ADVERTISEMENT

ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಮತ್ತೊಂದು ದುರಂತ: ಶಾಸಕ ಯತ್ನಾಳ

ಹಿಂದೂ ಜಾಗೃತ ವೇದಿಕೆ ಕಾರ್ಯಕ್ರಮ: ಭಾಗಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:52 IST
Last Updated 20 ನವೆಂಬರ್ 2025, 4:52 IST
<div class="paragraphs"><p>ಕಲಾಮಂದಿರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಭಾರತಾಂಬೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್‌ ಭಾವಚಿತ್ರಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪುಷ್ಪನಮನ ಸಲ್ಲಿಸಿದರು. ಭಾಷ್ಯಂ ಸ್ವಾಮೀಜಿ, ಶ್ರೀನಿವಾಸನ್‌ ಗುರೂಜಿ, ಮಲ್ಲೇಶ್‌, ಎಂ. ಮಂಜುನಾಥ್‌, ಎಂ.ಡಿ. ಹರೀಶ್ ಕುಮಾರ್ ಹೆಗಡೆ, ಎಚ್.ಎನ್.ವೆಂಕಟೇಶ್ ಜೊತೆಗಿದ್ದರು</p></div>

ಕಲಾಮಂದಿರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಭಾರತಾಂಬೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್‌ ಭಾವಚಿತ್ರಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪುಷ್ಪನಮನ ಸಲ್ಲಿಸಿದರು. ಭಾಷ್ಯಂ ಸ್ವಾಮೀಜಿ, ಶ್ರೀನಿವಾಸನ್‌ ಗುರೂಜಿ, ಮಲ್ಲೇಶ್‌, ಎಂ. ಮಂಜುನಾಥ್‌, ಎಂ.ಡಿ. ಹರೀಶ್ ಕುಮಾರ್ ಹೆಗಡೆ, ಎಚ್.ಎನ್.ವೆಂಕಟೇಶ್ ಜೊತೆಗಿದ್ದರು

   

-ಪ್ರಜಾವಾಣಿ ಚಿತ್ರ

ಮೈಸೂರು: ‘ಮುಸ್ಲಿಂ ವಿದ್ವಾಂಸರ (ಸ್ಕಾಲರ್ಸ್‌) ಒಕ್ಕೂಟವು ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಯೋಜಿಸಿದ್ದು, ಹಿಂದೂಗಳು ಜಾಗೃತರಾಗದಿದ್ದರೆ ದೆಹಲಿ ಸ್ಫೋಟ ಘಟನೆ ಮರುಕಳಿಸಬಹುದು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ದೂರಿದರು.

ADVERTISEMENT

ನಗರದಲ್ಲಿ ಹಿಂದೂ ಜಾಗೃತ ವೇದಿಕೆಯು ಮಂಗಳವಾರ ಏರ್ಪಡಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿ, ‘ಸ್ಫೋಟದ ಸಂಚು ರೂಪಿಸಿದವರೆಲ್ಲ ವೈದ್ಯರೆನ್ನುವುದು ಆತಂಕಕಾರಿ. ಮೋದಿ ಪ್ರಧಾನಿಯಾಗಿರುವುದರಿಂದ ದೇಶ ಸುರಕ್ಷಿತವಾಗಿದೆ. ದೇವಸ್ಥಾನದ‌ ಪ್ರಸಾದ, ನೀರಿನಲ್ಲಿ ವಿಷ ಬೆರೆಸುವ ನೀಚ ಕೆಲಸ ನಡೆದಿದ್ದು, ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಂತಹವರನ್ನು ರಕ್ಷಿಸುತ್ತಿದೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಹಿಂದುತ್ವದ ಹೆಸರಿನಲ್ಲಿ ಗೆದ್ದವರು ಸ್ವಹಿತಕ್ಕಾಗಿ ಹೊಂದಾಣಿಕೆ‌ ಮಾಡಿಕೊಂಡಿದ್ದಾರೆ. ಹೀಗಾಗಿ ವಿರೋಧ ಪಕ್ಷವೆಂಬುದೇ ಇಲ್ಲ. ನಾನೆಂದೂ ಹೊಂದಾಣಿಕೆ ಮಾಡಿಳ್ಳದ್ದರಿಂದ ನನ್ನ ವಿರುದ್ದ 79 ಪ್ರಕರಣ ದಾಖಲಾಗಿದೆ’ ಎಂದರು.

‘ಸಚಿವ ಜಮೀರ್ ಅಹಮ್ಮದ್ ಅವರು, 400 ಪಿಎಸ್‌ಐ ಹುದ್ದೆಗಳ ನೇಮಕಾತಿ ಆಕಾಂಕ್ಷಿಗಳಾದ ಮುಸ್ಲಿಮರಿಗೆ ಮಾತ್ರ ವಿಶೇಷ ತರಬೇತಿ ಆಯೋಜಿಸಿದ್ದಾರೆ. ಅಂತಹವರಿಗೆ ಕೆಲಸ ಸಿಗುತ್ತದೆ. ಹಿಂದೂಗಳ ರಕ್ಷಣೆಗೆ ಪೊಲೀಸರು ನಿಲ್ಲುತ್ತಾರೆಯೇ? ‘ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ಯಾವ ಗ್ಯಾರಂಟಿ ಯೋಜನೆಯೂ ಬೇಕಿಲ್ಲ. ಕರ್ನಾಟಕ ದೇಶದಲ್ಲೇ ಶ್ರೀಮಂತ ರಾಜ್ಯ. ಆರ್ಥಿಕ ಶಿಸ್ತು ತಂದರೆ ಕೊರತೆ ಇಲ್ಲದ ಬಜೆಟ್ ನೀಡಬಹುದು’ ಎಂದರು.

‘ರಾಜ್ಯದಲ್ಲಿ ಉರ್ದು ಶಾಲೆ, ಮದರಸಾಗಳಿಗೆ ಸಿಗುವಷ್ಟು ಹಣ ಕನ್ನಡ ಶಾಲೆಗಳಿಗೆ ಸಿಗುತ್ತಿಲ್ಲ. ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಯಥೇಚ್ಛ ಹಣವಿದೆ. ದಲಿತರ ಉದ್ದಾರಕ್ಕಿಲ್ಲ’ ಎಂದರು.

‘ಅಟಲ್‌ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ, ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳಕ್ಕೆ ಸಹಕರಿಸಿದ್ದರು. ಮೇಕೆದಾಟು ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದ ಪರವಾಗಿ ನ್ಯಾಯಾಲಯಕ್ಕೆ ವಿವರ ನೀಡಿದ್ದರಿಂದಲೇ ಸುಪ್ರೀಂ ಕೋರ್ಟ್‌ನಲ್ಲಿ ವಾದ ಗೆಲ್ಲಲು ಸಾಧ್ಯವಾಯಿತು’ ಎಂದರು.

‘ಭಯೋತ್ಪಾದಕರ ವಿರುದ್ಧ, ಸಂವಿಧಾನಕ್ಕೆ ಗೌರವ ಕೊಡದವರ ವಿರುದ್ಧ ಇಸ್ರೇಲ್ ಮಾದರಿ ಕ್ರಮ ಅಗತ್ಯ. ಮುಸ್ಲಿಮರು- ದಲಿತರು ಎಂದೂ ಸಹೋದರರಾಗಲು ಸಾಧ್ಯವಿಲ್ಲ. ಬಿ.ಆರ್. ಅಂಬೇಡ್ಕರ್ ಸಹ ಮುಸ್ಲಿಂ ವಿರೋಧಿಯಾಗಿದ್ದರೆಂಬುದನ್ನು ದಲಿತರು ಅರಿಯಬೇಕು’ ಎಂದರು.

‘ವೀರಶೈವ- ಲಿಂಗಾಯತ ಸಮುದಾಯವನ್ನು ಕೆಲವು ಸ್ವಾಮೀಜಿಗಳೇ ಒಡೆಯುತ್ತಿದ್ದಾರೆ. ಸನಾತನ ಧರ್ಮ ವಿರೋಧಿಸುವ ಸಂತರು ಕೇಸರಿ ಬದಲಿಗೆ ಹಸಿರು ಅಂಗಿ ಧರಿಸಲಿ. ಕನೇರಿ ಶ್ರೀಗಳನ್ನು ನಿರ್ಬಂಧಿಸುವ ಸರ್ಕಾರವು ನಿಜಗುಣಾನಂದ, ಸಾಣೆಹಳ್ಳಿ ಶ್ರೀಗಳನ್ನು ಏಕೆ ಗಡಿಪಾರು ಮಾಡಿಲ್ಲ’ ಎಂದು ಪ್ರಶ್ನಿಸಿದರು.

ಯೋಗಾನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಪ್ರೊ. ಭಾಷ್ಯಂ ಸ್ವಾಮೀಜಿ ‘ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಹಿಂದೂ ಧರ್ಮ ಎಲ್ಲ ಧರ್ಮೀಯರು ಸಮಾನರಾಗಿ ಬದುಕುವ ಅವಕಾಶ ನೀಡಿದೆ’ ಎಂದರು.

ಹಿಂದೂ ಜಾಗೃತಾ ವೇದಿಕೆ ಅಧ್ಯಕ್ಷ ಮಲ್ಲೇಶ್ ‘ ಯತ್ನಾಳರಯ ಅಸಹಾಯಕ ಸ್ಥಿತಿಯಲ್ಲಿರುವ ಹಿಂದೂ ಧರ್ಮದ ಧ್ವನಿಯಾಗಿದ್ದಾರೆ. ಶಾಸಕರಾಗಿ ಮಾದರಿ ಅಭಿವೃದ್ಧಿ ವಾಡಿದ್ದಾರೆ. ಮುಖ್ಯಮಂತ್ರಿ ಆದರೆ ನರೇಂದ್ರ ಮೋದಿ ಮಾದರಿಯಲ್ಲೇ ರಾಜ್ಯದಲ್ಲೂ ಅಭಿವೃದ್ಧಿ ವಾಡಲಿದ್ದಾರೆ’ ಎಂದರು.

ಭಜರಂಗ ಸೇನೆ ರಾಜ್ಯ ಅಧ್ಯಕ್ಷ ಎಂ.ಮಂಜುನಾಥ್ ‘ಇಡೀ ಸಮಾಜ ಪರ್ವ ಕಾಲದಲ್ಲಿ ಬಂದು ನಿಂತಿದ್ದು, ಈಗ ಎಚ್ಚೆತ್ತುಕೊಳ್ಳದೇ ಇದ್ದರೆ ಉಳಿಗಾಲವಿಲ್ಲ. ದೇಶ ಹಾಗೂ ರಾಜ್ಯಕ್ಕೆ ಹಿಂದುತ್ವ ಆಧಾರಿತ ಅಭಿವೃದ್ಧಿ ಬೇಕಿದೆ’ ಎಂದರು.

ವಕೀಲರಾದ ಎಂ.ಡಿ. ಹರೀಶ್ ಕುಮಾರ್ ಹೆಗಡೆ, ಎಚ್.ಎನ್.ವೆಂಕಟೇಶ್, ಚಿಂತಕ ಭಾಸ್ಕರ ನಾಯ್ಡು, ಎನ್.ಶ್ರೀನಿವಾಸನ್ ಗುರೂಜಿ, ಉದ್ಯಮಿ ಪಿ.ಎಸ್.ಪಾಟೀಲ್, ಎಂಸಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಸುನೀಲ್, ಶಂಭು ಪಟೇಲ್, ಮಧು ಯಡಿಯಾಲ, ಪ್ರಮೋದ್ ಚಿಕ್ಕಮಣ್ಣೂರು, ಕರುಹಟ್ಟಿ ಇದ್ದರು.

ಟಿಪ್ಪು ಸುಲ್ತಾನ್‌ ಮೈಸೂರು ಹುಲಿಯಲ್ಲ ಹಿಂದುಗಳ ಹತ್ಯೆ ಮಾಡಿದ ನರಹಂತಕ. ಮೈಸೂರಿನ ಸರ್ವಾಂಗೀಣ ಅಭಿವೃದ್ಧಿ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್‌, ನಿಜವಾದ ಹುಲಿ
– ಬಸನಗೌಡ ಪಾಟೀಲ ಯತ್ನಾಳ ಶಾಸಕ

‘ಬಿಜೆಪಿ ನಾಯಕತ್ವ ಬದಲಾವಣೆ ಅಗತ್ಯ’

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಎಂದೂ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಧ್ವನಿ ಎತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ನಾಯಕತ್ವದ ಬದಲಾವಣೆ ಅಗತ್ಯವಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ‘ಕಳೆದೆರಡು ವರ್ಷದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದೇ ಅವರ ಸಾಧನೆ. ಬಿಜೆಪಿ ಮುಖಂಡರು ಹಾಗೂ ಜನರ ಮನಸ್ಸಿನಲ್ಲಿ ಅವರ ಬಗ್ಗೆ ಅನುಕಂಪವಿಲ್ಲ. ಈಗ ಸದಾನಂದಗೌಡರ ಭೇಟಿಯಂತಹ ನಾಟಕವಾಡುತ್ತಿದ್ದಾರಷ್ಟೇ’ ಎಂದರು.

ಬೈಕ್‌ ರ್‍ಯಾಲಿ: ಭವ್ಯ ಸ್ವಾಗತ

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಬುಧವಾರ ನಗರದಲ್ಲಿ ಬೈಕ್‌ ರ್‍ಯಾಲಿ ಮೂಲಕ ಕರೆತರಲಾಯಿತು. ಮೈಸೂರು-ಬೆಂಗಳೂರು ರಸ್ತೆಯ ಮಣಿಪಾಲ್ ಆಸ್ಪತ್ರೆ ವೃತ್ತದ ಬಳಿ ಅವರನ್ನು ಅಭಿಮಾನಿಗಳು ಸ್ವಾಗತಿಸಿದರು.

ಅಲ್ಲಿಂದ ಪ್ರಮುಖ ಬೀದಿಗಳಲ್ಲಿ ಸಾಗಿ ಕಲಾಮಂದಿರ ತಲುಪಿತು. ಕಲಾಮಂದಿರದಲ್ಲಿ ಪಟಾಕಿ ಸಿಡಿಸಿ ಹೂವಿನ ಮಳೆಸುರಿಗೈಯಲಾಯಿತು. ಅಭಿಮಾನಿಗಳು ಯತ್ನಾಳರ ಘೋಷಣೆ ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.