ADVERTISEMENT

ನಾಗನಹಳ್ಳಿ ಬಳಿ ಬಾರ್: ರೈತರ ಆಕ್ರೋಶ

ಮೈಸೂರಿನ ಅಬಕಾರಿ ಆಯುಕ್ತರ ಕಚೇರಿಗೆ ಮುತ್ತಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 15:12 IST
Last Updated 20 ನವೆಂಬರ್ 2020, 15:12 IST
ಮೈಸೂರಿನ ಸರಸ್ವತಿಪುರಂನಲ್ಲಿರುವ ಅಬಕಾರಿ ಕಚೇರಿ ಮುಂಭಾಗ ರೈತರು ಪ್ರತಿಭಟಿಸಿದರು
ಮೈಸೂರಿನ ಸರಸ್ವತಿಪುರಂನಲ್ಲಿರುವ ಅಬಕಾರಿ ಕಚೇರಿ ಮುಂಭಾಗ ರೈತರು ಪ್ರತಿಭಟಿಸಿದರು   

ಮೈಸೂರು: ನಾಗನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಿಂದ ಅನತಿ ದೂರದಲ್ಲೇ ಬಾರ್‌ ತೆರೆಯಲು ಅನುಮತಿ ನೀಡಿರುವ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಶುಕ್ರವಾರ ಇಲ್ಲಿ ಹರಿಹಾಯ್ದವು.

ನಗರದ ಸರಸ್ವತಿಪುರಂನಲ್ಲಿನ ಅಬಕಾರಿ ಕಚೇರಿ ಮುಂದೆ ಜಮಾಯಿಸಿದ ರೈತ ಸಂಘದ ಪದಾಧಿಕಾರಿಗಳು ಅಬಕಾರಿ ಆಯುಕ್ತ ಮಾದೇಶ್‌ ವಿರುದ್ಧ ಕಿಡಿಕಾರಿದರು. ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಮುನ್ನುಗ್ಗಿದರು. ಸ್ಥಳದಲ್ಲಿದ್ದ ಪೊಲೀಸರು ಆಕ್ರೋಶಭರಿತ ರೈತರನ್ನು ಸಮಾಧಾನ ಪಡಿಸಿದರು.

ಮಾದೇಶ್‌ ರೈತರನ್ನು ಪುಢಾರಿಗಳು ಎಂದಿದ್ದಾರೆ. ರೈತ ಸಮುದಾಯ ಇದನ್ನು ಕ್ಷಮಿಸಲ್ಲ. ಪ್ರಭಾವಿಗಳ ಒತ್ತಡಕ್ಕೆ ಮಣಿದು ನಾಗನಹಳ್ಳಿಯ ದೇಗುಲ, ಕೃಷಿ ಕೇಂದ್ರದ ಸಮೀಪ ಬಾರ್‌ ತೆಗೆದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನನಿರತರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಈಗಾಗಲೇ ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು, ಅಬಕಾರಿ ಹಾಗೂ ಕೃಷಿ ಸಚಿವರ ಗಮನಕ್ಕೆ ತಂದಿದ್ದೇವೆ. ಅವರಿಂದ ಸೂಕ್ತ ಸ್ಪಂದನೆ ಸಿಕ್ಕಿದೆ. ಆದರೆ ಅಬಕಾರಿ ಆಯುಕ್ತ ಮಾದೇಶ್‌ ಪ್ರಭಾವಿಗಳ ಋಣ ತೀರಿಸಲು ಮುಂದಾಗಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತನನ್ನು ಹೂತು ಹಾಕಲು ಯತ್ನಿಸುತ್ತಿದ್ದಾರೆ ಎಂದು ರೈತ ಸಂಘದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಸಂಘದ ಇ.ಎನ್.ಕೃಷ್ಣ, ಎಚ್‌.ಎಸ್.ಚಂದ್ರಶೇಖರ್, ಎಂ.ಮಂಜು, ಎಚ್‌.ನಾರಾಯಣ್, ಆಟೊ ಚಾಲಕರ ಸಂಘದ ಪದಾಧಿಕಾರಿಗಳು, ದಿನಗೂಲಿ ನೌಕರರು, ಸ್ತ್ರೀಶಕ್ತಿ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.