
ಮೈಸೂರು: ರೋಟರಿ ಮಿಡ್‌ಟೌನ್ ಸಂಸ್ಥೆಯು ಭಾನುವಾರ ಓವೆಲ್ಸ್ ಮೈದಾನದಲ್ಲಿ ವಿಶೇಷ ಮಕ್ಕಳಿಗಾಗಿ ಆಯೋಜಿದ್ದ ‘ಬಾಂಧವ್ಯ’ ಕ್ರೀಡಾ ಮಹೋತ್ಸವದಲ್ಲಿ ಅಂಗವಿಕಲ ಮಕ್ಕಳು ಮಿಂಚಿದರು. ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾವು ಎಲ್ಲರಂತೆ ಸಾಧನೆ ಮಾಡಬಲ್ಲೆವು ಎಂದು ನಿರೂಪಿಸಿದರು.
ಸ್ಪರ್ಧೆಯ ಆರಂಭದಲ್ಲಿ ನಡೆದ ಪಥಸಂಚಲನದಲ್ಲಿ ಅಂಗವಿಕಲ ಮಕ್ಕಳು ಹೆಜ್ಜೆ ಹಾಕಿ, ಪೋಷಕರು ಹೆಮ್ಮೆ ಪಡುವಂತೆ ಮಾಡಿದರು. ಶಿಕ್ಷಕರ ಸೂಚನೆ ಪಾಲಿಸಿ, ಅತಿಥಿಗಳಿಗೆ ಸೆಲ್ಯೂಟ್ ನೀಡುತ್ತಿದ್ದಂತೆ, ಗಣ್ಯರು ಭಾವುಕರಾದರು. ಮೈಸೂರಿನ 20ಕ್ಕೂ ಹೆಚ್ಚಿನ ಶಾಲೆಗಳಿಂದ 8-23 ವರ್ಷದ ಸುಮಾರು 400 ಮಕ್ಕಳು ಭಾಗವಹಿಸಿದ್ದರು.
ಉನ್ನತ ಸಾಮರ್ಥ್ಯ ಮತ್ತು ಕಡಿಮೆ ಸಾಮರ್ಥ್ಯ ಉಳ್ಳ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಶಾಟ್‍ಪಟ್ ಮತ್ತು ಟೆನಿಸ್ ಬಾಲ್ ಥ್ರೋ ಮುಂತಾದ ಸ್ಪರ್ಧೆ ನಡೆಯಿತು. ವಿಜೇತರಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಿತರಿಸಲಾಯಿತು. ವಿಜೇತರು ಪದಕ ಹಿಡಿದು ಸಂಭ್ರಮಿಸುವಾಗ ಹೆತ್ತವರ ಕಣ್ಣಾಲಿಗಳು ತುಂಬಿಕೊಂಡವು.
ಚಾಲನೆ: ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರೋಟರಿ ಜಿಲ್ಲಾ ಗವರ್ನರ್ ರವಿಶಂಕರ್ ಡಾಕೋಚ್, ‘ವಿಶೇಷ ಸಾಮರ್ಥ್ಯ ಇರುವ ಮಕ್ಕಳು ಸಾಮಾನ್ಯರಿಗಿಂತ ಹೆಚ್ಚು ಕ್ರೀಯಾಶೀಲರಾಗಿರುತ್ತಾರೆ. ಅವರಿಗೆ ವೇದಿಕೆ ಒದಗಿಸಿ, ಪ್ರೋತ್ಸಾಹ ನೀಡುವ ಅಗತ್ಯವಿದೆ. ಅನುಕಂಪ ತೋರಿಸುವ ಬದಲಾಗಿ ಅವಕಾಶ ನೀಡಬೇಕಿದೆ’ ಎಂದು ಹೇಳಿದರು.
ರೋಟರಿ ಸಹಾಯಕ ಗವರ್ನರ್ ನವೀನ್ ಚಂದ್ರ, ಕಾರ್ಯಕ್ರಮದ ಅಧ್ಯಕ್ಷ ವೀರೇಶ್, ಡಾ. ಕುಮಾರ್, ರೋಟರಿ ಮಿಡ್ ಟೌನ್ ಅಧ್ಯಕ್ಷ ರಾಕೇಶ್ ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.