
ನಂಜನಗೂಡು: ಒಳಮೀಸಲಾತಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಪರಿಶಿಷ್ಟ ಜಾತಿ ಬಲಗೈ ಸಂಘಟನೆಗಳ ಕಾರ್ಯಕರ್ತರು ನಗರದ ತಹಶೀಲ್ದಾರ್ ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.
‘ಪರಿಶಿಷ್ಟ ಜಾತಿಯವರಿಗೆ ನೀಡುತ್ತಿರುವ ಹೊಸ ಜಾತಿ ಪ್ರಮಾಣ ಪತ್ರವನ್ನು ನಿಲ್ಲಿಸಿ, ಹಳೆಯ ಮೀಸಲಾತಿ ಅನ್ವಯ ಉದ್ಯೋಗಾವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಕಾರ್ಯ ಬಸವಣ್ಣ ಮಾತನಾಡಿ, ‘ಒಂದು ತಿಂಗಳಿನಿಂದ ಉದ್ಯೋಗ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿ, ಒಳ ಮೀಸಲಾತಿ ಹಂಚಿಕೆಯಲ್ಲಿ ಆಗಿರುವ ಗೊಂದಲ ಹಾಗೂ ಬಲಗೈ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಿ ರಾಜ್ಯವ್ಯಾಪಿ ನಡೆದ ಪ್ರತಿಭಟನೆಯನ್ನು ಗಮನಿಸಿರುವ ರಾಜ್ಯ ಸರ್ಕಾರ. ಒಳಮೀಸಲಾತಿಯಲ್ಲಿ ಪರಿಷ್ಕರಣೆಯಾಗುವವರೆಗೆ ಹಳೆಯ ಮೀಸಲಾತಿ ಮಾದರಿಯಲ್ಲಿಯೇ ಉದ್ಯೋಗ ನೇಮಕಾತಿ ಮಾಡಲಾಗುವುದು ಎಂದು ಸಚಿವಸಂಪುಟ ತೆಗೆದುಕೊಂಡಿರುವ ತೀರ್ಮಾನ ಸ್ವಾಗತಾರ್ಹ’ ಎಂದು ಹೇಳಿದರು.
‘ಇದು ಬಲಗೈ ಸಮುದಾಯದ ಕಣ್ಣೊರೆಸುವ ತಂತ್ರವಾಗಬಾರದು, ಬದಲಾಗಿ ಸಮುದಾಯದ ಜನರಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕೆ ನೆರವಾಗಬೇಕು, ಅವೈಜ್ಞಾನಿಕವಾಗಿರುವ ಒಳಮೀಸಲಾತಿಯನ್ನು ರದ್ದುಪಡಿಸುವುದರ ಜೊತೆಗೆ ಈಗ ನೀಡುತ್ತಿರುವ ಹೊಸ ಜಾತಿ ಪ್ರಮಾಣ ಪತ್ರವನ್ನು ನಿಲ್ಲಿಸಬೇಕು’ ಎಂದು ಹೇಳಿದರು .
ಪ್ರತಿಭಟನೆಯಲ್ಲಿ ಮುಖಂಡರಾದ ಶಂಕರಪುರ ಸುರೇಶ್, ಅಭಿ ನಾಗಭೂಷಣ್, ಬೊಕ್ಕಹಳ್ಳಿ ಲಿಂಗಯ್ಯ, ನಗರ್ಲೆ ವಿಜಯ್‌ಕುಮಾರ್, ಮಂಜು ಶಂಕರಪುರ, ಕಂದೇಗಾಲ ಶಿವಣ್ಣ, ಶಿವರಾಜು, ಸೋಮಣ್ಣ, ಗೀಕಳ್ಳಿ ಮಹದೇವಸ್ವಾಮಿ, ಚಂದ್ರಶೇಖರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.