ADVERTISEMENT

ಬಿಜೆಪಿ ಭಕ್ತ: ಮಹದೇವಪ್ಪ ಚಾಟಿ

ರಾಮಮಂದಿರ ಊರಲ್ಲಿ ಕಟ್ಟಿದ್ರೇನು; ಅಯೋಧ್ಯೆಯಲ್ಲಿ ಕಟ್ಟಿದ್ರೇನು?

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 16:24 IST
Last Updated 21 ಫೆಬ್ರುವರಿ 2021, 16:24 IST
ಎಚ್.ಸಿ.ಮಹದೇವಪ್ಪ
ಎಚ್.ಸಿ.ಮಹದೇವಪ್ಪ   

ಮೈಸೂರು: ನಮ್ಮೂರಲ್ಲಿ ರಾಮಮಂದಿರ ಕಟ್ಟುತ್ತೇನೆ ಎಂಬ ಮಾತನ್ನು ಧರ್ಮ ವಿರೋಧಿ ಎಂದು ಬಿಂಬಿಸುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

‘ನಮ್ಮೂರಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದೇನೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ವ್ಯಕ್ತವಾಗಿರುವ ಟೀಕೆಗಳಿಗೆ ಸರಣಿ ಟ್ವೀಟ್‌ ಮೂಲಕವೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಹದೇವಪ್ಪ, ‘ರಾಮಮಂದಿರವನ್ನು ಊರಲ್ಲಿ ಕಟ್ಟಿದಾಗಲೂ ಸಹ ಅವನಿಗೆ ಮನ್ನಣೆ ಸಿಗುತ್ತಿದೆ ಎಂದರೇ ಅವನು ನಿಜವಾದ ರಾಮ ಭಕ್ತನಾಗಿರುತ್ತಾನೆ. ಇಲ್ಲ ಅಯೋಧ್ಯೆಯಲ್ಲೇ ಕಟ್ಟಬೇಕು, ಬೇರೆಲ್ಲೇ ಕಟ್ಟಿದರೂ ಅವನು ರಾಮ ವಿರೋಧಿ ಎಂದರೇ, ಅವನು ಸಂವಿಧಾನ ವಿರೋಧಿ, ಬಿಜೆಪಿ ಭಕ್ತನಾಗಿರುತ್ತಾನೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಇಂತಹ ಮೂರ್ಖರಿಗೆ ಧರ್ಮ ಗೊತ್ತಿಲ್ಲ, ದೇವರು ಗೊತ್ತಿಲ್ಲ. ಇವರಿಗೆ ಸಮಾಜದ ಬಗ್ಗೆ ಕಿಂಚಿತ್‌ ಕಾಳಜಿ ಇರುವುದಿಲ್ಲ. ಇವರಿಗೆ ಕೇವಲ ಕೋಮುವಾದಿ ರಾಜಕೀಯ ಪಕ್ಷವೊಂದರ ಹಿತ ಮುಖ್ಯವಾಗಿದೆಯೇ ಹೊರತು ಎಂದಿಗೂ ಸಹ ಧಾರ್ಮಿಕ ಸಾಮರಸ್ಯ, ಸಂವಿಧಾನಾತ್ಮಕ, ಪ್ರಜಾಸತ್ತಾತ್ಮಕ ವಾತಾವರಣ ಮುಖ್ಯವಾಗಿರಲ್ಲ. ಆದರೆ, ಬಾಬಾ ಸಾಹೇಬರ ನೆಲದಲ್ಲಿ ಹುಟ್ಟಿ, ಅವರ ಆಲೋಚನೆಯಿಂದಲೇ ಪ್ರಭಾವಿತರಾದ ನಾವು, ಈ ಮನುವಾದಿ ಧಾರ್ಮಿಕ ಮತ್ತು ರಾಜಕೀಯ ಹುಚ್ಚರ ಕುತಂತ್ರಗಳಿಗೆ ಮನ್ನಣೆ ಕೊಡುವುದಿಲ್ಲ ಎಂದು ಈ ಮೂಲಕ ಸ್ಪಷ್ಟ ಪಡಿಸುತ್ತೇನೆ’ ಎಂದು ಮಹದೇವಪ್ಪ ತಮ್ಮ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.