ಮೈಸೂರು: ‘ಶೇ 65ರಷ್ಟು ಬಾಯಿ ಕ್ಯಾನ್ಸರ್ ಪ್ರಕರಣಗಳು ಅರಿವಿನ ಕೊರತೆಯಿಂದ ತಡವಾಗಿ ಪತ್ತೆಯಾಗುತ್ತವೆ. ಕೇವಲ ಎರಡು ನಿಮಿಷಗಳ ಸ್ವಯಂ-ಪರೀಕ್ಷೆಯ ಮೂಲಕ ಇದನ್ನು ಮೊದಲೇ ಪತ್ತೆ ಹಚ್ಚಿ ಸೂಕ್ತ ಸಮಯದಲ್ಲೇ ಚಿಕಿತ್ಸೆ ಪಡೆಯಬಹುದಾಗಿದೆ’ ಎಂದು ಭಾರತ್ ಆಸ್ಪತ್ರೆ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಯ ವೈದ್ಯಕೀಯ ಅಧೀಕ್ಷಕಿ ಡಾ.ವೈ.ಎಸ್. ಮಾಧವಿ ಹೇಳಿದರು.
ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಆಸ್ಪತ್ರೆಯಲ್ಲಿ ಬುಧವಾರ ‘ಬಾಯಿ ಕ್ಯಾನ್ಸರ್‌ನಿಂದ ರಕ್ಷಣೆಗೆ ಎರಡು ನಿಮಿಷಗಳ ಕ್ರಮ’ ಅಭಿಯಾನಕ್ಕೆ ಚಾಲನೆ ನೀಡಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿಳಿ ಅಥವಾ ಕೆಂಪು ಕಲೆಗಳು, ಗುಣವಾಗದ ಅಲ್ಸರ್, ಸತತ ಊತ, ಧ್ವನಿ ಬದಲಾವಣೆಗಳು ಅಥವಾ ವಿವರಿಸಲಾಗದ ರಕ್ತಸ್ರಾವದಂತಹ ಲಕ್ಷಣಗಳು ಇದ್ದಲ್ಲಿ ಪರೀಕ್ಷೆಗೆ ಒಳಗಾಗಬೇಕು’ ಎಂದು ಸಲಹೆ ನೀಡಿದರು.
‘ತಂಬಾಕು ಹಾಗೂ ಮದ್ಯಪಾನದಿಂದ ಕ್ಯಾನ್ಸರ್ ಪ್ರಕರಣಗಳಲ್ಲಿ ಬಾಯಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಭಾರತದಲ್ಲಿ ಪ್ರತಿ ವರ್ಷ 2 ಲಕ್ಷ ಹೊಸ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಪ್ರಕರಣಗಳು ಪತ್ತೆ ಆಗುತ್ತಿವೆ. ಹೀಗೆ ಪತ್ತೆಯಾದ ರೋಗಿಗಳಲ್ಲಿ ಶೇ 50–70 ಮಂದಿಯಲ್ಲಿ ರೋಗವು ಈಗಾಗಲೇ ಮೂರು ಇಲ್ಲವೇ ನಾಲ್ಕನೇ ಹಂತದಲ್ಲಿ ಇರುತ್ತದೆ. ಆರಂಭಿಕ ಹಂತದಲ್ಲೇ ಪತ್ತೆ ಅತ್ಯವಶ್ಯವಾಗಿದೆ’ ಎಂದರು.
‘ಗ್ರಾಮೀಣದಲ್ಲಿ ಬಾಯಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿವೆ. ಕೆಲವರು ಕಾಲಾಹರಣಕ್ಕೆಂದು ತಂಬಾಕು ಸೇವೆ ಚಟ ಬೆಳೆಸಿಕೊಂಡಿರುತ್ತಾರೆ. ಅಂತಹ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
ಆಸ್ಪತ್ರೆಯ ವೈದ್ಯರಾದ ಎಂ. ವಿನಯ್‌ಕುಮಾರ್, ಕೆ.ಜಿ. ಶ್ರೀನಿವಾಸ್, ರಕ್ಷಿತ್ ಶೃಂಗೇರಿ, ಜಿ.ಎಚ್. ಅಭಿಲಾಷ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌತಮ್ ಧಮೆರ್ಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.