ. ಇಲ್ಲಿಗೆ ಬರುವವರು ಚಾಮುಂಡೇಶ್ವರಿ ಪೂಜಿಸುತ್ತಾರೆ. ಆ ತಾಯಿಗೆ ಬಗ್ಗೆ ನನಗೆ ಭಕ್ತಿ ಇದೆ ಎಂದು ಬಾನು ಮುಷ್ತಾಕ್ ಒಪ್ಪಿಕೊಳ್ಳಬೇಕು’ ಎಂದರು.
‘ಕನ್ನಡವನ್ನು ಭುವನೇಶ್ವರಿ ಮಾಡಿದ್ದೀರಿ, ಅರಿಸಿನ–ಕುಂಕುಮ ಬಣ್ಣದ ಧ್ವಜ ಮಾಡಿದ್ದೀರಿ, ನಾನು ಭುವನೇಶ್ವರಿ ಒಪ್ಪಿಕೊಳ್ಳುವುದಿಲ್ಲ ಎಂದು ಬಾನು ಹೇಳಿದ್ದರು. ಭುವನೇಶ್ವರಿಯನ್ನೇ ಒಪ್ಪದಿದ್ದ ಮೇಲೆ ಚಾಮುಂಡೇಶ್ವರಿಯನ್ನು ಹೇಗೆ ಒಪ್ಪುತ್ತಾರೆ? ಅವರು ಕನ್ನಡ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಮೊದಲು ಕನ್ನಡಿಗರ ಕ್ಷಮೆ ಕೇಳಬೇಕು. ನಂತರ ದಸರಾ ಉದ್ಘಾಟನೆ ಬಗ್ಗೆ ನೋಡೋಣ’ ಎಂದು ಹೇಳಿದರು.
‘ಚಾಮುಂಡೇಶ್ವರಿ ದೇವಾಲಯ ಹಿಂದೂಗಳದ್ದಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಹಿಂದೂಗಳದ್ದಲ್ಲ ಎಂದರೆ ಮತ್ಯಾರದು? ಧೈರ್ಯವಿದ್ದರೆ ಮಸೀದಿ ಮುಂದೆ ನಿಂತು, ಇದು ಮುಸ್ಲಿಮರದ್ದಲ್ಲ ಎಂದು ಹೇಳಲಿ’ ಎಂದರು.
‘ಪದೇ ಪದೇ ಹಿಂದೂ ದೇವಾಲಯಗಳ ಮೇಲೆಯೇ ಗುರಿ ಇಡುತ್ತಿದ್ದೀರೇಕೆ? ಚುನಾವಣೆ ಬಂದಾಗ ಮತ ರಾಜಕಾರಣ ಮಾಡಿ. ಆಗ ಮುಸ್ಲಿಮರ ಮೂಗಿಗೆ ತುಪ್ಪ ಸುರಿಯಿರಿ. ಈಗೇಕೆ ಓಲೈಕೆ ರಾಜಕಾರಣ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು.
‘ಸೆ.1ರಂದು ಧರ್ಮಸ್ಥಳ ಚಲೋ ನಡೆಯಲಿದ್ದು, ಎಲ್ಲ ಹಿಂದೂಗಳೂ ಬರಬೇಕು. ಚಾಮುಂಡಿ ಬೆಟ್ಟದ ಬಗ್ಗೆ ಮಾತನಾಡುತ್ತಿದ್ದರೆ ಚಾಮುಂಡೇಶ್ವರಿ ಚಲೋ ಕೂಡ ಮಾಡುತ್ತೇವೆ. ಈ ದೇಗುಲವನ್ನು ಟೂಲ್‌ಕಿಟ್ ಆಗಿ ಬಳಸಿದರೆ ಹಿಂದೂಗಳು ಸಹಿಸುವುದಿಲ್ಲ. ಈ ತಾಯಿಯಿಂದಲೇ ಕಾಂಗ್ರೆಸ್ ಅವನತಿ ಪ್ರಾರಂಭವಾಗುತ್ತದೆ’ ಎಂದರು.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಸೀದಿ ಮುಂದೆ ಗಣೇಶ ಮೆರವಣಿಗೆಗೆ ಅವಕಾಶ ಕೊಡುತ್ತಿಲ್ಲ ಎಂದು ಹೇಳಿದ್ದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ, ‘ಗಣೇಶ ಮೂರ್ತಿಯನ್ನೇ ಮುಟ್ಟುಗೋಲು ಹಾಕಿಕೊಂಡು ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದ ಸರ್ಕಾರವಿದು. ಈಗ ಗಣೇಶೋತ್ಸವ ಮೆರವಣಿಗೆಗೆ ಅನುಮತಿ ಕೊಡುತ್ತಿಲ್ಲ. ಮಸೀದಿ ಮುಂದಿರುವ ರಸ್ತೆ ಮಾಡಿರುವುದು ಸರ್ಕಾರ. ಉದ್ದೇಶಪೂರ್ವಕವಾಗಿಯೇ ಅನುಮತಿ ನಿರಾಕರಿಸಲಾಗಿದೆ. ಇಬ್ಬರ ಮೇಲೆ ಎಫ್‌ಐಆರ್ ಆಗಿದೆ. ಇನ್ನೊಂದು ಗಲಭೆಗೆ ಸರ್ಕಾರವೇ ದಾರಿ ಮಾಡಿಕೊಡುತ್ತಿದೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.