ADVERTISEMENT

’ಬಹುರೂಪಿ’ಯಾಗಿ ಕಂಗೊಳಿಸಲಿದ್ದಾಳೆ ‘ತಾಯಿ’

ರಂಗಾಯಣದಲ್ಲಿ 10ರಿಂದ ರಂಗೋತ್ಸವ ಆರಂಭ l ಸಂಭ್ರಮದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 6:19 IST
Last Updated 2 ಡಿಸೆಂಬರ್ 2021, 6:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಬಹುನಿರೀಕ್ಷಿತ ರಂಗಾಯಣ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ‘ತಾಯಿ’ಯು ವಿವಿಧ ಸ್ವರೂಪಗಳಲ್ಲಿ ಕಂಗೊಳಿಸಲಿದ್ದಾಳೆ.

ಡಿ. 10ರಿಂದ 19ರವರೆಗೆ ಇಲ್ಲಿ ನಡೆಯುವ ನಾಟಕಗಳು, ಜಾನಪದ ನೃತ್ಯ, ಸಂಗೀತ, ಭಿತ್ತಿಚಿತ್ರ ಪ್ರದರ್ಶನ, ಸಿನಿಮಾ ಮಂದಿರ ಸೇರಿದಂತೆ ನಾಟಕೋತ್ಸವದ ಎಲ್ಲ ಕಾರ್ಯಕ್ರಮಗಳೂ ’ತಾಯಿ’ ಪರಿಕಲ್ಪನೆಯನ್ನೇ ಪ್ರಧಾನ ಅಂಶವನ್ನಾಗಿರಿಸಿಕೊಂಡಿರುವುದು ವಿಶೇಷ.

‘ಬದುಕೆಂದರೆ ಹಣ ಎಂಬ ನಂಬಿಕೆಯಲ್ಲಿ ಮುಳುಗಿರುವ ಹಾಗೂ ನಂಬಿಕೆ, ಸಂಬಂಧಗಳು ನಾಶವಾಗುತ್ತಿರುವ ಹೊತ್ತಿನಲ್ಲಿ ತಾಯಿಯ ಮಹತ್ವ ಸಾರುವುದು ನಾಟಕೋತ್ಸವದ ಉದ್ದೇಶ’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಶ್ರೀಮಂತರು, ಮಧ್ಯಮವರ್ಗದವರು ಹಾಗೂ ಬಡವರಿಗೆ ತಕ್ಕಂತೆ ವೃದ್ಧಾಶ್ರಮಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ನಮ್ಮ ಪೂರ್ವಿಕರು ಭೂಮಿ, ನೀರು, ಅರಣ್ಯ, ಜಾನುವಾರು ಹಾಗೂ ಮನುಷ್ಯರು ಈ ಐದು ಸ್ವರೂಪಗಳಲ್ಲೂ ತಾಯಿಯನ್ನು ಕಂಡಿದ್ದಾರೆ. ಇವೆಲ್ದ್ದದರ ಉಳಿವಿಗಾಗಿ ತಾಯಿ ಪರಿಕಲ್ಪನೆಯನ್ನು ಬಳಸಲಾಗಿದೆ’ ಎಂದರು.

12 ಭಾಷೆಗಳ 33 ನಾಟಕಗಳು, 19 ವಿವಿಧ ಜನಪದ ಕಲಾಪ್ರದರ್ಶನಗಳು, 24 ಸಿನಿಮಾಗಳು, ವಿಚಾರ ಸಂಕಿರಣ ಹಾಗೂ ಭಾಷಣ ಸ್ಪರ್ಧೆಗಳು ಇರಲಿವೆ. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳೂ ಇರಲಿವೆ ಎಂದರು.

ಡಿ. 12 ಮತ್ತು 13ರಂದು ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ನಡೆಯುವ ವಿಚಾರ ಸಂಕಿರಣ ಮತ್ತು ಭಾಷಣ ಸ್ಪರ್ಧೆಯನ್ನು ಲೇಖಕ ನಾ.ಡಿಸೋಜ ಉದ್ಘಾಟಿಸಲಿದ್ದಾರೆ. ಲೇಖಕಿ ವಿಜಯಲಕ್ಷ್ಮೀ ಬಾಳೇಕುಂದ್ರಿ ಭಾಗವಹಿಸುವರು. ‘ಸೃಜನಶೀಲತೆ ಮತ್ತು ತಾಯ್ತನ’ ಕುರಿತು ರಂಗಕರ್ಮಿ ಅಭಿರುಚಿ ಚಂದ್ರು, ಕವಯಿತ್ರಿ ಭುವನೇಶ್ವರಿ ಹೆಗಡೆ ವಿಷಯ ಮಂಡಿಸುವರು. ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಅಧ್ಯಕ್ಷತೆ ವಹಿಸುವರು ಎಂದರು.

‘ರೈತ ಮತ್ತು ತಾಯ್ತನ’ ಕುರಿತು ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಲೇಖಕಿ ಕೆ.ರಾಜಲಕ್ಷ್ಮೀ ಮಾತನಾಡುವರು. ಕರ್ನಾಟಕ ಸಾವಯವ ಕೃಷಿ ಮಿಷನ್‌ನ ಅಧ್ಯಕ್ಷ ಆ.ಶ್ರೀ.ಆನಂದ ಅಧ್ಯಕ್ಷತೆ ವಹಿಸುವರು’ ಎಂದರು.

’ಡಿ. 13ರಂದು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ‘ಮನುಕುಲದ ಒಳಿತಿಗೆ ಪ್ರಕೃತಿಯೋ, ಪ್ರಗತಿಯೋ?’ ಕುರಿತು ಭಾಷಣ ಸ್ಪರ್ಧೆ ನಡೆಯಲಿದೆ. ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸಮಾರೋಪ ಭಾಷಣ ಮಾಡುವರು‌’ ಎಂದು ಹೇಳಿದರು.

ನಾಟಕೋತ್ಸವ ಪ್ರಧಾನ ಸಂಚಾಲಕ ಅಂಜುಸಿಂಗ್, ವಿವಿಧ ಸಮಿತಿಗಳ ಪ್ರಶಾಂತ ಹಿರೇಮಠ, ಪ್ರಮೀಳಾ ಬೇಂಗ್ರೆ, ಕೆ.ರಾಮನಾಥ ಇದ್ದರು.

ದಕ್ಷಿಣಾಮೂರ್ತಿ ಕೃಷ್ಣಕುಮಾರ್‌ಗೆ ಆಹ್ವಾನ: ‘ತಾಯಿಯನ್ನು ಸ್ಕೂಟರ್‌ನಲ್ಲಿ ಕುಳ್ಳಿರಿಸಿಕೊಂಡು ದೇಶದ ಪುಣ್ಯಕ್ಷೇತ್ರಗಳ ದರ್ಶನ ಮಾಡಿಸಿದ ದಕ್ಷಿಣಾಮೂರ್ತಿ ಕೃಷ್ಣಕುಮಾರ್ ಅವರನ್ನು ನಾಟಕೋತ್ಸವಕ್ಕೆ ಆಹ್ವಾನಿಸಲಾಗಿದೆ’ ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದರು.

‘ಮಣಿಪುರದಿಂದ ಇಲ್ಲಿಗೆ ಬಂದು ಕನ್ನಡ ಕಲಿತು ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಅಂಜು ಸಿಂಗ್ ಅವರಿಗೆ ನಾಟಕೋತ್ಸವದ ಪ್ರಧಾನ ಸಂಚಾಲಕ ಹೊಣೆಯನ್ನು ವಹಿಸಲಾಗಿದೆ’ ಎಂದರು.

ವೃಕ್ಷಮಾತೆ ತುಳಸಿಗೌಡ ಉದ್ಘಾಟನೆ: ಮೈಸೂರು: ಇದೇ 10ರಿಂದ 19ರವರೆಗೆ ಇಲ್ಲಿ ನಡೆಯಲಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ವೃಕ್ಷಮಾತೆ ಎಂದು ಖ್ಯಾತರಾದ ತುಳಸಿಗೌಡ ಉದ್ಘಾಟಿಸಲಿದ್ದಾರೆ. ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸಮಾರೋಪ ಭಾಷಣ ಮಾಡಲಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ, ‘ಪರಿಸರವಾದಿ ಸುರೇಶ್ ಹೆಬ್ಳೀಕರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಹಾಗೂ ನಟಿ ಮಾಳವಿಕಾ ಅವಿನಾಶ್ ಅತಿಥಿಯಾಗಿ ಭಾಗವಹಿಸುವರು’ ಎಂದರು.

‘ಆಹ್ವಾನ ಪತ್ರಿಕೆಯಲ್ಲಿ ಸೂಲಿಬೆಲೆ ಅವರಿಗೆ ಸಮಾಜ ಸೇವಕ ಎಂಬ ವಿಶೇಷಣ ಬಳಸಲಾಗಿದೆ. ಅವರ ಸಮಾಜಸೇವೆ ಏನು’ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ಯಾರು ಏನೇ ಹೇಳಲಿ, ಸೂಲಿಬೆಲೆ ಸಮಾರೋಪ ಭಾಷಣ ಮಾಡಲಿದ್ದಾರೆ. ಅವರ ಭಾಷಣವನ್ನು ಕೇಳಿ, ಆ ಕುರಿತು ಏನು ಬೇಕಾದರೂ ಬರೆಯಿರಿ. ಅವರು ಯುವಜನರಲ್ಲಿ ದೇಶಪ್ರೇಮದ ಜಾಗೃತಿ ಮೂಡಿಸಿ ಸಮಾಜ ಸೇವೆ ಮಾಡುತ್ತಿದ್ದಾರೆ’ ಎಂದು ಹೇಳಿದ ಕಾರ್ಯಪ್ಪ, ‘ಅವರನ್ನು ಏಕೆ ಕರೆಯಬಾರದು, ಅವರೇನು ದೇಶದ್ರೋಹಿಯೇ’ ಎಂದು ಮರು ಪ್ರಶ್ನೆ ಹಾಕಿದರು.

‘ಸೂಲಿಬೆಲೆ ಅವರನ್ನು ಮಾಧ್ಯಮದ ಎಲ್ಲರೂ ವಿರೋಧಿಸುತ್ತಿಲ್ಲ. ಮಾಧ್ಯಮದವರಲ್ಲೇ ಗುಂಪುಗಾರಿಕೆ ಇದೆ’ ಎಂದೂ ಕಾರ್ಯಪ್ಪ ಹೇಳಿದರು.

ಕೋವಿಡ್‌ ಮುನ್ನೆಚ್ಚರಿಕೆ: ಹೊರರಾಜ್ಯದಿಂದ ಬರುವ ತಂಡಗಳ ಪ್ರತಿಯೊಬ್ಬರೂ 2 ಬಾರಿ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣಪತ್ರ ಹಾಗೂ ರಂಗಾಯಣ ಪ್ರವೇಶಿಸುವ ಮುನ್ನ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿರುವ ವರದಿಯನ್ನು ಪರಿಶೀಲಿಸಲಾಗುವುದು, ಉತ್ಸವ ಬರುವ ಪ್ರತಿಯೊಬ್ಬರನ್ನೂ ಥರ್ಮಲ್ ಪರೀಕ್ಷೆ, ಮಾಸ್ಕ್‌ನ್ನು ಕಡ್ಡಾಯಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.