ಮೈಸೂರು: ಇಲ್ಲಿನ ಅಶೋಕಪುರಂ ನಿಲ್ದಾಣಕ್ಕೆ ಸದ್ಯದಲ್ಲೇ ಇನ್ನಷ್ಟು ರೈಲುಗಳ ಸೇವೆ ವಿಸ್ತರಣೆ ಆಗಲಿದ್ದು, ಈ ನಿಲ್ದಾಣವನ್ನು ನಗರ ಕೇಂದ್ರ ನಿಲ್ದಾಣಕ್ಕೆ ಪರ್ಯಾಯವಾಗಿ ರೂಪಿಸಲು ನೈರುತ್ಯ ರೈಲ್ವೆ ಯೋಜಿಸಿದೆ.
ಅಶೋಕಪುರಂ ರೈಲು ನಿಲ್ದಾಣವನ್ನು ಎರಡು ವರ್ಷದ ಹಿಂದಷ್ಟೇ ನವೀಕರಿಸಿದ್ದು, 2023ರ ಏಪ್ರಿಲ್‌ನಿಂದ ನೂತನ ರೈಲು ನಿಲ್ದಾಣವು ಕಾರ್ಯಾರಂಭ ಮಾಡಿತ್ತು. ಅದರ ಬೆನ್ನಿಗೆ ಹಲವು ವಿಶೇಷ ರೈಲುಗಳನ್ನು ಮೈಸೂರು ನಿಲ್ದಾಣಕ್ಕೆ ಬದಲು ಈ ನಿಲ್ದಾಣದವರೆಗೆ ವಿಸ್ತರಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿತ್ತು. ಇದೀಗ ಕಾವೇರಿ ಎಕ್ಸ್‌ಪ್ರೆಸ್, ಮಾಲ್ಗುಡಿ ಸೂಪರ್‌ಫಾಸ್ಟ್, 4 ಮೆಮು, ಕೂಚುವೇಲಿ, ಕಾಚಿಗುಡ ಎಕ್ಸ್‌ಪ್ರೆಸ್ ರೈಲುಗಳನ್ನು ಅಶೋಕಪುರಂ ನಿಲ್ದಾಣದಲ್ಲೇ ತಂಗಲು ಇಲಾಖೆ ಯೋಜನೆ ರೂಪಿಸಿದೆ. ಜೊತೆಗೆ ಇಲ್ಲಿಂದಲೇ ಈ ರೈಲುಗಳು ತಮ್ಮ ಗುರಿಯತ್ತ ಸಂಚಾರ ಆರಂಭಿಸಲೂ ಯೋಜಿಸಲಾಗಿದೆ.
ಮೈಸೂರು ನಗರ ವ್ಯಾಪ್ತಿಯಲ್ಲಿ ಸದ್ಯ ಮೂರು ರೈಲು ನಿಲ್ದಾಣಗಳು ಇವೆ. ಇವುಗಳ ಪೈಕಿ ಚಾಮರಾಜಪುರಂ ನಿಲ್ದಾಣವು ತೀರ ಕಿರಿದಾಗಿದ್ದು, ಮೈಸೂರು–ಚಾಮರಾಜನಗರ ನಡುವಿನ ಪ್ಯಾಸೆಂಜರ್ ರೈಲುಗಳ ನಿಲುಗಡೆಗೆ ಸೀಮಿತವಾಗಿದೆ. ರೈಲು ಹಳಿಗಳ ಹೆಚ್ಚಳ ಸೇರಿದಂತೆ ಒಟ್ಟಾರೆ ಯಾರ್ಡ್ ವಿಸ್ತರಣೆಗೆ ಸ್ಥಳಾವಕಾಶದ ಕೊರತೆ ಇದೆ.
ಅಶೋಕಪುರಂ ನಿಲ್ದಾಣವು ಮೈಸೂರು ನಿಲ್ದಾಣದಿಂದ ಕೇವಲ 5.2 ಕಿ.ಮೀ. ದೂರದಲ್ಲಿದ್ದು, ಇದನ್ನು ನಗರದ 2ನೇ ಪ್ರಮುಖ ರೈಲ್ವೆ ಟರ್ಮಿನಲ್ ಆಗಿ ರೂಪಿಸಲಾಗುತ್ತಿದೆ. ಸದ್ಯ ಮೈಸೂರು ನಿಲ್ದಾಣದಲ್ಲಿ 6 ಮುಖ್ಯ ಪ್ಲಾಟ್‌ಫಾರ್ಮ್‌ಗಳಿದ್ದು, ಇದರೊಟ್ಟಿಗೆ ಅಶೋಕಪುರಂ ಟರ್ಮಿನಲ್‌ನ 6 ಪ್ಲಾಟ್‌ಫಾರ್ಮ್‌ಗಳನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ರೈಲುಗಳ ಕಾರ್ಯಾಚರಣೆಯನ್ನು ಭವಿಷ್ಯದಲ್ಲೂ ಸಮರ್ಪಕವಾಗಿ ನಿರ್ವಹಿಸಬಹುದು ಎನ್ನುವುದು ಇಲಾಖೆಯ ಅಂದಾಜು.
ಸ್ಥಳೀಯರಿಗೂ ಅನುಕೂಲ: ಅಶೋಕಪುರಂ ನಿಲ್ದಾಣವು ಕುವೆಂಪುನಗರ, ಜೆ.ಪಿ. ನಗರ, ವಿವೇಕಾನಂದ ನಗರ, ವಿದ್ಯಾರಣ್ಯಪುರಂ, ಅರವಿಂದ ನಗರ ಮೊದಲಾದ ಪ್ರದೇಶಗಳಿಗೆ ಹತ್ತಿರದಲ್ಲಿದೆ. ಇಲ್ಲಿಗೆ ರೈಲು ಸೇವೆಗಳ ವಿಸ್ತರಣೆ ಆದರೆ ಈ ಭಾಗದ ಜನರ ಓಡಾಟಕ್ಕೆ ಅನುಕೂಲ ಆಗಲಿದೆ. ನಗರ ನಿಲ್ದಾಣದ ಮೇಲಿನ ಒತ್ತಡವೂ ಕಡಿಮೆ ಆಗಲಿದೆ ಎಂದು ಆಶಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಚಾಮರಾಜನಗರ ಜಿಲ್ಲೆಯಿಂದ ಬರುವ ಹಾಗೂ ಅಲ್ಲಿಗೆ ತೆರಳುವ ಪ್ರಯಾಣಿಕರಿಗೂ ಇದರಿಂದ ಅನುಕೂಲ ಆಗಲಿದೆ.
ಮೈಸೂರು ನಿಲ್ದಾಣಕ್ಕೆ ಬರುವ ಎಲ್ಲ ರೈಲುಗಳನ್ನು ಅಶೋಕಪುರಂವರೆಗೆ ವಿಸ್ತರಿಸಬೇಕು. ಇದರಿಂದ ಒಂದೇ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಆಗಲಿದ್ದು ಪ್ರಯಾಣಿಕರಿಗೂ ಅನುಕೂಲ ಆಗಲಿದೆಪ್ರವೀಣ್, ರೈಲು ಪ್ರಯಾಣಿಕ
ಅಶೋಕಪುರಂ ನಿಲ್ದಾಣದಲ್ಲಿ ಏನೇನಿದೆ?
ಒಟ್ಟು ₹40 ಕೋಟಿಗೂ ಅಧಿಕ ವೆಚ್ಚದಲ್ಲಿ ಪುನರ್ ನಿರ್ಮಾಣವಾದ ಅಶೋಕಪುರಂ ರೈಲ್ವೆ ಯಾರ್ಡ್‌ನಲ್ಲಿ ಒಟ್ಟು 6 ಪ್ಲಾಟ್‌ಫಾರ್ಮ್‌ಗಳನ್ನು ಪುನರ್ ವಿನ್ಯಾಸಗೊಳಿಸಲಾಗಿದೆ. ಜೊತೆಗೆ 5 ಸಂಪರ್ಕ ಲೇನ್‌ಗಳು ಕೋಚ್‌ಗಳ ಸ್ವಚ್ಛತೆ–ನೀರು ಪೂರೈಕೆಗೆ ಪ್ರತ್ಯೇಕ ವ್ಯವಸ್ಥೆ ವರ್ಕ್‌ಶಾಪ್‌ಗೆಂದೇ ಎರಡು ಪ್ರತ್ಯೇಕ ಪಥಗಳನ್ನು ಮೀಸಲಿಡಲಾಗಿದೆ. ಪಂಪಾಪತಿ ರಸ್ತೆಯಿಂದ ಪ್ರತ್ಯೇಕ ಪ್ರವೇಶ ದ್ವಾರ ಹಾಗೂ ಟಿಕೆಟ್ ಕೌಂಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರ ವಾಹನಗಳ ನಿಲುಗಡೆಗೂ ಜಾಗವಿದೆ. ಮುಖ್ಯ ಪ್ರವೇಶದ್ವಾರದಿಂದ ಹಿಂಬದಿಯ ಪ್ರವೇಶದ್ವಾರದವರೆಗೆ ಕಾಲ್ನಡಿಗೆಯ ಮೇಲ್ಸೇತುವೆ ಕಟ್ಟಿದ್ದು ಒಂದರಿಂದ ಆರು ಪ್ಲಾಟ್‌ಫಾರ್ಮ್‌ವರೆಗಿನ ಓಡಾಟಕ್ಕೂ ಅನುಕೂಲ ಆಗಿದೆ. ಇಲ್ಲಿನ ಸೇವೆಗಳ ಬಗ್ಗೆ ಪ್ರಯಾಣಿಕರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.