ADVERTISEMENT

ಮೈಸೂರು: ಎಟಿಎಂನಲ್ಲಿ ₹12 ಲಕ್ಷ ಕಳವು

ಗ್ಯಾಸ್ ಕಟರ್, ಸಿಲಿಂಡರ್‌, ಹಾರೆಗಳನ್ನು ಮಳಿಗೆಯಲ್ಲೇ ಬಿಟ್ಟ ಕಳ್ಳರು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 3:48 IST
Last Updated 19 ಸೆಪ್ಟೆಂಬರ್ 2020, 3:48 IST

ಮೈಸೂರು: ಇಲ್ಲಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಎಚ್‌ಡಿಎಫ್‌ಸಿ ಬ್ಯಾಂಕಿನ ಎಟಿಎಂನಿಂದ ಕಳ್ಳರು ₹12 ಲಕ್ಷ ನಗದನ್ನು ದೋಚಿದ್ದಾರೆ.‌‌

ರಾಣಿ ಮದ್ರಾಸ್ ಫ್ಯಾಕ್ಟರಿ ಸಮೀಪ ಇರುವ ಈ ಎಟಿಎಂನಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಗುರುವಾರ ರಾತ್ರಿ ಕಳ್ಳರು ಎಟಿಎಂ ಶೆಟರ್‌ನ ಬೀಗ ಮುರಿದು, ಗ್ಯಾಸ್ ಕಟರ್ ಮೂಲಕ ಎಟಿಎಂನ ಭದ್ರತಾ ಬಾಗಿಲನ್ನು ಕೊರೆದು ಹಣವನ್ನೆಲ್ಲ ಕಳವು ಮಾಡಿದ್ದಾರೆ.

ಎಟಿಎಂನಲ್ಲಿದ್ದ ಎಲ್ಲ ಸಿಸಿಟಿವಿ ಕ್ಯಾಮೆರಾಗಳಿಗೆ ರಾಸಾಯನಿಕವನ್ನು ಸಿಂಪಡಿಸುವ ಮೂಲಕ ದೃಶ್ಯಾವಳಿಗಳನ್ನು ಮಸುಕುಗೊಳಿಸುವ ಪ್ರಯತ್ನವನ್ನು ಕಳ್ಳರು ನಡೆಸಿದ್ದಾರೆ. ಜತೆಗೆ, ಗ್ಯಾಸ್‌ ಕಟರ್, ವೆಲ್ಟಿಂಗ್ ಗ್ಯಾಸ್ ಸಿಲಿಂಡರ್, ಎಲ್‌ಪಿಜಿ ಸಿಲಿಂಡರ್ ಮತ್ತು 1 ಹಾರೆಯನ್ನು ಎಟಿಎಂ ಮಳಿಗೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ADVERTISEMENT

ಕಳ್ಳತನವನ್ನು ಗಮನಿಸಿದರೆ ಇವರು ವೃತ್ತಿಪರ ಕಳ್ಳರೇ ಇರಬಹುದು ಎಂಬ ಅನುಮಾನಗಳು ಮೂಡಿವೆ. ಸಾಕಷ್ಟು ಪೂರ್ವಸಿದ್ಧತೆ ನಡೆಸಿಯೇ ಕಳ್ಳರು ಕಳ್ಳತನಕ್ಕೆ ಕೈ ಹಾಕಿರುವುದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕನ ಮೃತದೇಹ ಪತ್ತೆ
ಮೈಸೂರು:
ಗೋಕರ್ಣದ ಮೇನ್ ಬೀಚ್‌ನಲ್ಲಿ ಗುರುವಾರ ನೀರು ಪಾಲಾಗಿದ್ದ ಇಲ್ಲಿನ ಕೆ.ಆರ್.ಮೊಹಲ್ಲಾದ ಬಾಲಕ ಜಿ.ವಿ. ಉಲ್ಲಾಸ (15) ಮೃತದೇಹವು ಶುಕ್ರವಾರ ಪತ್ತೆಯಾಯಿತು. ಇಲ್ಲಿಂದ ಪ್ರವಾಸಕ್ಕೆ ಹೊರಟಿದ್ದ 8 ಮಂದಿಯ ತಂಡದಲ್ಲಿದ್ದ ಇಬ್ಬರು ರಭಸದ ಅಲೆಯ ಹೊಡೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು. ಮತ್ತೊಬ್ಬ ಬಾಲಕ ಸುಹಾಸ (16) ಮೃತದೇಹವು ಗುರುವಾರ ಪತ್ತೆಯಾಗಿತ್ತು.

ಈ ಮಧ್ಯೆ ಇವರು ವಿದ್ಯಾಭ್ಯಾಸ ನಡೆಸುತ್ತಿದ್ದ ಬನ್ನೂರಿನ ವಿವೇಕಾನಂದ ವಿದ್ಯಾಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಪ್ರಕಾಶ್‌ ಪ್ರತಿಕ್ರಿಯಿಸಿದ್ದು, ‘ವಿದ್ಯಾರ್ಥಿಗಳನ್ನು ಲಾಕ್‌ಡೌನ್‌ ಸಮಯದಲ್ಲೇ ಅವರವರ ಮನೆಗೆ ಕಳುಹಿಸಲಾಗಿತ್ತು. ವಿದ್ಯಾರ್ಥಿಗಳು ಅವರ ಮನೆಯಿಂದಲೇ ಪ್ರವಾಸ ಹೊರಟಿದ್ದರು. ಪ್ರವಾಸಕ್ಕೂ ವಿದ್ಯಾಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ’ ಎಂದು ತಿಳಿಸಿದ್ದಾರೆ.

ಕೊಲೆ ಆರೋಪಿಗಳ ಬಂಧನ
ಮೈಸೂರು:
ತಿ.ನರಸೀಪುರ ತಾಲ್ಲೂಕಿನ ಕೇತುಪುರ ಗ್ರಾಮದಲ್ಲಿ ಸೆ.12ರ ರಾತ್ರಿ ನಡೆದ ಸಿದ್ಧರಾಜು ಎಂಬುವರ ಕೊಲೆ ಪ್ರಕರಣದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಆರ್.ಸುಭಾಷ್ (23), ಚಂದನ್ (22), ಸಂಜಯ್ (24), ಪುನೀತ್ (22), ವಿನಯ್ (30), ರವಿ (24), ಚಂದ್ರು (25) ಬಂಧಿತರು. ಇವರಿಂದ ಮಾರಕಾಸ್ತ್ರಗಳು, ಬೈಕ್‍ಗಳು, ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.