ಮೈಸೂರು: ‘ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಒಡ್ಡುವ ಕಿಡಿಗೇಡಿ ಮನಸ್ಥಿತಿಯವರು ಬಿಜೆಪಿ–ಆರ್‌ಎಸ್‌ಎಸ್ ಬೆಂಬಲಿಗರೇ ಆಗಿರುತ್ತಾರೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಟೀಕಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪ್ರಿಯಾಂಕ್ ಅವರು ತಮಗೆ ಬೆದರಿಕೆ ಬರುತ್ತಿರುವುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. 2014ರ ನಂತರ ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೆ ದೇಶದಲ್ಲಿ ಹೀಗೆ ಬೆದರಿಕೆ ಒಡ್ಡುವವರ ಸಂಖ್ಯೆ ಹೆಚ್ಚುತ್ತಿದೆ. ತಮ್ಮ ವಿಚಾರಧಾರೆ ಒಪ್ಪದವರಿಗೆ ನಿರಂತರ ತೊಂದರೆ ನೀಡುವ ಮನಸ್ಥಿತಿ ಹೆಚ್ಚಿದೆ’ ಎಂದರು.
‘ಮುಖ್ಯಮಂತ್ರಿ ಬದಲಾವಣೆ ಕೆಲವು ಮಾಧ್ಯಮಗಳ ಸೃಷ್ಟಿ. ನೀವು ಟಿಆರ್‌ಪಿಗೋಸ್ಕರ ಅವರಿವರಿಗೆ ಮೈಕ್ ಹಿಡಿದು ಅದನ್ನೇ ಸತ್ಯ ಎಂದು ಬಿಂಬಿಸಲು ಹೊರಟಿದ್ದೀರಿ. ಸದ್ಯ ಆ ರೀತಿಯ ಯಾವುದೇ ಚರ್ಚೆ ಪಕ್ಷದಲ್ಲಿ ನಡೆದಿಲ್ಲ’ ಎಂದರು.
‘ಮುಖ್ಯಮಂತ್ರಿ ನಿವಾಸದಲ್ಲಿ ಔತಣ ಕೂಟ ನಡೆಸಿದ್ದರಲ್ಲಿ ವಿಶೇಷವೇನಿಲ್ಲ. 3–6 ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ. ಸಂಪುಟ ವಿಸ್ತರಣೆ ಸೇರಿದಂತೆ ಯಾವ ವಿಷಯವೂ ಅಲ್ಲಿ ಚರ್ಚೆ ಆಗಿಲ್ಲ. ಸಂಪುಟ ಪುನರ್‌ರಚನೆ ವಿಚಾರ ಮುಖ್ಯಮಂತ್ರಿಗೆ ಬಿಟ್ಟದ್ದು. ಅವರು ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನಿಸುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.