ಮೈಸೂರು: ನಗರದ ಸ್ಮಶಾನಗಳಲ್ಲಿ ಇನ್ನು ಮುಂದೆ ಶವಗಳನ್ನು ಸುಡುವ ಪ್ರಕ್ರಿಯೆ ಕೂಡ ‘ಪರಿಸರ ಸ್ನೇಹಿ’ ಆಗಿರಲಿದೆ. ಹಸಿತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆ ಆಗಲಿದ್ದು, ಅದನ್ನು ಶವಸಂಸ್ಕಾರಕ್ಕೆ ಬಳಸಲಾಗುತ್ತದೆ.
ಸ್ಮಶಾನಗಳನ್ನು ಆಧುನಿಕ ಹಾಗೂ ಪರಿಸರಸ್ನೇಹಿ ಆಗಿಸುವತ್ತ ಮೈಸೂರು ಮಹಾನಗರ ಪಾಲಿಕೆಯು ಚಿತ್ತ ಹರಿಸಿದ್ದು, ಅದರ ಮೊದಲ ಪ್ರಯತ್ನವಾಗಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಇರುವ ಹರಿಶ್ಚಂದ್ರ ಘಾಟ್ ಸ್ಮಶಾನದಲ್ಲಿ ಜೈವಿಕ ಅನಿಲ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದೆ. ಈಗಾಗಲೇ ಜೈವಿಕ ಅನಿಲ ಉತ್ಪಾದನೆಯು ಆರಂಭಗೊಂಡಿದ್ದು, ಸದ್ಯದಲ್ಲೇ ಶವಗಳ ಅಂತ್ಯಸಂಸ್ಕಾರಕ್ಕೆ ಇದರಿಂದ ಉತ್ಪಾದಿಸಿದ ಬಯೋಗ್ಯಾಸ್ ಬಳಕೆ ಆಗಲಿದೆ.
ಪಾಲಿಕೆಯು ₹98 ಲಕ್ಷ ವೆಚ್ಚದಲ್ಲಿ ಹರಿಶ್ಚಂದ್ರ ಘಾಟ್ ಸ್ಮಶಾನದಲ್ಲಿ ಈ ಬಯೋಗ್ಯಾಸ್ ಘಟಕ ಸ್ಥಾಪಿಸುತ್ತಿದ್ದು, ನಿತ್ಯ 2 ಟನ್‌ನಷ್ಟು ಹಸಿಕಸವನ್ನು ಅನಿಲವನ್ನಾಗಿ ಪರಿವರ್ತಿಸಲಾಗುತ್ತದೆ. ಒಮ್ಮೆ ಕಸ ಹಾಕಿದರೆ ಅದು ಅನಿಲವಾಗಿ ಪರಿವರ್ತನೆ ಆಗಲು 45 ದಿನ ಬೇಕಿದೆ.
‘ಪ್ರತಿ ಟನ್ ಕಸದಿಂದ 40– 50 ಕ್ಯುಬಿಕ್ ಮೀಟರ್‌ನಷ್ಟು ಜೈವಿಕ ಅನಿಲ ಉತ್ಪಾದನೆ ಸಾಧ್ಯವಿದೆ. ಒಟ್ಟಾರೆ ನಿತ್ಯ 80–100 ಕ್ಯುಬಿಕ್ ಮೀಟರ್‌ನಷ್ಟು ಬಯೋಗ್ಯಾಸ್ ಸಿಗಲಿದೆ. ಇದು 55 ಕೆ.ಜಿ.ಯಷ್ಟು ಎಲ್‌ಪಿಜಿಗೆ ಸಮನಾಗಿದೆ’ ಎನ್ನುತ್ತಾರೆ ಮಹಾನಗರ ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ಮೃತ್ಯುಂಜಯ.
‘ಸದ್ಯ ಒಂದು ಶವದ ಸಂಸ್ಕಾರಕ್ಕೆ ಸರಾಸರಿ 18 ಕೆ.ಜಿ.ಯಷ್ಟು ಎಲ್‌ಪಿಜಿ ಬಳಸಲಾಗುತ್ತಿದೆ. ತಿಂಗಳಿಗೆ 40–50 ವಾಣಿಜ್ಯ ಸಿಲಿಂಡರ್‌ಗಳಷ್ಟು ಬಳಕೆ ಆಗುತ್ತಿದೆ. ಬಯೋಗ್ಯಾಸ್ ಕಾರ್ಯಾರಂಭ ಮಾಡಿದಲ್ಲಿ ಇದರ ಖರ್ಚು ಉಳಿಯಲಿದೆ. ಇದೊಂದು ಪರಿಸರ ಸ್ನೇಹಿ ಯೋಜನೆ ಆಗಿದ್ದು, ಪಾಲಿಕೆಗೆ ಕಸದ ನಿರ್ವಹಣೆಗೂ ಅನುಕೂಲ ಆಗಲಿದೆ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.