ADVERTISEMENT

ಮುಸಲ್ಮಾನರನ್ನು ಬಳಸಿಕೊಳ್ಳುವ ರೋಗ ಅಂಟಿದೆ: ಸಾಹಿತಿ ಎಸ್‌.ಎಲ್‌.ಭೈರಪ್ಪ ವಿಷಾದ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 17:58 IST
Last Updated 10 ಜನವರಿ 2020, 17:58 IST
ಪ್ರೊ.ಎಸ್‌.ಎಲ್‌.ಭೈರಪ್ಪ
ಪ್ರೊ.ಎಸ್‌.ಎಲ್‌.ಭೈರಪ್ಪ   

ಮೈಸೂರು: ‘ಮುಸಲ್ಮಾನರನ್ನು ಬಳಸಿಕೊಂಡು ರಾಜಕಾರಣ ಮಾಡುವುದು ಬ್ರಿಟಿಷರು ಹಾಗೂ ಕಾಂಗ್ರೆಸ್‌ಗೆ ಅಂಟಿದ ರೋಗವಾಗಿತ್ತು. ಈಗದು ಬಿಜೆಪಿಗೂ ಅಂಟಿದೆ’ ಎಂದು ಸಾಹಿತಿ ಪ್ರೊ.ಎಸ್‌.ಎಲ್‌.ಭೈರಪ್ಪ ವಿಷಾದ ವ್ಯಕ್ತಪಡಿಸಿದರು.

‘ಬ್ರಿಟಿಷರು ದೇಶ ಬಿಟ್ಟು ಹೋಗುವ ಪ‍ರಿಸ್ಥಿತಿ ಎದುರಾದಾಗ ಮುಸಲ್ಮಾನರನ್ನು ಸೇರಿಸಿ, ನಾವು ದೇಶದಿಂದ ಹೊರಗೆ ಕಾಲಿಟ್ಟ ಮೇಲೆ ಹಿಂದೂಗಳು ನಿಮ್ಮನ್ನು ತುಳಿಯುತ್ತಾರೆ ಎಂದು ಹೆದರಿಸಿದರು. ಆಗ ಮುಸಲ್ಮಾನರು ದೇಶ ಬಿಡದಂತೆ ಬ್ರಿಟಿಷರನ್ನು ಬೇಡಿಕೊಂಡರು. ಬಳಿಕ ಜವಾಹರಲಾಲ್‌ ನೆಹರೂ ಅವರು, ಕಾಂಗ್ರೆಸ್‌ ಅಧಿಕಾರದಿಂದ ಕೆಳಗಿಳಿದರೆ ಹಿಂದೂಗಳು ಮುಸಲ್ಮಾನರನ್ನು ತುಳಿಯುತ್ತಾರೆ ಎಂದು ಮತ ಬ್ಯಾಂಕ್‌ ರಾಜಕಾರಣ ಮಾಡಿದರು. ಇದೀಗ ಬಿಜೆಪಿಗೂ ಈ ರೋಗ ಅಂಟಿದೆ. ಮುಸಲ್ಮಾನರ ಹೆಸರು ರಾಜಕಾರಣಕ್ಕೆ ಬಳಕೆಯಾಗುತ್ತಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬೇಸರದಿಂದ ಹೇಳಿದರು.

ಅನಧಿಕೃತವಾಗಿ ದೇಶದೊಳಗೆ ನುಸುಳಿರುವವರಿಗೆ ಮಾತ್ರ ಪೌರತ್ವ ರದ್ದು ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡ ಹೊರಟಿದೆ. ಅದರಲ್ಲಿ ತಪ್ಪೇನು? 70 ವರ್ಷಗಳಲ್ಲಿ ಮಾಡಲಾಗದಿದ್ದ ಕೆಲಸವನ್ನು ಬಿಜೆಪಿ ಈಗಲಾದರೂ ಮಾಡಿದೆ. ಅದನ್ನು ಸ್ವಾಗತಿಸಬೇಕೇ ಹೊರತು ಪ್ರಶ್ನಿಸುವ ಕೆಲಸ ಮಾಡಕೂಡದು ಎಂದು ಅಭಿಪ್ರಾಯಪಟ್ಟರು.

ADVERTISEMENT

ಕೀಳಾಗಿ ನಡೆಸಿಕೊಂಡ ಮಾಧ್ಯಮಗಳು:

ಪ್ರಧಾನಿ ನರೇಂದ್ರ ಮೋದಿ ಅವರು ಸುದ್ದಿಗೋಷ್ಠಿ ಕರೆಯದೇ ಇರಲು ಕಾರಣ, ಮೋದಿ ಅವರನ್ನು ಮಾಧ್ಯಮಗಳು ಕೀಳಾಗಿ ನಡೆಸಿಕೊಂಡಿರುವುದಕ್ಕೆ ಎಂದರು.

ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಪತ್ರಿಕೆಗಳಲ್ಲಿ ಕೆಟ್ಟ ವರದಿಗಳು ಬಂದವು. ಅದಕ್ಕೆ ಪಾಶ್ಚಿಮಾತ್ಯ ಮಾಧ್ಯಮಗಳೂ ಕೈ ಜೋಡಿಸಿದವು. ಅದರಿಂದ ನೋವುಂಡ ಮೋದಿ, ಮಾಧ್ಯಮಗಳನ್ನು ಈಗ ದೂರ ಇಟ್ಟಿದ್ದಾರೆ. ತಮ್ಮ ವಿಚಾರಗಳನ್ನು ‘ಮನ್‌ ಕೀ ಬಾತ್’ ಮಾದರಿಯ ಕಾರ್ಯಕ್ರಮಗಳ ಮೂಲಕ ಹೊರಹಾಕುತ್ತಿದ್ದಾರೆ ಎಂದು ವಿಶ್ಲೇಷಿಸಿದರು.

‘ಸುದ್ದಿಗೋಷ್ಠಿ ನಡೆಸುವಷ್ಟು ಸಮಯ ಮೋದಿಗಿಲ್ಲ. ಅವರು ತುಂಬಾ ಕಾರ್ಯದೊತ್ತಡಲ್ಲಿದ್ದಾರೆ. ಅವರನ್ನು ವೈಯಕ್ತಿಕವಾಗಿ ಬಲ್ಲ ನನಗೆ ಇದು ಗೊತ್ತು. ಅಲ್ಲದೇ ಮೋದಿ ಮೇಧಾವಿ. ಮತ್ತೊಂದು ಅವಧಿಗೆಮೋದಿ ಪ್ರಧಾನಿಯಾಗುತ್ತಾರೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಕಾಂಗ್ರೆಸ್‌ ಕಾಲೆಳೆಯುವ ತಂತ್ರಗಾರಿಕೆ ಹೂಡಿದೆ’ ಎಂದು ಆರೋಪಿಸಿದರು.

‘ಸಾಹಿತಿಗಳಲ್ಲಿ ಕೆಲವರು ‘ಪ್ರಗತಿಪರ’ ಎಂಬ ಹಣೆಪಟ್ಟಿ ಹಾಕಿಕೊಂಡಿದ್ದಾರೆ. ಸಾಹಿತಿಗೆ ಯಾವುದೇ ತಂತ್ರಗಾರಿಕೆ ಇರಬಾರದು. ಪೂರ್ವಯೋಜಿತ ಸಿದ್ಧಾಂತಕ್ಕೆ ಕಟ್ಟು ಬೀಳಬಾರದು’ ಎಂದು ಎಡಪಕ್ಷಗಳನ್ನು ಬೆಂಬಲಿಸುತ್ತಿರುವ ಸಾಹಿತಿಗಳನ್ನು ಟೀಕಿಸಿದರು.

ತರಗತಿಯೊಳಗೆ ಪ್ರಶ್ನಿಸಲಿ:

‘ಜೆಎನ್‌ಯು ವಿದ್ಯಾರ್ಥಿಗಳು ತರಗತಿಗೊಳಗೆ ಶೈಕ್ಷಣಿಕವಾದ ತಮ್ಮ ಅನುಮಾನಗಳನ್ನು ಪ್ರಶ್ನಿಸಲಿ. ಅದನ್ನು ಬಿಟ್ಟು ಬೀದಿಗಿಳಿದು ರಾಜಕಾರಣದ ಬಗ್ಗೆ ಪ್ರಶ್ನಿಸುವುದು ಎಷ್ಟು ಸರಿ’ ಎಂದು ಕೇಳಿದರು.

ಗ್ರಂಥಾಲಯದಲ್ಲಿ ಪುಸ್ತಕಗಳಿಲ್ಲ, ವೃತ್ತಪತ್ರಿಕೆಗಳು ಸಿಗುತ್ತಿಲ್ಲ, ಪ್ರಯೋಗಾಲಯದಲ್ಲಿ ಉಪಕರಣಗಳಿಲ್ಲ ಎಂದು ಜೆಎನ್‌ಯುನ ಯಾವ ವಿದ್ಯಾರ್ಥಿಯೂ ಕೇಳುತ್ತಿಲ್ಲ. ಇದೇ ಘೀಳು ದೇಶದ ಇತರ ವಿ.ವಿ.ಗಳ ವಿದ್ಯಾರ್ಥಿಗಳಿಗೂ ಅಂಟಿಕೊಂಡಿದೆ. ಹಾಗಾಗಿಯೇ, ಮೈಸೂರು ವಿ.ವಿ.ಯಲ್ಲಿ ‘ಫ್ರೀ ಕಾಶ್ಮೀರ’ ಎಂಬ ಫಲಕ ಪ್ರದರ್ಶನಗೊಂಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.