
ಮೈಸೂರು: ‘ಸವಲತ್ತು ಪಡೆಯಲು, ಆರ್ಥಿಕವಾಗಿ ಪ್ರಗತಿ ಸಾಧಿಸಲು ಹಿಂದುಳಿದ ವರ್ಗದ ಸಮುದಾಯಗಳು ಒಗ್ಗೂಡಬೇಕಿದೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದರು.
ಇಲ್ಲಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಮೈಸೂರು ಜಿಲ್ಲಾ ಗಾಣಿಗರ ಸಂಘವು ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವೃತ್ತಿ ಮೂಲಕ ಗುರುತಿಸಿಕೊಂಡ ಸಮುದಾಯಗಳಲ್ಲಿ ಗಾಣಿಗ ಸಮುದಾಯವೂ ಒಂದು. ಪ್ರಧಾನಿ ನರೇಂದ್ರ ಮೋದಿ ಸಹ ಇದೇ ಸಮುದಾಯದವರು ಎಂಬುದು ಹೆಮ್ಮೆಯ ವಿಚಾರ. ದೇಶದ ಇತಿಹಾಸ ನಿರ್ಮಾಣದಲ್ಲಿ ಈ ಸಮುದಾಯವು ಪ್ರಮುಖ ಪಾತ್ರ ವಹಿಸಿದೆ’ ಎಂದು ಶ್ಲಾಘಿಸಿದರು.
‘ಈ ಹಿಂದೆ ಎಣ್ಣೆ ಉತ್ಪಾದನೆ ಮೂಲಕ ಸಮುದಾಯದ ಸಂಘಟನೆ ಆಗುತ್ತಿತ್ತು. ಆದರೆ, ಇಂದು ದೊಡ್ಡ ಕಾರ್ಖಾನೆಗಳಲ್ಲಿ ಯಂತ್ರಗಳ ಮೂಲಕ ಎಣ್ಣೆ ಉತ್ಪಾದನೆ ಆಗುತ್ತಿರುವುದರಿಂದ ವ್ಯವಸ್ಥೆ ಬದಲಾವಣೆ ಆಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕು. ಹೊಸ ವ್ಯವಸ್ಥೆಗಳನ್ನು ಅವಳವಡಿಸಿಕೊಳ್ಳಿ, ಜೊತೆಗೆ ಪಾರಂಪರಿಕತೆಯನ್ನು ಉಳಿಸಿ’ ಎಂದು ಸಲಹೆ ನೀಡಿದರು.
ಒಗ್ಗಟ್ಟು ಅಗತ್ಯ:
‘ಗಾಣಿಗ ಸಮುದಾಯದಂತೆ ಅರಸು ಸಮುದಾಯವೂ ಒಬಿಸಿ ಪಟ್ಟಿಯಲ್ಲಿದೆ. ಆದರೆ, ಕಾರಣಾಂತರದಿಂದ ಸಂಘಟನೆ ಸಾಧ್ಯವಾಗಿಲ್ಲ. ಹಿಂದುಳಿದ ವರ್ಗಗಳು ರಾಜಕೀಯವಾಗಿ ಶಕ್ತಿ ಕಂಡುಕೊಳ್ಳಬೇಕಾದರೆ ಹೋರಾಟದ ಅಗತ್ಯವಿದೆ. ಸಮುದಾಯದ ಒಳಗೆ ಎಷ್ಟೇ ಒಡಕು ಇದ್ದರೂ ಒಟ್ಟಿಗೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಹೋರಾಟಗಳಿಗೆ ಧ್ವನಿಗೂಡಿಸಬೇಕು’ ಎಂದು ಸಲಹೆ ನೀಡಿದರು.
ಶಾಸಕ ಜಿ.ಟಿ.ದೇವೇಗೌಡ, ‘ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ. ವಿದ್ಯೆಯಿಂದ ಸಮುದಾಯಕ್ಕೆ ಒಳಿತಾಗಲಿದೆ. ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರೇ ಸಾಕ್ಷಿ’ ಎಂದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಎಂ. ಯೋಗೇಂದ್ರ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಹದೇವು ಮಾರ್ಬಳ್ಳಿ, ಸುಧೀಂದ್ರ, ಮುಡುಕುತೊರೆ ಗ್ರಾ.ಪಂ. ಅಧ್ಯಕ್ಷೆ ಪದ್ಮಾ ಸೋಮೇಶ್, ಕೆ.ಆರ್. ಆಸ್ಪತ್ರೆ ವೈದ್ಯಾಧಿಕಾರಿ ರಾಧಾಕೃಷ್ಣ ಹಾಗೂ ಕಿರಣ್ ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಎನ್.ಸಿ. ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್, ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ಎಂ.ಆರ್.ರಾಜಶೇಖರ್, ಮುಖಂಡರಾದ ಅಪ್ಪಣ್ಣ, ಮುನಿರಾಜು, ಎಂ.ಎಸ್. ಕುಮಾರ್ ಇದ್ದರು.
‘ಬಲಾಢ್ಯರ ಎದುರು ಒಗ್ಗಟ್ಟಾಗಿ’
ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ‘ಸಮಾಜದಲ್ಲಿ ಕೆಲವು ಬಲಾಢ್ಯ ಸಮುದಾಯಗಳು ಮಾತ್ರ ಅಭಿವೃದ್ಧಿಯಾಗಿದ್ದು ಇನ್ನೂ ಕೆಲವು ಹಿಂದುಳಿದಿವೆ. ಸಣ್ಣ ಜಾತಿಗಳಲ್ಲಿ ಒಡಕುಂಟು ಮಾಡಿ ಕೆಲವರು ಅನುಕೂಲ ಪಡೆದುಕೊಳ್ಳುತ್ತಾರೆ. ಹಿಂದುಳಿದ ಸಮುದಾಯಗಳಲ್ಲಿ ಒಗ್ಗಟ್ಟು ಅವಶ್ಯವಾಗಿದೆ’ ಎಂದರು. ‘ಹಿಂದುಳಿದ ವರ್ಗಗಳ ಸ್ಥಿತಿಗತಿ ತಿಳಿಯಲೆಂದೇ ಸರ್ಕಾರ ಸಮೀಕ್ಷೆ ನಡೆಸಿದ್ದು ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು. ಮತ್ತೆ ಸಮೀಕ್ಷೆ ನಡೆದಾಗ ತಪ್ಪದೇ ಪಾಲ್ಗೊಂಡು ಮಾಹಿತಿ ದಾಖಲಿಸಿ’ ಎಂದು ಸಲಹೆ ನೀಡಿದರು. ‘ಸಮುದಾಯಕ್ಕಾಗಿ ವರುಣದಲ್ಲಿ ಒಂದು ಎಕರೆ ಜಾಗ ನೀಡಲಾಗುವುದು. ಸಮುದಾಯ ಭವನ ನಿರ್ಮಿಸಿದರೆ ಸರ್ಕಾರದಿಂದ ಅಗತ್ಯ ನೆರವು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.