ಹಂಪಾಪುರ: ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್‌ನಲ್ಲಿ ತಯಾರಿಸಿದ ಮೊರಗಳ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ ಹಬ್ಬದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಬಿದಿರಿನ ಮೊರಕ್ಕೆ ಬೇಡಿಕೆ ಹೆಚ್ಚಿದೆ. ಆದರೆ ಬಿದಿರಿನ ಕೊರತೆಯಿಂದಾಗಿ ತಾಲ್ಲೂಕಿನ ಆದಿವಾಸಿಗಳು ಮೊರ ತಯಾರಿ ನಿಲ್ಲಿಸಿದ್ದಾರೆ.
ಗೌರಿ ಹಬ್ಬದಲ್ಲಿ ಮಹಿಳೆಯರು ಬಾಗಿನ ನೀಡುವುದರಿಂದ ಬಿದಿರಿನ ಮೊರಗಳಿಗೆ ಬೇಡಿಕೆ ಹೆಚ್ಚಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಎಚ್. ಡಿ.ಕೋಟೆ ಪಟ್ಟಣದಲ್ಲಿ ನಡೆಯುವ ಮಂಗಳವಾರದ ಸಂತೆ ಸೇರಿದಂತೆ ತಾಲ್ಲೂಕಿನ ವಿವಿಧ ಹೋಬಳಿಗಳಲ್ಲಿ ನಡೆಯುವ ಸಂತೆಗಳಲ್ಲಿ ಬಿದಿರಿನ ಮೊರಗಳ ಮಾರಾಟ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಹಬ್ಬದಲ್ಲಿ ಮಾತ್ರ ಬಿದಿರಿನ ಮೊರಕ್ಕೆ ಬೇಡಿಕೆ ಇದೆ. ಉಳಿದಂತೆ ಬೇರೆ ದಿನಗಳಲ್ಲಿ ಬೇಡಿಕೆ ಇರುವುದಿಲ್ಲ. ಮಾಮೂಲಿ ದಿನಗಳಲ್ಲಿ ಒಂದು ಜೊತೆ ಮೊರಕ್ಕೆ ₹ 150 ಇದ್ದು, ಹಬ್ಬದ ಸಂದರ್ಭದಲ್ಲಿ ₹200ರಿಂದ ₹300 ಇದೆ. ದರ ಹೆಚ್ಚಾಗಿದ್ದರೂ ಸಹ ಖರೀದಿ ಬಿರುಸಿನಿಂದಲೇ ನಡೆದಿದೆ.
ಮೊರ ತಯಾರಿಕೆಗೆ ಪೆಟ್ಟು:
‘ಇತ್ತೀಚಿನ ದಿನಗಳಲ್ಲಿ ಬಿದಿರು ಕ್ಷೀಣಿಸಿರುವುದರಿಂದ ಮತ್ತು ಪ್ಲಾಸ್ಟಿಕ್ ಮೊರಗಳ ಬಳಕೆಯಿಂದ ಬಿದಿರಿನ ಮೊರಗಳ ತಯಾರಿಕೆಗೆ ಪೆಟ್ಟು ಬಿದ್ದಿದೆ. ಎಚ್.ಡಿ. ಕೋಟೆ ತಾಲ್ಲೂಕಿನ ಬಸವನಗಿರಿ ಹಾಡಿ, ಬೇಗೂರು ಹಾಡಿ ಮತ್ತು ಹುಣಸೇಕುಪ್ಪೆ ಹಾಡಿಗಳಲ್ಲಿ ಆದಿವಾಸಿಗಳು ಮೊರಗಳನ್ನು ಹೆಣೆದು ಮಾರುತ್ತಿದ್ದರು. ಪ್ಲಾಸ್ಟಿಕ್ ಮೊರಗಳ ಹಾವಳಿಯಿಂದಾಗಿ ನಮ್ಮ ಆದಿವಾಸಿಗಳು ಬಿದಿರಿನ ಉತ್ಪನ್ನಗಳ ತಯಾರಿಕೆಯನ್ನು ನಿಲ್ಲಿಸಿದ್ದಾರೆ’ ಎಂದು ಆದಿವಾಸಿ ಮುಖಂಡ ವಡ್ಡರಗುಡಿ ಪುಟ್ಟಬಸವ ಬೇಸರ ವ್ಯಕ್ತಪಡಿಸಿದರು.
ಒಂದು ಬಿದಿರಿಗೆ ಆರು ಮೊರ:
1 ಬಿದಿರಿನ ಬೆಲೆ ₹ 300ರಿಂದ ₹350 ಇರುತ್ತದೆ. ಒಂದು ಬಿದಿರಿನಿಂದ ಆರೇಳು ಮೊರಗಳನ್ನು ತಯಾರಿಸಬಹುದಾಗಿದ್ದು, ಒಬ್ಬ ವ್ಯಕ್ತಿ ಒಂದು ದಿನದಲ್ಲಿ 6 ಮೊರಗಳನ್ನು ತಯಾರಿಸಬಹುದಾಗಿದೆ. ಗೌರಿ ಹಬ್ಬಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಿದಿರಿನ ಮೊರದ ಬೇಡಿಕೆ ಇರುವುದರಿಂದ, ವ್ಯಾಪಾರ ಜೋರಿದೆ' ಎನ್ನುತ್ತಾರೆ ಬಿದಿರಿನ ಮೊರದ ತಯಾರಿಸಿ ಮಾರುವ ನಂಜಮ್ಮ.
ಅರಣ್ಯದಲ್ಲಿ ಕಳೆದ ಆರು ವರ್ಷದ ಹಿಂದೆ ಬಿದಿರಿಗೆ ಕಟ್ಟೆ ಹಿಡಿದು ಒಣಗಿದ ಕಾರಣ ಬಿದಿರು ದೊರೆಯುತ್ತಿಲ್ಲ. ಇದರಿಂದ ಆದಿವಾಸಿಗಳು ಮೊರ ತಯಾರಿಯನ್ನು ತಾಲ್ಲೂಕಿನಲ್ಲಿ ನಿಲ್ಲಿಸಿದ್ದಾರೆಪುಟ್ಟಬಸವ ಆದಿವಾಸಿ ಮುಖಂಡ
ಬಾಗಿನಕ್ಕೆ ಬೇಕು ಬಿದಿರಿನ ಮೊರ:
'ಬಿದಿರಿನ ಮರದ ಬಾಗಿನದಲ್ಲಿ ನಾರಾಯಣನ ಅಂಶವಿದೆ. ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮೀಯರ ರೀತಿಯಲ್ಲಿ ಲಕ್ಷ್ಮೀ–ನಾರಾಯಣರ ತರಹ ಇರಲಿ ಎನ್ನುವ ಕಾರಣಕ್ಕೆ ಮತ್ತು ಸುಮಂಗಲಿತನ ಯಾವಾಗಲೂ ಇರಲಿ ಅನ್ನುವ ಕಾರಣಕ್ಕೆ 16 ಸುಮಂಗಲಿ ದೇವತೆಗಳ ಸಾಕ್ಷಿಯಾಗಿ ಬಿದಿರಿನಲ್ಲಿ ತಯಾರಿಸಿದ ಮೊರದ ಬಾಗಿನ ನೀಡಲಾಗುತ್ತದೆ’ ಎನ್ನುತ್ತಾರೆ ವಡ್ಡರಗುಡಿ ಗ್ರಾಮದ ಅಭಿಲಾಷ್ ಆರಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.