
ಮೈಸೂರು: ‘ಮಳವಳ್ಳಿಯ ರಾಜಾ ಮತ್ತು ತಂಡದವರು ‘ಚಿಲಿಪಿಲಿ ಗೊಂಬೆಕುಣಿತ’ವು ಸೆಳೆದರೆ, ಅರಸೀಕೆರೆಯ ಕುಮಾರಯ್ಯ ಮತ್ತು ತಂಡದವರ ‘ಅರೆವಾದ್ಯ’ ಹೆಜ್ಜೆ ಹಾಕಿಸಿತು. ಯದುಕುಮಾರ್ ಮತ್ತು ತಂಡದವರ ಸ್ಯಾಕ್ಸೋಫೋನ್ ವಾದನ ಮತ್ತು ಮಂಗಳವಾದ್ಯ ಕಿವಿದುಂಬಿತ್ತು.
ಇಲ್ಲಿನ ರಂಗಾಯಣದಲ್ಲಿ ಸೋಮವಾರ ‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಗೆ ಬಂದವರು, ಹೋರಾಟಕ್ಕೂ ಕೈ ಜೋಡಿಸಿ ‘ಅಂಬೇಡ್ಕರ್ ಮಾರ್ಗ’ ಇದೆ ಎಂದು ಹೇಳಿದರು.
‘ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ದ ಜೊತೆ ವಿವಿಧ ಪ್ರಗತಿಪರ ಸಂಘಟನೆಗಳು, ರಂಗಾಯಣ ಕಲಾವಿದರು ಸಮಾಜದಲ್ಲಿನ ಹಿಂಸೆ, ಕ್ರೌರ್ಯ, ಅಸಮಾನತೆಯನ್ನು ಅಳಿಸಲು ಮಾನವ ಸರಪಳಿ ರಚಿಸಿದರು.
ಇಷ್ಟೆಲ್ಲ ನೋಡಿದ ಸಹೃದಯರು ಅಂಗಳ ಪ್ರವೇಶಿಸುತ್ತಿದ್ದಂತೆ ಕಲಾವಿದರಾದ ಅನನ್ಯಾ, ಡಿ.ಪೃಥ್ವಿ, ಎಲೈನ್ ಮಾರ್ಟಿನ್, ಸುಚಿತ್ರಾ, ಸ್ಮೃದುಲ್, ದಿನೇಶ್, ಯೋಗಾನಂದ, ಶಿವರಂಜನ್, ಫಾಸ್ಟಿನ್, ಬಣ್ಣಗಳಲ್ಲಿ ‘ಭೀಮಯಾನ’ ತೆರೆದಿಟ್ಟಿದ್ದರು.
ಕುಡಿಯುವ ನೀರಿಗಾಗಿ ನಡೆಸಿದ ಮಹಡ್ ಸತ್ಯಾಗ್ರಹ, ಮನುಸ್ಮೃತಿ ದಹನ, ದುಂಡುಮೇಜಿನ ಸಭೆ, ಬೌದ್ಧ ಧರ್ಮದ ಸ್ವೀಕಾರ ಸೇರಿದಂತೆ ಅಂಬೇಡ್ಕರ್ ಅವರ ಜೀವನ ಅಲ್ಲಿ ದಾಖಲಾಗಿತ್ತು.
ಯೋಗಾನಂದ ಅವರ ಕಲಾಕೃತಿ ‘ಬದುಕು ಒಡೆದ ಕನ್ನಡಿಯಾಗಿದ್ದರೆ, ಅಂಬೇಡ್ಕರ್ ಬೆಳಕಾಗಿ ದಾರಿ ತೋರುತ್ತಾರೆ’ ಎಂಬ ಸಂದೇಶ ಸಾರಿತು. ಬಿ.ವಿ.ಕಾರಂತ ರಂಗಚಾವಡಿಯಲ್ಲಿನ ‘ಬಾಬಾ ಸಾಹೇಬ್’ ಛಾಯಾಚಿತ್ರ ಪ್ರದರ್ಶನವು ಇತಿಹಾಸದ ಪ್ರಮುಖ ಘಟ್ಟಗಳನ್ನು ಪರಿಚಯಿಸಿತು.
ಸಂಗಮ ಸ್ಥಾನ: ವನರಂಗದಲ್ಲಿ ನಾಟಕೋತ್ಸವ ಉದ್ಘಾಟಿಸಿದ ಮಣಿಪುರದ ರಂಗಕರ್ಮಿ ಹೈಸ್ನಾಂ ಸಾವಿತ್ರಿ ದೇವಿ, ‘ರಂಗೋತ್ಸವಗಳು ದೇಶದ ಎಲ್ಲ ಕಲಾವಿದರನ್ನು ಬೆಸೆಯುವ ಸಂಗಮ ಸ್ಥಾನ’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಮಾತನಾಡಿ, ‘ಸಂವಿಧಾನವು ದೇಶದ ಪ್ರತಿಯೊಬ್ಬರಿಗೂ ಮಾರ್ಗದರ್ಶಿಯಾಗಿದೆ. ಸಾಮಾನ್ಯ ಪ್ರಜೆಯೂ ದೊಡ್ಡ ವ್ಯಕ್ತಿಯಾಗಿ ಬೆಳೆಯಲು ಅದು ಕಾರಣವಾಗಿದೆ. ಅವರ ಪ್ರತಿಪಾದಿಸಿದ ಆಶಯಗಳಲ್ಲಿ ಉತ್ಸವ ಆಯೋಜಿಸಿರುವುದು ಸ್ವಾಗತಾರ್ಹ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಮೈಸೂರಿನಲ್ಲಿದ್ದ ರಂಗಾಯಣವನ್ನು ಕಾರ್ಕಳ, ಧಾರವಾಡ, ಶಿವಮೊಗ್ಗ, ಕಲಬುರಗಿಗೂ ವಿಸ್ತರಿಸಲಾಗಿದೆ. ಅಲ್ಲಿಂದ ಹೊಮ್ಮಿದ ಪ್ರತಿಭೆಗಳು ಕಲೆಯನ್ನು ಬೆಳೆಸುತ್ತಿವೆ’ ಎಂದರು.
ಸಂವಿಧಾನದ ಪ್ರಸ್ತಾವನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಓದಿದರು.
ಇದೇ ವೇಳೆ ಪ್ಲಾಸ್ಟಿಕ್ ಮುಕ್ತ ಉತ್ಸವ ಆಯೋಜನೆಗೆ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಅವರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಅವರಿಗೆ ‘ಹಸಿರು ಕಾರ್ಯಕ್ರಮ’ ಪ್ರಮಾಣಪತ್ರ ನೀಡಿದರು.
ಕಾರ್ಯದರ್ಶಿ ಜೆ.ಮಂಜುನಾಥ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ರಂಗ ಸಮಾಜದ ಸದಸ್ಯ ಸುರೇಶ್ ಬಾಬು, ಮೈಮ್ ರಮೇಶ್, ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಹುಲಿಗಪ್ಪ ಕಟ್ಟಿಮನಿ ಪಾಲ್ಗೊಂಡಿದ್ದರು.
ಆಕರ್ಷಿಸಿದ ಜನಪದ ಸಿನಿಮಾ
ಕಿಂದರಿಜೋಗಿ ಆವರಣದಲ್ಲಿ ಜಾನಪದ ಕಲೆಗಳ ವೈವಿಧ್ಯದ ಹೂರಣವನ್ನು ಪ್ರೇಕ್ಷಕರು ಸವಿದರು. ಮಧ್ಯಪ್ರದೇಶದ ದಿಲೀಪ್ ಕುಮಾರ್ ಮತ್ತು ತಂಡದ ಲಿಂಗೋ ನೃತ್ಯ ರಾಜಶೇಖರ ಮತ್ತು ತಂಡದ ಗಾರುಡಿಗೊಂಬೆ ಸೆಳೆದವು. ತಮಿಳುನಾಡಿನ ಎಸ್. ಕಲೈನ್ಮಣಿ ಸಿಂಗಾರ ಷಣ್ಮುಗಂ ತಂಡದವರ ‘ತೆರುಕೂತು’ ಜಾನಪದ ನೃತ್ಯ ತುದಿಗಾಲಿನಲ್ಲಿ ನಿಲ್ಲಿಸಿತು. ಶ್ರೀರಂಗದ ಚಲನಚಿತ್ರೋತ್ಸವದಲ್ಲಿ ರೂಟ್ಸ್ (ಇಂಗ್ಲಿಷ್) ಇಂಡಿಯಾ ಅನ್‌ಟಚ್ಡ್ (ಇಂ) ಫುಲೆ (ಹಿಂದಿ) ಚಿತ್ರಗಳನ್ನು ಪ್ರದರ್ಶಿಸಲಾಯಿತು. ಪ್ರೇಕ್ಷಕರಿಂದ ಚರ್ಚೆ– ಸಂವಾದವೂ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.