
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ
ಮೈಸೂರು: ಇಲ್ಲಿನ ರಂಗಾಯಣವು ‘ಬಹುರೂಪಿ ರಾಷ್ಟ್ರೀಯನಾಟಕೋತ್ಸವ’ದ ಬೆಳ್ಳಿ ಹಬ್ಬಕ್ಕೆ
ಸಜ್ಜಾಗುತ್ತಿದ್ದು, ಈ ಬಾರಿ ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ತತ್ವಗಳನ್ನೇ ಕೇಂದ್ರವಾಗಿರಿ ಸಿಕೊಂಡು ಉತ್ಸವವನ್ನು ರೂಪಿ ಸಲಾಗುತ್ತಿದೆ. ‘ಸಮತೆಯೆಡೆಗೆ ನಡಿಗೆ’ ಆಶಯದಲ್ಲಿ ‘ಬಹುರೂಪಿ ಬಾಬಾಸಾಹೇಬ್’ ಶೀರ್ಷಿಕೆಯಲ್ಲಿ ನಾಟಕೋತ್ಸವ ಮೈದಳೆಯಲಿದೆ.
ಜನವರಿ 12ರಿಂದ ಏಳು ದಿನ ವಿವಿಧ ಭಾಷೆಗಳ ವೈವಿಧ್ಯಮಯ ನಾಟಕ, ಗಾಯನ ಕಾರ್ಯಕ್ರಮ ಗಳು, ಸಿನಿಮಾ ಪ್ರದರ್ಶನ, ರಾಷ್ಟ್ರೀಯ ವಿಚಾರಸಂಕಿರಣ ನಡೆಯಲಿದೆ. ಅಂಬೇಡ್ಕರ್ ಅವರ ಜೀವನ, ತತ್ವಗಳಿಂದ ಪ್ರೇರಿತವಾದ ಕಲಾ ಪ್ರಕಾರಗಳ ಮಿಶ್ರಣವಾಗಿ ಉತ್ಸವ ಗಮನ ಸೆಳೆಯಲಿದೆ. ಅಂಬೇಡ್ಕರ್ ಜೀವನವನ್ನು ಬಿಂಬಿಸುವ ಛಾಯಾಚಿತ್ರ ಪ್ರದರ್ಶನವೂ ಇರಲಿದೆ.
ರಂಗಾಯಣ ಆವರಣದಲ್ಲಿ ರುವ ಭೂಮಿಗೀತ, ವನರಂಗ, ಕಿರು ರಂಗಮಂದಿರ ಹಾಗೂ ಕಲಾಮಂದಿರದ ವೇದಿಕೆಗಳಲ್ಲಿ ಕನ್ನಡ, ಅಸ್ಸಾಮಿ, ಮಣಿಪುರಿ, ಇಂಗ್ಲಿಷ್, ಹಿಂದಿ, ಮರಾಠಿ, ತಮಿಳು, ಮಲಯಾಳ, ತುಳು ಭಾಷೆಯ ನಾಟಕಗಳು ಪ್ರದರ್ಶನ ಗೊಳ್ಳಲಿವೆ. ಬೀದಿ ನಾಟಕಗಳ ಮೂಲಕವೇ ಉತ್ಸವದ ಪ್ರಚಾರ ನಡೆಯಲಿರುವುದು ವಿಶೇಷ.
25 ವರ್ಷಗಳ ಉತ್ಸವದ ಹಿನ್ನೋಟವನ್ನು ದಾಖಲಿಸಲು ಸ್ಮರಣ ಸಂಚಿಕೆ ತರಲು ಸಿದ್ಧತೆಗಳು ನಡೆದಿವೆ. ಲೇಖಕ ಜಿ.ಪಿ.ಬಸವರಾಜು ಸಂಪಾದಕ ರಾಗಿದ್ದಾರೆ. ಉತ್ಸವದ ಅಂಗವಾಗಿ ನಡೆಯಲಿರುವ ಸಿನಿಮಾಗಳ ಪ್ರದರ್ಶನದ ನೇತೃತ್ವ ‘ಮ್ಯಾನ್’ ಸಂಸ್ಥೆಯ ಕೆ.ಮನು ಅವರದ್ದು.
‘ಜಗತ್ತಿನಾದ್ಯಂತ ಬಹುಶಿಸ್ತೀಯ ನೆಲೆಯಲ್ಲಿ ಆಳ ಅಧ್ಯಯನಕ್ಕೆ ಒಳಗಾಗಿರುವ ಪ್ರತಿಭೆ ಅಂಬೇಡ್ಕರ್. ಅವರ ಹೋರಾಟ–ಬದುಕು, ಚಿಂತನೆಗಳನ್ನು ನಾಟಕ, ಸಂಗೀತ, ಸಿನಿಮಾ ಮಾಧ್ಯಮಗಳ ಮೂಲಕ ಮುಖಾಮುಖಿಯಾಗುವ ಯತ್ನ ನಮ್ಮದು. ಜಗತ್ತಿನ ಹಲವು ಜ್ವಲಂತ ಸಮಸ್ಯೆಗಳಿಗೆ ಅಂಬೇಡ್ಕರ್ ಅವರಲ್ಲಿ ಪರಿಹಾರಗಳಿವೆ ಎಂದು ಪ್ರದಿಪಾದಿಸುವ ಉದ್ದೇಶವೂ ಇದೆ’ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ‘ಪ್ರಜಾವಾಣಿ’ಗೆ ತಿಳಿಸಿದರು
‘ಅಂಬೇಡ್ಕರ್ ಕೊಲಾಜ್’
‘ಬಹುರೂಪಿ ಉತ್ಸವಕ್ಕೆಂದೇ ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಅವರು ‘ಅಂಬೇಡ್ಕರ್ ಕೊಲಾಜ್’ ನಾಟಕ ರಚಿಸಿದ್ದಾರೆ. ಕನ್ನಡದ ‘ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’, ಮಹೇಶ್ ದತ್ ಶರ್ಮಾ ಅವರ ಕೃತಿ ಆಧಾರಿತ ಹಿಂದಿ ನಾಟಕ ‘ಅಂಬೇಡ್ಕರ್ ಕಾ ಬಚ್ಪನ್, ಜಾತಿ ವ್ಯವಸ್ಥೆಯ ಅಸಮಾನತೆ ಕುರಿತು ಹಾಡುಗಳು ಮತ್ತು ಕವಿತೆಗಳ ಮೂಲಕ ಹೇಳುವ ಹಿಂದಿ ನಾಟಕ ‘ಕವನ್: ಅಂಬೇಡ್ಕರ್ ಒಪೆರಾ’, ಜ್ಯೋತಿ ಬಾ ಫುಲೆ ಅವರ ಮರಾಠಿ ನಾಟಕ ‘ತೃತೀಯ ರತ್ನ’ –ಇವು ‘ಸಮತೆಯೆಡೆ ನಡಿಗೆ’ ಎಂಬ ಉತ್ಸವದ
ಆಶಯನುಡಿಯನ್ನು ಸಮರ್ಥವಾಗಿ ಪ್ರತಿಪಾದಿಸುತ್ತವೆ’ ಎಂದು ಸತೀಶ್ ತಿಪಟೂರು ತಿಳಿಸಿದರು.
ಬಹುರೂಪಿ ಉತ್ಸವದ ಬಳಿಕ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವರ್ಷಪೂರ್ತಿ ಅಂಬೇಡ್ಕರ್ ಅವರ ಜೀವನ ಆಧಾರಿತ ನಾಟಕಗಳ ಪ್ರದರ್ಶನ, ಸಂವಾದ ಆಯೋಜಿಸುವ ಉದ್ದೇಶವಿದೆಸತೀಶ್ ತಿಪಟೂರು, ನಿರ್ದೇಶಕರು, ರಂಗಾಯಣ ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.