ADVERTISEMENT

ಸ್ನೇಹಮಯಿ ಕೃಷ್ಣ ಬಂಧನ; ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 8:19 IST
Last Updated 21 ಫೆಬ್ರುವರಿ 2026, 8:19 IST
   

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಘೋಷಿತ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದು, ಜನರು ಭಯದಿಂದ ಓಡಾಡುವಂತಾಗಿದೆ’ ಎಂದು ಬಿಜೆಪಿ ನಗರ ಜಿಲ್ಲಾ ಘಟಕದ ವಕ್ತಾರ ಮೋಹನ್ ದೂರಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿರುವುದು ಖಂಡನೀಯ’ ಎಂದು ಹೇಳಿದರು.

‘ಕೃಷ್ಣ ಅವರು ಆರೋಪವನ್ನಷ್ಟೆ ಮಾಡಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ನನ್ನಲ್ಲಿ ಸಾಕ್ಷಿ– ಆಧಾರ ಇದೆ ಎಂದು ತಿಳಿಸಿದ್ದಾರೆ. ಆದರೆ, ಅದನ್ನು ಕೊಡುವಂತೆ ಮುಖ್ಯ ಕಾರ್ಯದರ್ಶಿ ಕೇಳಿಯೇ ಇಲ್ಲ. ಬದಲಿಗೆ ದೂರು ಕೊಟ್ಟವರನ್ನೇ ಏಕಾಏಕಿ ಬಂಧಿಸಲಾಗಿದೆ. ನೋಟಿಸ್ ಕೊಡದೇ, ವಿಚಾರಣೆಯನ್ನೂ ನಡೆಸದೇ, ಸಮಯವನ್ನೂ ಕೊಡದೇ ಪೊಲೀಸರು ವಶಕ್ಕೆ ಪಡೆದಿರುವುದು ಖಂಡನೀಯ’ ಎಂದು ದೂರಿದರು.

ADVERTISEMENT

‘ಕೃಷ್ಣ ಅವರ ಮನೆಯ ಮಹಜರು ಮಾಡುವಲ್ಲೂ ಕಾನೂನು ಉಲ್ಲಂಘಿಸಲಾಗಿದೆ. ಕೆಲವು ದಾಖಲೆಗಳನ್ನು ಅಲ್ಲಿಂದ ಒಯ್ಯಲಾಗಿದೆ. ಈ ಮೂಲಕ, ಸಾಕ್ಷಿ ನಾಶಪಡಿಸುವ ಪ್ರಯತ್ನವನ್ನು ಸರ್ಕಾರ ಪೊಲೀಸರ ಮೂಲಕ ಮಾಡಿದೆ. ಕೃಷ್ಣ ಅವರನ್ನು ಯಾವ ಸೆಕ್ಷನ್‌ನಲ್ಲಿ ಬಂಧಿಸಲಾಗಿದೆ ಎಂಬುದನ್ನೂ ಈವರೆಗೂ ಹೇಳಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೃಷ್ಣ ಅವರನ್ನು ಬಂಧಿಸಿರುವುದು ಕಾನೂನು ಉಲ್ಲಂಘನೆಯಾಗಿದೆ. ಅವರ ಬಳಿ ಇರುವ ಸಾಕ್ಷಿಯನ್ನು ಪಡೆದು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಈ ಪ್ರಹಸನಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

‘ಜಾತ್ಯತೀತ ಮತ್ತು ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಅಧಿಕಾರ ಉಳಿಸಿಕೊಳ್ಳಲು ಜಾತಿಯನ್ನು ಮುಂದೆ ಮಾಡುತ್ತಿರುವುದು ವಿಷಾದನೀಯ. ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಜಾತಿ ಹೇಳಿಕೊಳ್ಳುವ ದುಃಸ್ಥಿತಿಗೆ ಬಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಹಾಕಿರುವ ಪೋಸ್ಟ್ ನೋಡಿದರೆ ನೋವಾಗುತ್ತದೆ’ ಎಂದರು.

‘ಅವರಿಗೆ ತೊಂದರೆ ಕೊಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳು ಯಾರು, ಕೆಂಗಣ್ಣು ಬೀರುತ್ತಿರುವವರು ಯಾರು ಎಂಬುದನ್ನು ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಸ್ಪಷ್ಟವಾಗಿ ತಿಳಿಸಲಿ’ ಎಂದು ಸವಾಲು ಹಾಕಿದರು.

ಪಕ್ಷದ ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ಮಾಧ್ಯಮ ಸಂಚಾಲಕ ಮಹೇಶ್‌ರಾಜೇ ಅರಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.