
ಮೈಸೂರು: ಆಸ್ತಿಗೆ ಸಂಬಂಧಿಸಿದ ದಾಖಲೆಗಳು ನಾಗರಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಡಿಜಿಟಲೀಕರಣ ಉದ್ದೇಶದ ‘ಭೂ ಸುರಕ್ಷಾ ಯೋಜನೆ’ ಜಿಲ್ಲೆಯಲ್ಲಿ ಶೇ 42.53ರಷ್ಟು ಪ್ರಗತಿ ಕಂಡಿದೆ. ಒಟ್ಟು 4.82 ಕೋಟಿ ಪುಟಗಳಿಗೆ ‘ಸುರಕ್ಷೆಯ ಕವಚ’ ಕಲ್ಪಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸೇರಿದ 10,59,294 ‘ಎ’ ಮತ್ತು ‘ಬಿ’ ಕಡತಗಳಿದ್ದು, ಅವುಗಳಲ್ಲಿ 4,82,88,977 ಪುಟಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ನ.7ರವರೆಗೆ 2,05,38,125 ಪುಟಗಳನ್ನು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿ ಅಳವಡಿಸಲಾಗಿದೆ. 2,77,50,852 ಪುಟಗಳ ಅಪ್‌ಲೋಡ್ ಬಾಕಿ ಇದೆ. ಇದಕ್ಕಾಗಿ, ನಿತ್ಯ 7,200 ಪುಟಗಳ (ಜಿಲ್ಲಾ ಸರಾಸರಿ)ನ್ನು ತಂತ್ರಾಂಶಕ್ಕೆ ಸೇರಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಅಪ್‌ಲೋಡ್‌ಗೂ ಮುನ್ನ ನಡೆಯುವ ಶಿರಸ್ತೇದಾರರಿಂದ ದಾಖಲೆಗಳ ಪರಿಶೀಲನೆಯಲ್ಲಿ ಜಿಲ್ಲೆಯು 11ನೇ ಹಾಗೂ ತಹಶೀಲ್ದಾರರಿಂದ ಪರಿಶೀಲನೆಯಲ್ಲಿ 2ನೇ ಸ್ಥಾನದಲ್ಲಿದೆ.
ಏನಿದರ ಮಹತ್ವ?:
ಕಂದಾಯ ಇಲಾಖೆಯಿಂದ ಕೈಗೊಂಡಿರುವ ಈ ಯೋಜನೆಯಲ್ಲಿ, ತಾಲ್ಲೂಕು ಕಚೇರಿ, ಸರ್ವೇ ಹಾಗೂ ಉಪನೋಂದಣಿ ಕಚೇರಿಗಳಲ್ಲಿರುವ ಅತ್ಯಂತ ಪ್ರಮುಖವಾದವು. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಹಳೆಯ ಭೂದಾಖಲೆಗಳನ್ನು ಗಣಕೀಕರಣಗೊಳಿಸುವ ಕೆಲಸ ಮಾಡಲಾಗುತ್ತಿದೆ.
ಹಳೆಯ ಕಡತಗಳು ಮತ್ತು ಭೂ ದಾಖಲೆಗಳು ಕಳೆದುಹೋಗುವುದು ಅಥವಾ ಮಾರ್ಪಾಡು (ತಿದ್ದುವುದು) ಮಾಡುವುದನ್ನು ತಡೆಯುವ ಮುಖ್ಯ ಉದ್ದೇಶ ಹೊಂದಲಾಗಿದೆ. ತಾಲ್ಲೂಕು ಕಚೇರಿಗಳಲ್ಲಿ ಹಳೆಯ ಭೂ ದಾಖಲೆಗಳು ಕೈತಪ್ಪದಂತೆ ನೋಡಿಕೊಳ್ಳುವುದು, ಪಾರದರ್ಶಕತೆ, ದಕ್ಷತೆ ಮತ್ತು ಭೂ ದಾಖಲೆಗಳಿಗೆ ಸುಲಭ ಪ್ರವೇಶವನ್ನು ಹೆಚ್ಚಿಸುವುದು, ಪ್ರಮಾಣೀಕೃತ ಪ್ರತಿಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸುವುದು ಹಾಗೂ ಪಡೆಯಲು ಅನುವು ಮಾಡಿಕೊಡುವುದು, ಸಾರ್ವಜನಿಕರು ಮತ್ತು ಅಧಿಕಾರಿಗಳಿಗೆ ಕಡತಗಳ ನಿರ್ವಹಣೆಯ ಸಮಯ ಉಳಿಸುವುದು ‘ಭೂಸುರಕ್ಷಾ’ ಯೋಜನೆಯ ಉದ್ದೇಶವಾಗಿದೆ. ಕೀವರ್ಡ್‌ಗಳ ಮೂಲಕ ಹುಡುಕುವಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಕಬಳಿಸುವುದು ತಡೆಯಲು:
‘ಭೂಸುರಕ್ಷಾ ಪೋರ್ಟಲ್‌ನಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಕಾರ್ಯ ಪೂರ್ಣಗೊಂಡ ಬಳಿಕ, ಭೂಮಿ ಪರಭಾರೆಯ ಪ್ರತಿ ಹಂತದಲ್ಲಿಯೂ ಈ ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸಿಯೇ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದರಿಂದ, ತಿರುಚಿದ ದಾಖಲೆ ಅಥವಾ ನಕಲಿ ದಾಖಲೆಗಳನ್ನು ಬಳಸಿಕೊಂಡು ಭೂಮಿ ಕಬಳಿಸುವುದನ್ನು ತಡೆಯಬಹುದು. ಅಂತಿಮವಾಗಿ ಭೂಒಡೆತನಕ್ಕೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆಯನ್ನು ಇಳಿಸಬಹುದು ಎಂಬ ವಿಶ್ವಾಸದಲ್ಲಿ ಕಂದಾಯ ಇಲಾಖೆ ಇದೆ.
ಭೂದಾಖಲೆಗಳು ಬೆರಳ ತುದಿಯಲ್ಲಿ ಲಭ್ಯವಾಗುವುದರಿಂದ ಸಾರ್ವಜನಿಕರು ಸರ್ಕಾರಿ ಕಚೇರಿಗೆ ಅಲೆಯುವುದು ತಪ್ಪಲಿದೆ. ಅರೆನ್ಯಾಯಿಕ ಕಂದಾಯ ನ್ಯಾಯಾಲಯಗಳಲ್ಲಿ ಪ್ರಕರಣ ವಿಲೇವಾರಿ ಅನುಕೂಲವಾಗಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.
ಪ್ರತಿ ತಾಲ್ಲೂಕಿನಲ್ಲೂ ಸರಾಸರಿ 9ಸಾವಿರ ಪುಟಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಲಾಗುತ್ತಿದೆ. ಇದು ನಿರಂತರವಾದ ಪ್ರಕ್ರಿಯೆಪಿ.ಶಿವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ
ಸ್ಕ್ಯಾನಿಂಗ್ ಮಾಡಿ...
ಭೂ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಆನ್‌ಲೈನ್‌ನಲ್ಲಿ ಭದ್ರಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಪಹಣಿ ಆಸ್ತಿ ವರ್ಗಾವಣೆ ಪತ್ರ (ಮ್ಯುಟೇಷನ್) ಟಿಪ್ಪಣಿ ಸೇರಿದಂತೆ ಕಂದಾಯ ಇಲಾಖೆಯ ಸಾಕಷ್ಟು ಹಳೆಯ ಕಡತಗಳು ಹಾಳಾಗುವ ಸ್ಥಿತಿಯಲ್ಲಿದ್ದವು. ಅವುಗಳನ್ನು ಸಂರಕ್ಷಿಸಿ ಇಟ್ಟುಕೊಳ್ಳುವ ಸವಾಲನ್ನು ಗೆಲ್ಲುವುದಕ್ಕಾಗಿ ತಂತ್ರಜ್ಞಾನದ ಮೊರೆ ಹೋಗಿರುವ ಇಲಾಖೆಯು ಇದಕ್ಕಾಗಿ ಸಿಬ್ಬಂದಿಯನ್ನು ನಿಯೋಜಿಸಿ ಪ್ರಕ್ರಿಯೆ ನಡೆಸುತ್ತಿದೆ. ದಾಖಲೆಗಳನ್ನು ಡಿಜಿಟಲ್ ಸ್ವರೂಪಕ್ಕೆ ಬದಲಾಯಿಸುವ ಕೆಲಸ ನಡೆಯುತ್ತಿದೆ. ಭೂಮಾಫಿಯಾದವರು ನಡೆಸುವ ಕುತಂತ್ರಗಳನ್ನು ತಡೆಯಲು ತಂತ್ರಜ್ಞಾನದ ಮೂಲಕವೇ ‘ಸುರಕ್ಷೆಯ ಕವಚ’ ಒದಗಿಸಲು ವಹಿಸಿರುವ ಕ್ರಮ ಇದಾಗಿದೆ ಎಂದು ಇಲಾಖೆ ತಿಳಿಸಿದೆ.
ಹೋಬಳಿಗಳಲ್ಲಿ ಇಲವಾಲ ರಾಜ್ಯದಲ್ಲೇ ಪ್ರಥಮ
‘ಇದೊಂದು ಪ್ರಗತಿಪರವಾದ ಯೋಜನೆ ಸಾರ್ವಜನಿಕರು ಹಾಗೂ ರೈತರಿಗೆ ಅನುಕೂಲ ಕಲ್ಪಿಸುತ್ತದೆ. ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಜನರು ಅವರೇ ಲಾಗ್‌ಇನ್ ಆಗಿ ದಾಖಲೆಗಳನ್ನು ಹಣ ಕಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದು (ಅವರು ಕೇಳಿದ ಇಲ್ಲದಿದ್ದರೆ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಲಾಗುತ್ತದೆ)’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ‘ಪ್ರಜಾವಾಣಿ’ಗೆ ತಿಳಿಸಿದರು. ‘ಇನ್ಮುಂದೆ ಇಲಾಖೆಯ ಎಲ್ಲ ದಾಖಲೆಗಳನ್ನೂ ಆನ್‌ಲೈನ್‌ನಲ್ಲೇ ಕೊಡಲಾಗುವುದು. ಅವುಗಳಿಗೆ ಶಿರಸ್ತೇದಾರರು ತಹಶೀಲ್ದಾರ್‌ಗಳಿಂದ ಅನುಮೋದನೆ ಕೊಡಿಸಿ ಅಪ್‌ಲೋಡ್ ಮಾಡಲಾಗುತ್ತಿದೆ. ವಿತರಣೆ ಕಾರ್ಯವೂ ನಡೆಯುತ್ತಿದೆ. ಪ್ರಾಯೋಗಿಕ ಹೋಬಳಿಗಳಲ್ಲಿ ಇಲವಾಲ (ನಾಡಕಚೇರಿ ಕೌಂಟರ್) ರಾಜ್ಯದಲ್ಲೇ ಮೊದಲ ಸ್ಥಾನ ಗಳಿಸಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.