ADVERTISEMENT

ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಜುಲೈ 11ರಂದು: ಬಡಗಲಪುರ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 14:00 IST
Last Updated 23 ಜೂನ್ 2022, 14:00 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ    

ಮೈಸೂರು: ‘ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸರ್ಕಾರವು ಸ್ಪಂದಿಸದಿರುವುದನ್ನು ಖಂಡಿಸಿ ಜುಲೈ 11ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

‘ಸರ್ಕಾರವು ಕಬ್ಬು ನಿಯಂತ್ರಣ ಮಂಡಳಿ ಸಭೆಯನ್ನು ಮೂರು ವರ್ಷಗಳಿಂದಲೂ ನಡೆಸದಿರುವುದು ಖಂಡನೀಯ. ಎಸ್‌ಎಪಿ (ಸ್ಟೇಟ್ ಅಡ್ವೈಸರಿ ಪ್ರೈಸ್)ಯನ್ನೂ 4 ವರ್ಷಗಳಿಂದ ಕೊಟ್ಟಿಲ್ಲ. ಸಕ್ಕರೆ ಕಾರ್ಖಾನೆಗಳ ಮಾಲೀಕರು ಎಫ್‌ಆರ್‌ಪಿಗಿಂತಲೂ ಕಡಿಮೆ ಬಿಲ್ ಕೊಡುತ್ತಿದ್ದಾರೆ. ತೂಕದಲ್ಲೂ ಮೋಸ ಮಾಡಲಾಗುತ್ತಿದೆ. ಇದನ್ನು ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಹೋರಾಟ ತೀವ್ರಗೊಳಿಸಲಾಗುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಹೇಳಿದರು.

‘ಇದಕ್ಕೆ ಪೂರ್ವಭಾವಿಯಾಗಿ ಜುಲೈ 2ರಂದು ದಾವಣಗೆರೆ ಎ‍ಪಿಎಂಸಿಯಲ್ಲಿ ನಡೆಯಲಿರುವ ರಾಜ್ಯ ಕಾರ್ಯಕಾರಿಣಿಯಲ್ಲೂ ಚರ್ಚಿಸಲಾಗುವುದು. ಅಂದು 30 ಜಿಲ್ಲೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಮುಖ್ಯವಾಗಿ, ಸಂಘದ ಮುಂದಿನ ರಾಜಕೀಯ ಸ್ಪಷ್ಟತೆಯ ಬಗ್ಗೆ ಸಮಾಲೋಚಿಸಲಾಗುತ್ತದೆ. ಹಸಿರು ಟವೆಲ್‌ ದುರುಪಯೋಗ ಮಾಡಿಕೊಳ್ಳುತ್ತಿರುವುದು ಹಾಗೂ ಅದರ ಮೌಲ್ಯ–ಘನತೆಗೆ ಮಸಿ ಬಳಿಯುತ್ತಿರುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗುತ್ತದೆ’ ಎಂದು ವಿವರಿಸಿದರು.

ADVERTISEMENT

‘ಚಳವಳಿಗಳನ್ನು ಹತ್ತಿಕ್ಕಲು ಸರ್ಕಾರ ನಡೆಸುತ್ತಿರುವ ಹುನ್ನಾರದ ವಿರುದ್ಧದ ಹೋರಾಟಕ್ಕೆ ಚರ್ಚಿಸಲಾಗುತ್ತದೆ. ರೈತ ಸಂಘದ ಬಣಗಳು ಹೇಗೆ ಹೊಂದಾಗಬೇಕು ಎಂಬ ಬಗ್ಗೆ ಸೈದ್ಧಾಂತಿಕ ಸ್ಪಷ್ಟತೆಗೆ ಬರಲಾಗುವುದು. ರೈತ ಚಳವಳಿ ಆಶೋತ್ತರದ ಗುರಿಗೆ ಕ್ರಿಯಾಯೋಜನೆ ರೂಪಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.‌

‘ಜುಲೈ 21ರಂದು ನರಗುಂದದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ನಿರಂತರ ಹೋರಾಟದ ಸಂಕಲ್ಪವನ್ನು ಅಲ್ಲಿ ಮಾಡಲಾಗುವುದು’ ಎಂದು ಹೇಳಿದರು.

‘ರಕ್ಷಣಾ ಪಡೆಗಳಲ್ಲಿ 4 ವರ್ಷಗಳ ಅಲ್ಪಾವಧಿ ನೇಮಕಾತಿಯ ‘ಅಗ್ನಿಪಥ’ ಯೋಜನೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆಯಂತೆ ಸಂಯುಕ್ತ ಹೋರಾಟ ಕರ್ನಾಟಕದಿಂದ ಜೂನ್‌ 24ರಂದು ಬೆಳಿಗ್ಗೆ 11ಕ್ಕೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಕಬ್ಬಿಗೆ ಎಫ್‌ಆರ್‌ಪಿ (ನ್ಯಾಯಸಮ್ಮತ ಹಾಗೂ ಮೌಲ್ಯಾಧಾರಿತ ಬೆಲೆ)ಯಂತೆ ರೈತರಿಗೆ ಹಣ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ವಿಧಾನಪರಿಷತ್‌ ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಚಳವಳಿ ಬೆಂಬಲಿತ ಅಭ್ಯರ್ಥಿ ಕಣಕ್ಕಿಳಿಸಲಾಗಿತ್ತು. ನಮಗೆ ಸಿಕ್ಕ ಬೆಂಬಲವು ಮತವಾಗಿ ಪರಿವರ್ತನೆ ಆಗಲಿಲ್ಲ. ಈ ಬಗ್ಗೆ ಸಮಾಲೋಚನೆಗೆ ಜುಲೈ 1ರಂದು ನಗರದಲ್ಲಿ ಸಭೆ ನಡೆಸಲಾಗುವುದು’ ಎಂದರು.

‘ನಕಲಿ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ‌ ತಡೆಗೆ ಆಗ್ರಹಿಸಲು ಜೂನ್‌ 25ರಂದು ಕೃಷಿ ಸಚಿವರನ್ನು ಭೇಟಿಯಾಗಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.