ADVERTISEMENT

ಭ್ರಷ್ಟ ಆಡಳಿತ ನಡೆಸಲು ಹವಣಿಸುತ್ತಿರುವ ಬಿಜೆಪಿ, ಜೆಡಿಎಸ್‌: ಎಚ್.ಸಿ.ಮಹದೇವಪ್ಪ

ಪಿರಿಯಾಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಡಾ.ಎಚ್.ಸಿ.ಮಹದೇವಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 4:57 IST
Last Updated 18 ಜನವರಿ 2023, 4:57 IST
ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡ ಹೊನ್ನೂರಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು
ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡ ಹೊನ್ನೂರಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು   

ಪಿರಿಯಾಪಟ್ಟಣ: ‘ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಜನಸಾಮಾನ್ಯರ ಬವಣೆಗಳನ್ನು ಅರ್ಥ ಮಾಡಿಕೊಳ್ಳದೆ, ಸ್ವಾರ್ಥ ಮತ್ತು ಭ್ರಷ್ಟಾಚಾರದ ಆಡಳಿತ ವನ್ನು ನಡೆಸಲು ಹವಣಿಸುತ್ತಿವೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು’ ಎಂದು ಕಾಂಗ್ರೆಸ್‌ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ತಾಲ್ಲೂಕಿನ ದೊಡ್ಡ ಹೊನ್ನೂರು ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

‘ಬಿಜೆಪಿ ಹಾಗೂ ಜೆಡಿಎಸ್‌ಗೆ ಸೈದ್ಧಾಂತಿಕ ನೆಲೆಗಟ್ಟಿಲ್ಲ. ಜನಸಾಮಾನ್ಯರ ಕಷ್ಟಗಳು ಅರಿವಾಗುತ್ತಿಲ್ಲ. ಆಡಳಿತ ಪಕ್ಷವು ಸಂವಿಧಾನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಸಿದ್ಧಾಂತಗಳನ್ನು ಗಾಳಿಗೆ ತೂರಿ ಆಡಳಿತ ನಡೆಸಿ ಜನಸಾಮಾನ್ಯರ ಮೇಲೆ ಇಲ್ಲಸಲ್ಲದ ಕಾಯ್ದೆಗಳನ್ನು ಜಾರಿಗೊಳಿಸಿ ಸಂಕಷ್ಟಕ್ಕೆ ದೂಡುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜನಸಾಮಾನ್ಯರಿಗೆ, ರೈತರಿಗೆ ಹಾಗೂ ಕಾರ್ಮಿಕರಿಗೆ ಉಪಯುಕ್ತವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿತ್ತು. ಇವು ಇಂದಿಗೂ ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪುತ್ತಿವೆ’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ‘ಬಿಜೆಪಿ ಸರ್ಕಾರದ ದುರಾಡಳಿತದಿಂದ ಉಳ್ಳವರು ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಬಡವರ ಮತ್ತು ಕಾರ್ಮಿಕರ ಹಿತವನ್ನು ಕಾಯಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಪ್ರತಿಯೊಬ್ಬರು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ಬಿಜೆಪಿ ಮತ್ತು ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡುತ್ತಿವೆ. ಆ ಪಕ್ಷಗಳ ನಾಯಕರಿಗೆ ಅಧಿಕಾರ ಮುಖ್ಯವಾಗಿದ್ದು, ಜನಸಾಮಾನ್ಯರ ಬದುಕಿನ ಬಗ್ಗೆ ಕಾಳಜಿ ಇಲ್ಲ. ಆದ್ದರಿಂದ ಮತದಾರರು ಈ ಎರಡು ಪಕ್ಷಗಳನ್ನು ಕಿತ್ತೊಗೆಯಬೇಕು’ ಎಂದು ಹೇಳಿದರು.

ಯತೀಂದ್ರ ಸಿದ್ದರಾಮಯ್ಯ ಅವರನ್ನು ಕೊಪ್ಪ ಗ್ರಾಮದಲ್ಲಿ ಜೆಸಿಬಿ ಯಂತ್ರದ ಮೂಲಕ ಬೃಹತ್‌ ಹೂವಿನ ಹಾರ ಹಾಕುವ ಮೂಲಕ ಸ್ವಾಗತಿಸಲಾಯಿತು.

ಮಾಜಿ ಶಾಸಕ ಕೆ.ವೆಂಕಟೇಶ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಮಾತನಾಡಿದರು.

ಕಾರ್ಯದರ್ಶಿ ಸಮಿವುಲ್ಲಾ ಖಾನ್, ಟಿ.ಡಿ.ಗಣೇಶ್, ನಿತಿನ್ ವೆಂಕಟೇಶ್, ಡಿ.ಟಿ.ಸ್ವಾಮಿ, ಬಿ.ವಿ.ಅನಿತಾ, ಕೆ.ಹೊಲದಪ್ಪ, ರೆಹಮತ್ ಜಾನ್ ಬಾಬು, ಸುಮಾ, ಗೀತಾ, ಕಲ್ಯಾಣಪ್ಪ, ಪಿ.ಮಹದೇವ್, ಡಿ.ಎ. ಜವರಪ್ಪ, ಗ್ರಾ.ಪಂ. ಅಧ್ಯಕ್ಷ ಸುಮಾ ಪ್ರಭಾಕರ, ಉಪಾಧ್ಯಕ್ಷೆ ಗೀತಾ ರಾಮು, ಸದಸ್ಯರಾದ ರಘು, ರಘು ಬಾಲಾಜಿ, ನಿಸಾರ್ ಅಹ್ಮದ್, ಮಂಜುನಾಥ್, ನವೀನ್, ಪಿ.ಪಿ.ಮಹದೇವ್ ಇದ್ದರು.

‘ವೆಂಕಟೇಶ್‌ ಗೆದ್ದರೆ ಸಚಿವ ಸ್ಥಾನ’

‘ಈ ಹಿಂದೆ ಶಾಸಕರಾಗಿದ್ದ ಕೆ.ವೆಂಕಟೇಶ್ ತಾಲ್ಲೂಕಿನ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದಿದ್ದಾರೆ. ಈ ಅಭಿವೃದ್ಧಿ ಕಾರ್ಯಗಳಿಂದಾಗಿ ಕಳೆದ ಚುನಾವಣೆಯಲ್ಲಿ ಕೆ.ವೆಂಕಟೇಶ್ ಜಯ ಸಾಧಿಸಬೇಕಾಗಿತ್ತು. ಆದರೆ, ಕಾರ್ಯಕರ್ತರ ಸಂಘಟನೆಯ ಕೊರತೆಯಿಂದಾಗಿ ಸೋಲು ಅನುಭವಿಸಿದ್ದರು. ಇದರಿಂದ ತಾಲ್ಲೂಕಿನ ಜನ ಸಂಕಷ್ಟ ಅನುಭವಿಸಬೇಕಾಗಿದೆ. ಇಂತಹ ಪರಿಸ್ಥಿತಿ ಮುಂದೆ ಬರದಂತೆ ಜಾಗೃತಿ ವಹಿಸಬೇಕು’ ಎಂದು ಎಚ್. ಸಿ.ಮಹದೇವಪ್ಪ ಸಲಹೆ ನೀಡಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಬಹುಮತ ಗಳಿಸಿ ಸರ್ಕಾರ ರಚಿಸುವುದು ಖಚಿತವಾಗಿದ್ದು, ಕೆ.ವೆಂಕಟೇಶ್ ಅವರನ್ನು ಮುಂದಿನ ಚುನಾವಣೆಯಲ್ಲಿ ಆಯ್ಕೆ ಮಾಡಿ ಕಳಿಸಿದರೆ ಸಚಿವರಾಗುವ ಸಾಧ್ಯತೆ ಇದೆ’ ಎಂದರು.‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.