ADVERTISEMENT

ಮೈಸೂರು: ರಂಗಾಯಣದಿಂದ ಜ.11ರಿಂದ 18ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 11:09 IST
Last Updated 7 ಜನವರಿ 2026, 11:09 IST
   

ಮೈಸೂರು: ಇಲ್ಲಿನ ರಂಗಾಯಣವು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಜ.11ರಿಂದ 18ರ ವರೆಗೆ ಆಯೋಜಿಸಿದ್ದು, ಉತ್ಸವದ ಬೆಳ್ಳಿಹಬ್ಬದ ಪ್ರಯುಕ್ತ ‘ಬಹುರೂಪಿ ಬಾಬಾ ಸಾಹೇಬ್- ಸಮತೆಯೆಡೆಗೆ ನಡಿಗೆ’ ಆಶಯದಲ್ಲಿ ರೂಪಿಸಿದೆ.  

‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಣಿಪುರದ ರಂಗಕರ್ಮಿ ಹೈಸ್ನಾಂ ಸಾವಿತ್ರಿ ದೇವಿ ಜ.12ರಂದು ಸಂಜೆ 5.30ಕ್ಕೆ ವನರಂಗದಲ್ಲಿ ಉತ್ಸವ ಉದ್ಘಾಟಿಸುವರು. ಇದೇ ವೇಳೆ ಸಾವಿತ್ರಿ ಅವರಿಗೆ ರಂಗಗೌರವ ನೀಡಲಾಗುವುದು’ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

‘6 ರಾಜ್ಯಗಳ 12 ಬಹುಭಾಷಾ ನಾಟಕಗಳು ಸೇರಿದಂತೆ 24 ನಾಟಕಗಳು ಭೂಮಿಗೀತ, ವನರಂಗ, ಕಿರುರಂಗಮಂದಿರ ಹಾಗೂ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ. ‘ಮಕ್ಕಳ ಬಹುರೂಪಿ’ಯನ್ನು ಕಲಾಮಂದಿರದಲ್ಲಿ ಜ.12ರಂದು ಬೆಳಿಗ್ಗೆ 10.30ಕ್ಕೆ ರಂಗಕರ್ಮಿ ರಾಮೇಶ್ವರಿ ವರ್ಮ ಉದ್ಘಾಟಿಸುವರು’ ಎಂದರು. 

ADVERTISEMENT

‘ಬಣ್ಣಗಳಲ್ಲಿ ಭೀಮಯಾನವನ್ನು ಕಲಾವಿದರು ಅನಾವರಣಗೊಳಿಸಲಿದ್ದು, ‘ಬಾಬಾಸಾಹೇಬ್‌ ಸಂಗೀತ ಸ್ಮೃತಿ’ಯನ್ನು ಆಯೋಜಿಸಲಾಗಿದೆ. ರಂಗಕರ್ಮಿ ಎಚ್‌.ಜನಾರ್ಧನ್, ಮಹಾರಾಷ್ಟ್ರದ ಅನಿರುದ್ಧ ವಂಕರ್, ಪಿಚ್ಚಳ್ಳಿ ಶ್ರೀನಿವಾಸ್, ಪಂಜಾಬ್‌ನ ಗಾಯಕಿ ಗಿನ್ನಿಮಾಹಿ ಕಾರ್ಯಕ್ರಮ ನೀಡಲಿದ್ದಾರೆ’ ಎಂದರು. ‌‌‌‌

‘ಶ್ರೀರಂಗದಲ್ಲಿ ಚಲನಚಿತ್ರೋತ್ಸವವನ್ನು ಲೇಖಕ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದು, ಅದು 11ರಿಂದ ಆರಂಭವಾಗಲಿದೆ.  17, 18ರಂದು ನಡೆಯುವ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಪತ್ರಕರ್ತ ಸಿದ್ಧಾರ್ಥ ವರದರಾಜನ್ ಚಾಲನೆ ನೀಡಲಿದ್ದಾರೆ. ನಾಟಕದ ಟಿಕೆಟ್‌ ಬೆಲೆ ₹100 ಆಗಿದ್ದು, ‘ಮಕ್ಕಳ ಬಹುರೂಪಿ’ಯಲ್ಲಿ ಮಕ್ಕಳಿಗೆ ಟಿಕೆಟ್‌ ₹50 ಇರಲಿದೆ. ಬೆಳ್ಳಿ ಹಬ್ಬದ ಸಂಭ್ರಮವಾದ್ದರಿಂದ ಸರ್ಕಾರವು ₹ 1 ಕೋಟಿ ಅನುದಾನ ನೀಡಿದೆ’ ಎಂದು ಮಾಹಿತಿ ನೀಡಿದರು. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.