ADVERTISEMENT

ನಂಜರಾಜ ಬಹದ್ದೂರ್‌ ಛತ್ರದಲ್ಲಿ ಎರಡು ದಿನಗಳ ‘ಬಾಳೆ ಮೇಳ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 2:32 IST
Last Updated 9 ನವೆಂಬರ್ 2025, 2:32 IST
ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಶನಿವಾರ ನಡೆದ ಬಾಳೆಮೇಳವನ್ನು ಸಾರ್ವಜನಿಕರು ವೀಕ್ಷಿಸಿದರು– ಪ್ರಜಾವಾಣಿ ಚಿತ್ರ
ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಶನಿವಾರ ನಡೆದ ಬಾಳೆಮೇಳವನ್ನು ಸಾರ್ವಜನಿಕರು ವೀಕ್ಷಿಸಿದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ಬಾಳೆ ಹಣ್ಣು ಒಂದು ವಾರ ಉಳಿಯುವಂತೆ ಪ್ಯಾಕ್ ಮಾಡಿ, ಮೌಲ್ಯವರ್ಧಿಸಿದರೆ ಹೆಚ್ಚಿನ ಲಾಭ ಗಳಿಸಬಹುದಾಗಿದೆ. ಈ ಬಗ್ಗೆ ರೈತರು ಮತ್ತು ರೈತಗುಂಪುಗಳು ಗಮನಹರಿಸಬೇಕು’ ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ (ಕೆಪೆಕ್) ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಸಲಹೆ ನೀಡಿದರು.

ಸಹಜ ಸಮೃದ್ಧ ಸಂಸ್ಥೆಯು ‘ಕೀಸ್ಟೋನ್‌ ಫೌಂಡೇಷನ್‌ ಹಾಗೂ ಯೂಸಿಂಗ್‌ ಡೈವರ್ಸಿಟಿ’ ಜೊತೆಗೂಡಿ ಇಲ್ಲಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಶನಿವಾರದಿಂದ ಆಯೋಜಿಸಿರುವ 2 ದಿನಗಳ ‘ಬಾಳೆ ಮೇಳ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ಯಾಕ್‌, ಗ್ರೇಡ್‌ಡಿಂಗ್ ಮಾಡಲು ಮತ್ತು ಮಾರುಕಟ್ಟೆಗೆ ತರಲು ಕೆಪೆಕ್‌ನಿಂದ ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡಲಾಗುತ್ತಿದೆ. ಇದನ್ನು ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.

₹ 15 ಲಕ್ಷದವರೆಗೆ ನೆರವು: 

‘ಹೊರ ರಾಜ್ಯಗಳಲ್ಲಿ ಬಾಳೆಗೆ ಬಹಳ ಬೇಡಿಕೆ ಇದೆ. ರೈತರು ಸಂಘಟಿತರಾಗಿ ನೇರ ಮಾರಾಟ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವುದೇ ಕೃಷಿ ಉದ್ಯಮ ಆರಂಭಿಸಲು ₹ 15 ಲಕ್ಷದವರೆಗೆ ನೆರವು ಒದಗಿಸಲು ಕೆಪೆಕ್ ಸಿದ್ಧವಿದೆ’ ಎಂದು ಹೇಳಿದರು.

ಬಾಳೆಯ ವೈವಿಧ್ಯದ ಮಾಹಿತಿ ಪತ್ರ ಬಿಡುಗಡೆ ಮಾಡಿದ ನರರೋಗ ತಜ್ಞ ಡಾ.ಸುಶ್ರುತ್‌ ಗೌಡ, ‘ಬಾಳೆಯಲ್ಲಿ ಆರೋಗ್ಯ ಉತ್ತಮಗೊಳಿಸುವ ಅಂಶಗಳಿವೆ. ನಾರಿನಿಂದ ಸಮೃದ್ಧವಾಗಿರುವ ಬಾಳೆಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಮಲಬದ್ಧತೆ ನಿವಾರಣೆ ಆಗುತ್ತದೆ. ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿಡಬಹುದು’ ಎಂದು ತಿಳಿಸಿದರು.

‘ಮೈಸೂರು ಭಾಗದ ಜನಪ್ರಿಯ ನಂಜನಗೂಡು ರಸಬಾಳೆಗೆ ಪುನಶ್ಚೇತನ ನೀಡಲಾಗುತ್ತಿದೆ. ಇದು ಗ್ರಾಹಕರಿಗೆ ನಿಯಮಿತವಾಗಿ ಸಿಗುವಂತೆ ಶೀಘ್ರದಲ್ಲೇ ಮಾಡಲಾಗುವುದು’ ಎಂದು ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಜ್ಞಾನೇಶ್‌ ಬಿ.ಎನ್. ಹೇಳಿದರು. 

ಬಾಳೆಗಳ ವೈವಿಧ್ಯ:

ಕೊಡಗಿನ ಹುದೂರಿನ ಬಾಳೆ ಸಂರಕ್ಷಕ ರವಿಶಂಕರ ಬಿ.ಪಿ., ‘ಕೊಡಗು ಭಾಗದ ಪಚ್ಚಬಾಳೆ, ಫಿಂಗರ್ ಬಾಳೆ, ಮದರಂಗಿ ಮೊದಲಾದ 40 ಜಾತಿಯ ಬಾಳೆಗಳನ್ನು ಸಂರಕ್ಷಿಸುತ್ತಿದ್ದೇನೆ. ಇಂಥ ಅಪರೂಪದ ಬಾಳೆಗಳಿಗೆ ಮಾರುಕಟ್ಟೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಬಾಳೆ ಮೇಳ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದೆ’ ಎಂದು ಹೇಳಿದರು.

ಸಹಜ ಸಮೃದ್ಧದ ನಿರ್ದೇಶಕ ಜಿ.ಕೃಷ್ಣಪ್ರಸಾದ್ ಮಾತನಾಡಿ, ‘ದೇಶ ಬಾಳೆಯ ತವರು. ಇಲ್ಲಿ ನೂರಾರು ಬಗೆಯ ಬಾಳೆಗಳ ವೈವಿಧ್ಯವಿದೆ. ಆಧುನಿಕ ತಳಿಗಳ ಆಗಮನದಿಂದ ದೇಸೀಯ ತಳಿಗಳು ಮೂಲೆಗುಂಪಾಗಿವೆ. ಅವನ್ನು ಜನಪ್ರಿಯಗೊಳಿಸಲು ಮೇಳ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಆರ್ಗ್ಯಾನಿಕ್‌ ಕಿಸಾನ್ ಬಂಡಿಯ ಮುಖ್ಯ ಕಾರ್ಯನಿರ್ವಾಹಕರಾದ ಸುಮತಿ ಮಾತನಾಡಿದರು. ಕೇರಳದ ಮಹಮದ್ ರಫಿ ಮತ್ತು ನಾಗರಹೊಳೆ ಕಾಡಿನ ಜಯ ಮೂಲೆಯೂರು ಪಾಲ್ಗೊಂಡಿದ್ದರು. ಕೇಶವಮೂರ್ತಿ ಸಿ.ಎನ್.  ನಿರೂಪಿಸಿದರು.  

ಮೈಸೂರಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಶನಿವಾರದಿಂದ ಆರಂಭವಾದ ‘ಬಾಳೆ ಮೇಳ’ವನ್ನು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಹಾಗೂ ಗಣ್ಯರು ಉದ್ಘಾಟಿಸಿ 8 ಅಡಿ ಉದ್ದದ ಬಾಳೆಗೊನೆ ಮತ್ತು ವಿವಿಧ ತಳಿಗಳನ್ನು ಪ್ರದರ್ಶಿಸಿದರು

ಗಮನಸೆಳೆದ 8 ಅಡಿ ಉದ್ದದ ಬಾಳೆ ಗೊನೆ

ಮೇಳದಲ್ಲಿ ನೂರಕ್ಕೂ ಹೆಚ್ಚಿನ ಬಾಳೆ ತಳಿಗಳನ್ನು ಪ್ರದರ್ಶಿಸಲಾಗಿದೆ. ‘ಮದರಂಗಿ’ ‘ಚಂದ್ರ ಬಾಳೆ’ ‘ಸಹಸ್ರ ಬಾಳೆ’ ‘ಮಟ್ಟಿ ಬಾಳೆ’ ‘ಬ್ಲೂ ಜಾವ’ ‘ಪೂಜೆ ಬಾಳೆ’ ‘ಕಮಲಾಪುರ ಕೆಂಪು ಬಾಳೆ’ ‘ಚಂಗದಳಿ’ ‘ಕರಿ ಬಾಳೆ’ ‘ರಸಬಾಳೆ’ ‘ಚಿರಳು ಬಾಳೆ’ ‘ಚಿಂಗಮ್’ ಮೊದಲಾದ ತಳಿಗಳ ಗೊನೆಗಳು ನೋಡುಗರ ಗಮನಸೆಳೆಯುತ್ತಿವೆ. ನಂಜನಗೂಡು ರಸಬಾಳೆ ಏಲಕ್ಕಿ ನೇಂದ್ರ ಪಚ್ಚಬಾಳೆ ಕರ್ಪೂರವಲ್ಲಿ ಪೂವನ್ ಮತ್ತು ಅಪರೂಪದ ಬಾಳೆ ಕಂದು ಮತ್ತು ಸಸಿಗಳನ್ನು ಮಾರಾಟಕ್ಕಿಡಲಾಗಿದೆ. ಶಿರಸಿಯ ಪ್ರಸಾದ್ ರಾಮ ಹೆಗಡೆ 30ಕ್ಕೂ ಹೆಚ್ಚಿನ ತಳಿಗಳನ್ನು ಪ್ರದರ್ಶನಕ್ಕೆ ತಂದಿದ್ದಾರೆ. ಅವರು ತಂದಿರುವ ‘ನಮಸ್ತೆ ಬಾಳೆ’ ಮತ್ತು 8 ಅಡಿ ಉದ್ದದ ‘ಸಹಸ್ರ ಬಾಳೆ’ಗೊನೆ ಕಂಡು ನೋಡುಗರು ಅಚ್ಚರಿಗೊಂಡರು. ಬಾಳೆ ಖಾದ್ಯಗಳೂ ಲಭ್ಯ ಇವೆ.

ಇಂದು ಅಡುಗೆ ಚಿತ್ರಕಲಾ ಸ್ಪರ್ಧೆ

ಸುತ್ತೂರಿನ ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಿಂದ ನ.9ರಂದು (ಭಾನುವಾರ) ಮಧ್ಯಾಹ್ನ 12ಕ್ಕೆ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಬಾಳೆ ಅಡುಗೆ ಸ್ಪರ್ಧೆ ನಡೆಯಲಿದೆ.  ‘ಕಿಸಾನ್ ಬಂಡಿ’ಯಿಂದ 5ರಿಂದ 12 ವರ್ಷದವರಿಗೆ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ. 90086 03222 ಸಂಪರ್ಕಿಸಬಹುದು.

ವೈವಿಧ್ಯಮಯ ಬಾಳೆ ತಳಿಗಳ ಔಷಧೀಯ ಗುಣಗಳ ಸಂಶೋಧನೆ ಮತ್ತು ಜನಪ್ರಿಯಗೊಳಿಸುವ ಕಾರ್ಯ ಹೆಚ್ಚಾಗಿ ನಡೆಯಬೇಕಿದೆ
ಡಾ.ಸುಶ್ರುತ್‌ ಗೌಡ, ನರರೋಗ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.