ADVERTISEMENT

ಮೈಸೂರು: ಬೀನ್ಸ್ ಬೆಲೆಯಲ್ಲಿ ಭಾರಿ ಏರಿಕೆ

ಟೊಮೆಟೊ, ಹಸಿಮೆಣಸಿನಕಾಯಿ ದುಬಾರಿ, ಕುಸಿದ ಬದನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 7:16 IST
Last Updated 23 ಏಪ್ರಿಲ್ 2019, 7:16 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಮೈಸೂರು: ಸಮರ್ಪಕವಾಗಿ ಮುಂಗಾರುಪೂರ್ವ ಮಳೆ ಬೀಳದ ಕಾರಣ ಇಡೀ ಜಿಲ್ಲೆಯಲ್ಲಿ ತಾಪಮಾನ ನಿಯಂತ್ರಣಕ್ಕೆ ಬರುತ್ತಿಲ್ಲ. ಹಲವೆಡೆ ಕೊಳವೆಬಾವಿಗಳು ಬರಿದಾಗಿವೆ. ಮತ್ತೆ ಕೆಲವು ಕೊಳವೆಬಾವಿಗಳ ನೀರಿನ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ. ಇದರ ಪರಿಣಾಮ ತರಕಾರಿ ಬೆಳೆಗಳು ಬಾಡುತ್ತಿವೆ. ಇಳುವರಿಯಂತೂ ತೀರಾ ಕನಿಷ್ಠಮಟ್ಟಕ್ಕೆ ಕುಸಿದಿದೆ.

ಇದರಿಂದ ಬದನೆಕಾಯಿ ಒಂದನ್ನು ಬಿಟ್ಟು ಉಳಿದೆಲ್ಲ ತರಕಾರಿಗಳ ಬೆಲೆಗಳು ಗಗನಕ್ಕೇರಿವೆ. ಬೀನ್ಸ್‌ ಬೆಲೆ ಇದರಲ್ಲಿ ಮುಂದಿದ್ದು, ಸಗಟು ಧಾರಣೆ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 70ನ್ನು ಮುಟ್ಟಿದೆ. ಚಿಲ್ಲರೆ ಬೆಲೆ ಹಾಪ್‌ಕಾಮ್ಸ್‌ನಲ್ಲಿ ₹ 82ನ್ನು ಮೀರಿದೆ. ಇನ್ನುಳಿದ ಮಾರುಕಟ್ಟೆಗಳಲ್ಲಿ ಇದರ ದರ ₹ 80ರಿಂದ ₹ 100ರವರೆಗೆ ಇದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಇದರ ಸಗಟು ಧಾರಣೆ ₹ 30ನ್ನು ತಲುಪಿತ್ತು. ಮುಂಗಾರುಪೂರ್ವ ಮಳೆ ಹೆಚ್ಚಾಗಿ ಬಿದ್ದಿದ್ದರಿಂದ ದರ ಇಷ್ಟು ಪ್ರಮಾಣದಲ್ಲಿ ಹೆಚ್ಚಾಗಿರಲಿಲ್ಲ. ಆದರೆ, 2017ರಲ್ಲಿ ಮುಂಗಾರುಪೂರ್ವ ಮಳೆ ಕೈಕೊಟ್ಟಿತ್ತು. ಇದರಿಂದಾಗಿ ಆ ವರ್ಷದ ಏಪ್ರಿಲ್‌ನಲ್ಲಿ ದರ ₹ 80ನ್ನು ತಲುಪಿತ್ತು.

ADVERTISEMENT

ಟೊಮೆಟೊ ಬೆಲೆಯ ನಾಗಾಲೋಟವೂ ಮುಂದುವರಿದಿದೆ. ಇದರ ಆವಕ ಮಾರುಕಟ್ಟೆಗೆ ಕಡಿಮೆಯಾದ ದಿನಗಳಂದು ಇದರ ಸಗಟು ಧಾರಣೆ ಕೆ.ಜಿಗೆ ₹ 30ನ್ನು ಮುಟ್ಟಿದೆ. ಹಾಪ್‌ಕಾಮ್ಸ್‌ನಲ್ಲಿ ಇದರ ಧಾರಣೆ ₹ 44 ಇದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆ.ಜಿಗೆ ₹ 40ರಿಂದ ₹ 60ರವರೆಗೂ ಮಾರಾಟವಾಗುತ್ತಿದೆ.

ಧಾನ್ಯಗಳ ದರಗಳಲ್ಲಿ ಏರಿಳಿತ

ಈ ವಾರ ಧಾನ್ಯಗಳ ಸಗಟು ದರಗಳಲ್ಲಿ ಸ್ವಲ್ಪ ಏರಿಳಿತವಾಗಿದೆ. ತೊಗರಿಬೇಳೆ ಸಗಟು ಧಾರಣೆ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 82 ಇದ್ದದ್ದು ₹ 78ಕ್ಕೆ ಹಾಗೂ ₹ 80ರಲ್ಲಿದ್ದ ಉದ್ದಿನ ಬೇಳೆ ₹ 78ಕ್ಕೆ ಕಡಿಮೆಯಗಿದೆ. ಕೆ.ಜಿಗೆ ₹ 74ರಲ್ಲಿದ್ದ ಹೆಸರುಬೇಳೆ ₹ 76ಕ್ಕೆ ಏರಿಕೆಯಾಗಿದೆ. ಹೆಸರುಕಾಳು ₹ 74ರಲ್ಲೇ ಮುಂದುವರಿದಿದೆ.

ಮತ್ತೆ ಇಳಿದ ಕೋಳಿಮೊಟ್ಟೆ ಧಾರಣೆ

ಕಳೆದ ವಾರ ಕೋಳಿ ಮೊಟ್ಟೆ ಧಾರಣೆ ಚೇತರಿಕೆ ಪಡೆದಿದ್ದು, ಮೊಟ್ಟೆ ಉತ್ಪಾದಕರಲ್ಲಿ ನಿರೀಕ್ಷೆ ಮೂಡಿಸಿತ್ತು. ಆದರೆ, ಕೇವಲ ಒಂದೇ ವಾರದಲ್ಲಿ ಇವರ ನಿರೀಕ್ಷೆ ಹುಸಿಯಾಯಿತು. ಕಳೆದ ವಾರ ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ₹ 3.47ರಿಂದ ₹ 3.65ನ್ನು ತಲುಪಿತ್ತು. ಆದರೆ, ಈಗ ಇದರ ದರ ಒಂದು ಮೊಟ್ಟೆಗೆ ₹ 3.50 ಆಗಿದೆ.

ಕೋಳಿ ಮಾಂಸದ ದರ ಈ ವಾರ ಕಡಿಮೆಯಾಗಿದೆ. ಕರ್ನಾಟಕ ರಾಜ್ಯ ಪೌಲ್ಟ್ರಿ ಫಾರ್ಮಸ್ ಅಂಡ್ ಬ್ರೀಡರ್ಸ್ ಅಸೋಸಿಯೇಷನ್‌ನ ಬ್ರಾಯ್ಲರ್ ಕೋಳಿ ಮಾಂಸದ ದರ ಕೆ.ಜಿಗೆ ₹ 88 ಇದ್ದದ್ದು, ಇದೀಗ ₹ 101ಕ್ಕೆ ಏರಿಕೆ ಕಂಡಿದೆ. ಪೇರೆಂಟ್‌ ಕೋಳಿ ಮಾಂಸದ ದರವು ಕೆ.ಜಿಗೆ ₹ 100ರಲ್ಲೇ ಮುಂದುವರಿದಿದೆ.

ತರಕಾರಿಗಳು ಕಳೆದ ವಾರದ ಧಾರಣೆ ಈಗಿನ ಧಾರಣೆ (ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಬೆಲೆ)

ಟೊಮೆಟೊ ; 30; 27

ಬೀನ್ಸ್ ; 60; 70

ಕ್ಯಾರೆಟ್; 28; 30

ಎಲೆಕೋಸು; 15; 15

ದಪ್ಪಮೆಣಸಿನಕಾಯಿ; 50; 42

ಬದನೆ ; 15;05

ನುಗ್ಗೆಕಾಯಿ; 25; 20

ಹಸಿಮೆಣಸಿನಕಾಯಿ; 40; 45

ಈರುಳ್ಳಿ; 12; 11

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.