ಮೈಸೂರು: ಮರಾಠಿ ಅನುವಾದಕಿ, ಲೇಖಕಿ ಮಹಾರಾಷ್ಟ್ರದ ಪುಣೆಯ ಉಮಾ ಕುಲಕರ್ಣಿ ಅವರನ್ನು 2025ನೇ ಸಾಲಿನ ‘ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’ಗೆ ಆಯ್ಕೆ ಮಾಡಲಗಿದೆ.
ಇಲ್ಲಿನ ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನದಿಂದ ನೀಡುವ ಈ ಪ್ರಶಸ್ತಿಯನ್ನು ಜ. 19ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಪ್ರದಾನ ಮಾಡಲಿದ್ದಾರೆ. ಉಮಾ ಕುಲಕರ್ಣಿ ಅವರ ಸಾಹಿತ್ಯ ಕೊಡುಗೆಗಳ ಕುರಿತು ಸಹನಾ ವಿಜಯಕುಮಾರ್, ಉಮಾ ರಾಮರಾವ್ ಹಾಗೂ ಅಂಜಲಿ ಜೋಶಿ ಮಾತನಾಡಲಿದ್ದಾರೆ.
ಪ್ರಶಸ್ತಿಯು ₹ 1 ಲಕ್ಷ ಚೆಕ್ ಮತ್ತು ಭೈರಪ್ಪ ಅವರ ಸಹಿಯುಳ್ಳ ಪ್ರಶಸ್ತಿಪತ್ರವನ್ನು ಹೊಂದಿದೆ. ಭೈರಪ್ಪನವರ ಕನ್ನಡದ ಕೃತಿಗಳನ್ನು ಉಮಾ ಅವರು ಮರಾಠಿಗೆ ಅನುವಾದಿಸಿದ್ದಾರೆ. ಬೆಳಗಾವಿಯಲ್ಲಿ ಜನಿಸಿದ ಅವರು, ವಿವಾಹದ ನಂತರ ಪುಣೆಯಲ್ಲಿ ವಾಸವಾಗಿದ್ದಾರೆ. 55 ಕೃತಿಗಳನ್ನು ಭಾಷಾಂತರಿಸಿದ್ದಾರೆ. ಚಿತ್ರಕಲೆಯ ಹವ್ಯಾಸವೂ ಅವರಿಗಿದೆ. ದೇಶದ ಹಲವೆಡೆ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಲ್. ಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.