ತಿ. ನರಸೀಪುರ: ಇಲ್ಲಿನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ 13ನೇ ಮಹಾ ಕುಂಭಮೇಳದ ಎರಡನೇ ದಿನವಾದ ಮಂಗಳವಾರ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡಿದರು.
ಮುಂಜಾನೆಯಿಂದಲೇ ಸಂಗಮಕ್ಕೆ ಆಗಮಿಸುತ್ತಿದ್ದ ಭಕ್ತರು, ಅಗಸ್ತ್ಯೇಶ್ವರಸ್ವಾಮಿ, ಗುಂಜಾ ನರಸಿಂಹಸ್ವಾಮಿ, ಆನಂದೇಶ್ವರ, ಭಿಕ್ಷೇಶ್ವರಸ್ವಾಮಿ ದೇಗುಲಗಳ ಸ್ನಾನಘಟ್ಟಗಳಲ್ಲಿ ಮಿಂದು, ಸೂರ್ಯನಿಗೆ ಅರ್ಘ್ಯ ಸಲ್ಲಿಸಿದರು. ನಂತರ ದೇಗುಲಗಳಲ್ಲಿ ಸರದಿ ಸಾಲಿನಲ್ಲಿ ಗಂಟೆಗೂ ಹೆಚ್ಚು ಕಾಲ ನಿಂತು ದೇವರ ದರ್ಶನ ಪಡೆದರು.
ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ಹಾಗೂ ನೆರೆ ರಾಜ್ಯಗಳಿಂದ ಜನರು, ಬಿಸಿಲಿನ ಝಳದಲ್ಲೇ ಹಳೇ ತಿರಮಕೂಡಲಿನ ಪಿಟೀಲ್ ಚೌಡಯ್ಯ ವೃತ್ತದ ಬಳಿ ವಾಹನ ನಿಲ್ಲಿಸಿ, ನಡೆದು ಬಂದರು.
ಸಂಚಾರ ಅಸ್ತವ್ಯಸ್ತ: ಜನಸಂದಣಿಯಿಂದ ರಾಷ್ಟ್ರೀಯ ಹೆದ್ದಾರಿಯ ಫ್ಲೈಒವರ್ ಹಾಗೂ ಸರ್ವಿಸ್ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಸಂಚಾರ ಪೊಲೀಸರು ಸುಗಮಗೊಳಿಸಲು ಪ್ರಯಾಸಪಟ್ಟರು. ಆದಿಚುಂಚನಗಿರಿ ರಜತ ಭವನದ ಹೊರ ಆವರಣ ಹಾಗೂ ಒಳ ಆವರಣದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.
ಗಾಯಕಿ ವಾಣಿ ಹರಿಕೃಷ್ಣ, ಸಂಗೀತ ನಿರ್ದೇಶಕ ವೇಣುಗೋಪಾಲ್, ಕಿರುತೆರೆ ನಟಿ ಪುಷ್ಪಾ ಸ್ವಾಮಿ ದರ್ಶನ ಪಡೆದರು.
‘ಹಲವು ಬಾರಿ ಇಲ್ಲಿನ ಕುಂಭಮೇಳದಲ್ಲಿ ಪಾಲ್ಗೊಂಡಿದ್ದೇನೆ. ಇಂದು ಕೂಡ ಭಾಗವಹಿಸಿ ದೇವರ ದರ್ಶನ ಪಡೆದಿದ್ದೇನೆ. ಬಹಳ ಸಂತೋಷವಾಗಿದೆ. ಇಂದು ನಮ್ಮ ಗಾಯನ ಕಾರ್ಯಕ್ರಮವಿದ್ದು, ಮತ್ತಷ್ಟು ಖುಷಿ ಕೊಟ್ಟಿದೆ’ ಎಂದರೆ, ವೇಣುಗೋಪಾಲ್, ‘ಮೊದಲ ಬಾರಿಗೆ ಕುಂಭಮೇಳದಲ್ಲಿ ಭಾಗವಹಿಸಿರುವೆ. ವ್ಯವಸ್ಥಿತವಾಗಿ ಕುಂಭಮೇಳ ಆಯೋಜಿಸಲಾಗಿದೆ. ಗಣ್ಯರು, ಸಾಮಾನ್ಯರು ಎನ್ನುವ ಭೇದಭಾವವಿಲ್ಲ. ಎಲ್ಲರಿಗೂ ಒಂದೇ ರೀತಿಯಲ್ಲಿ ದೇವರ ದರ್ಶನ ಪಡೆಯಲು ಸೌಲಭ್ಯವಿದೆ’ ಎಂದರು.
ಯಾಗಶಾಲೆಯಲ್ಲಿ ಹೋಮ: ಇಲ್ಲಿನ ಯಾಗಶಾಲೆಯಲ್ಲಿ ಲೋಕ ಕಲ್ಯಾಣಕ್ಕೆ ರುದ್ರಹೋಮ, ಗಣ ಹೋಮ, ಚಂಡಿಕಾ ಹೋಮ ಶ್ರೀ ವಿದ್ಯಾ ಹೋಮ ನಡೆದವು.
ಯಾಗದಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಕೈಲಾಸಶ್ರಮದ ಜಯೇಂದ್ರತೀರ್ಥ ಪುರಿ ಸ್ವಾಮೀಜಿ, ‘ಲಕ್ಷ - ಕೋಟ್ಯಾಂತರ ಮಂದಿ ಒಂದೆಡೆ ಸೇರಿ ಪುಣ್ಯ ಸ್ನಾನ ಮಾಡಿ ಅಧ್ಯಾತ್ಮ ಹಾಗೂ ಧಾರ್ಮಿಕ ಚಿಂತನೆ ಮಾಡುವ ಉತ್ಸವವೆಂದರೆ ಅದು ಕುಂಭಮೇಳ’ ಎಂದರು.
‘ಸಮುದ್ರ ಮಂಥನದಲ್ಲಿ ಮೊದಲ ಬಂದ ವಿಷವನ್ನು ಕುಡಿದ ಶಿವ ನೀಲಕಂಠನಾದ ನಂತರ ಬಂದ ಅಮೃತಕ್ಕಾಗಿ ಸುರಾಸುರರು ಹೋರಾಡುವಾಗ ಕುಂಭದಿಂದ ಅಮೃತದ ಹನಿಗಳು ಬಿದ್ಧ ಸ್ಥಳದಲ್ಲಿ ಕುಂಭಮೇಳಗಳು ನಡೆಯುತ್ತವೆ’ ಎಂದು ಹೇಳಿದರು.
‘ಭಾರತ ಪುಣ್ಯ ಹಾಗೂ ಕರ್ಮ ಭೂಮಿ. ಪ್ರಯಾಗ, ಉಜ್ಜಯಿನಿ, ಹರಿದ್ವಾರದಲ್ಲಿ ನಡೆಯುವ ಕುಂಭಮೇಳದಂತೆಯೇ ತಿರುಮಕೂಡಲಿನಲ್ಲಿ ನಡೆಯುತ್ತಿದೆ. ತಿರುಚ್ಚಿ ಶ್ರೀಗಳು, ಶಿವಪುರಿ ಶ್ರೀ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ಕುಂಭಮೇಳ ಆರಂಭಿಸಿದರು. ತ್ರಿವೇಣಿ ಸಂಗಮದಕ್ಕು ರುದ್ರಪಾದ, ಅಶ್ವತ್ಥ ಮರವಿದೆ’ ಎಂದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಶಾಖಾ ಮಠದ ಸೋಮೇಶ್ವರ ನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಶ್ರೀಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.