ADVERTISEMENT

ಸರ್ಕಾರದ ವಿರುದ್ಧ ಆಟೊ ಚಾಲಕರ ಆಕ್ರೋಶ

ಮೊಬೈಲ್‌ ಆ್ಯಪ್‌ ಆಧರಿತ ವೈಟ್‌ಬೋರ್ಡ್‌ ಟ್ಯಾಕ್ಸಿ ಸೇವೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 11:46 IST
Last Updated 20 ಮಾರ್ಚ್ 2023, 11:46 IST
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಮೀಪ ಸೋಮವಾರ ಆಟೊ ಚಾಲಕರು ಹಾಗೂ ಮಾಲೀಕರು, ಮೊಬೈಲ್‌ ಆ್ಯಪ್‌ ಆಧರಿತ ವೈಟ್‌ಬೋರ್ಡ್‌ ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪನಿಗಳಿಗೆ ಅವಕಾಶ ನೀಡಿರುವ ಸರ್ಕಾರದ ಕ್ರಮ ಖಂಡಿಸಿ ಕ‍ಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಮೀಪ ಸೋಮವಾರ ಆಟೊ ಚಾಲಕರು ಹಾಗೂ ಮಾಲೀಕರು, ಮೊಬೈಲ್‌ ಆ್ಯಪ್‌ ಆಧರಿತ ವೈಟ್‌ಬೋರ್ಡ್‌ ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪನಿಗಳಿಗೆ ಅವಕಾಶ ನೀಡಿರುವ ಸರ್ಕಾರದ ಕ್ರಮ ಖಂಡಿಸಿ ಕ‍ಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ   

ಮೈಸೂರು: ಮೊಬೈಲ್‌ ಆ್ಯಪ್‌ ಆಧರಿತ ವೈಟ್‌ಬೋರ್ಡ್‌ ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪನಿಗಳಿಗೆ ಅವಕಾಶ ನೀಡಿರುವ ಸರ್ಕಾರದ ಕ್ರಮ ಖಂಡಿಸಿ ಆಟೊ ಚಾಲಕರು ಹಾಗೂ ಮಾಲೀಕರು ಸೋಮವಾರ ಕಪ್ಪು ಬಾವುಟಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪ ಆಟೊಗಳೊಂದಿಗೆ ಜಮಾಯಿಸಿದ ಪ್ರತಿಭಟನಕಾರರು, ‘ಬಿಜೆಪಿ ಸರ್ಕಾರ ಬಂಡವಾಳಶಾಹಿ ಪರವಾಗಿದೆ. ಬಡವರು, ಅಸಂಘಟಿತ ವಲಯದ ಕಾರ್ಮಿಕರ ವಿರುದ್ಧವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಆಟೊ ಚಾಲಕರು ಮತ್ತು ಮಾಲೀಕರ ವಿವಿಧೋದ್ದೇಶ ಸಹಕಾರ ಸಂಘ ಅಧ್ಯಕ್ಷ ಎಂ.ಲಕ್ಷ್ಮಿನಾರಾಯಣ, ‘ ಟ್ಯಾಕ್ಸಿ ಸೇವೆಯನ್ನು ಆ್ಯಪ್‌ ಮೂಲಕ ಅಕ್ರಮ ನೀಡುತ್ತಿರುವ ಕಂಪನಿಗಳಿಗೆ ಅನುಮತಿ ನೀಡದಂತೆ ಕಳೆದ ಮೂರು ವರ್ಷದಿಂದ ನಿರಂತರ ಹೋರಾಟ ನಡೆಸಿದರೂ ಸರ್ಕಾರದ ಕಿವಿ ಕೇಳಿಸುತ್ತಿಲ್ಲ. ಈ ಮೂಲಕ ಬಂಡವಾಳಶಾಹಿ ಪರವೆಂದು ಸಾಬೀತು ಮಾಡಿದೆ’ ಎಂದು ಕಿಡಿಕಾರಿದರು.

ADVERTISEMENT

‘ಬೆಂಗಳೂರಿನಲ್ಲಿ ಆಟೊ ಚಾಲಕರು ಹೋರಾಟದಲ್ಲಿ ತೊಡಗಿದ್ದರೂ ಸಾರಿಗೆ ಸಚಿವ ಶ್ರೀರಾಮುಲು ಕ್ರಮ ವಹಿಸದೇ ಮೌಖಿಕ ಆದೇಶ ನೀಡಿದ್ದಾರೆ. ಅದರಿಂದ ಯಾವ ಪ್ರಯೋಜನವಿಲ್ಲ. ಕೆಎಸ್‌ಆರ್‌ಟಿಸಿ ನೌಕರರ ಪ್ರತಿಭಟನೆಗೆ ರಾತ್ರೋರಾತ್ರಿ ಎಚ್ಚೆತ್ತುಕೊಂಡು ಬೇಡಿಕೆ ಈಡೇರಿಸುವ ಸರ್ಕಾರಕ್ಕೆ ನಮ್ಮ ಸಂಕಷ್ಟ ಕೇಳುತ್ತಿಲ್ಲವೇಕೆ’ ಎಂದು ಪ್ರಶ್ನಿಸಿದರು.

‘ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯದ 7 ಲಕ್ಷ ಆಟೊ ಚಾಲಕರು ಹಾಗೂ ಕುಟುಂಬ ಬೀದಿಗಿಳಿದು ಕ್ರಾಂತಿ ನಡೆಸಬೇಕಾಗುತ್ತದೆ. ತೆರಿಗೆ, ವಿಮಾ ಶುಲ್ಕ ಸೇರಿದಂತೆ ಯಾವುದೇ ಮಾದರಿಯ ತೆರಿಗೆಯನ್ನು ಆಟೊ ಚಾಲಕರು ಇನ್ನು ಭರಿಸುವುದಿಲ್ಲ. ಕಾನೂನು ಉಲ್ಲಂಘಿಸಿ ಜೈಲಿಗೆ ಹೋಗಲೂ ಸಿದ್ಧ. ಸರ್ಕಾರ ನಿರ್ಲಕ್ಷ್ಯಕ್ಕೆ ಪ್ರತಿಯಾಗಿ ಮತದಾನವನ್ನೇ ಬಹಿಷ್ಕರಿಸುತ್ತೇವೆ’ ಎಂದು ಎಚ್ಚರಿಸಿದರು.

‘ಚಾಲಕರು ಪ್ರತಿಭಟಿಸಿದರೆ ದೌರ್ಜನ್ಯದ ಪ್ರಕರಣ ಹಾಕುತ್ತಿದ್ದೀರಿ. ಎಲ್ಲ ಸಂಘಟನೆಗಳನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ತಪ್ಪು ಮಾಡಿದೆ: ಮುಖಂಡ ಯೋಗೀಶ್‌ ಮಾತನಾಡಿ, ‘ಸರ್ಕಾರ ಬಂಡವಾಳಶಾಹಿಗಳ ಪರವಾಗಿದೆ. ಒಳಸಂಚಿನ ಮೂಲಕ ಜನರ ವಿರುದ್ಧವಾಗಿ ಎತ್ತಿಕಟ್ಟಲಾಗುತ್ತಿದೆ. ಡಬಲ್‌ ಎಂಜಿನ್‌ ಸರ್ಕಾರ ಗೆಲ್ಲಲಿ ಎಂದು ಆಟೊ ಚಾಲಕರು ಬಿಜೆಪಿಯ ಹಿಂದುತ್ವಕ್ಕೆ ಬೆಂಬಲವಾಗಿದ್ದರು. ಗ್ರಾಹಕರಿಗೆ ಪ್ರಚಾರ ಮಾಡಿದೆವು. ಪ್ರಾದೇಶಿಕ ಪಕ್ಷಗಳನ್ನು ಬಿಟ್ಟು ಬಿಜೆಪಿಗೆ ಮತ ಹಾಕಿ ತಪ್ಪು ಮಾಡಿದೆ’ ಎಂದರು.

ಮುಖಂಡರಾದ ಸೋಮನಾಯಕ, ಮಂಜುನಾಥ್, ವಸಂತ್ ಕುಮಾರ್, ರವಿ, ಸಾಯಿಬಾಬಾ ನಾಗರಾಜ, ದೊಡ್ಡದೇವಪ್ಪ, ಕೆಂಪರಾಜೇಅರಸು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.