ಎಂ.ಜಿ. ಮಹೇಶ್
ಮೈಸೂರು: ‘ಕಾಂಗ್ರೆಸ್ ರಾಷ್ಟ್ರವಿದ್ರೋಹದ ಕೆಲಸವನ್ನು ಪದೇ ಪದೇ ಮಾಡುತ್ತಿದೆ. ದೇಶದ ಸಂವಿಧಾನದ ಅಡಿಯಲ್ಲಿ ನಡೆಯುವುದೆಲ್ಲವನ್ನೂ ಪ್ರಶ್ನಿಸಿ, ಗಂಡಾಂತರ ತರುವ ರೀತಿ ವರ್ತಿಸುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಜಿ.ಮಹೇಶ್ ದೂರಿದರು.
ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಪರೇಷನ್ ಸಿಂಧೂರ ವಿಷಯದಲ್ಲಿ ಪಾಕಿಸ್ತಾನ ಅಪೇಕ್ಷೆ ಪಡುವಂತೆ ಆ ಪಕ್ಷ ವರ್ತಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಸರಿ ಎಂದು ಪ್ರತಿಪಾದಿಸುತ್ತದೆ. ಮಾಲೆಗಾಂವ್ ಸ್ಫೋಟದ ತೀರ್ಪು ಕುರಿತು ಹಿಂದೂ ಭಯೋತ್ಪಾದನೆ ಎಂಬುದನ್ನು ಬಿಂಬಿಸುವ ಕೆಲಸವನ್ನು ಮಾಡುತ್ತಿದೆ’ ಎಂದು ಆರೋಪಿಸಿದರು.
‘ಹಿಂದೂಗಳನ್ನು ದ್ವೇಷಿಸುವ ಕೆಲಸವನ್ನು ಕಾಂಗ್ರೆಸ್ ಸತತವಾಗಿ ಮಾಡುತ್ತಿದೆ. ಆ ಪಕ್ಷದ ನಾಯಕ ರಾಹುಲ್ ಗಾಂಧಿ ದೇಶಕ್ಕೆ ದ್ರೋಹ ಎಸಗುತ್ತಿದ್ದಾರೆ. ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆಯೂ ಪ್ರಶ್ನೆಯನ್ನು ಎತ್ತುತ್ತಿದೆ. ಮತ ಕಳ್ಳತನ ಆಗಿದೆ ಎಂದು ದೂರಿ ಇದೇ 5ರಂದು ಬೆಂಗಳೂರಿನಲ್ಲಿ ಹೋರಾಟ ನಡೆಸಲಾಗುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
‘ಅವರು (ಕಾಂಗ್ರೆಸ್ ಅಭ್ಯರ್ಥಿಗಳು) ಗೆದ್ದಾಗ ಇವಿಎಂ ಸರಿ ಇದೆ ಎನ್ನುತ್ತಾರೆ, ಸೋತಾಗ ಹಾಳಾಗಿದೆ ಎನ್ನುತ್ತಾರೆ. ದೇಶದ ಸಾರ್ವಭೌಮತ್ವಕ್ಕೆ ವಿರುದ್ಧವಾಗಿ ರಾಹುಲ್ ಗಾಂಧಿ ನಡೆದುಕೊಳ್ಳುತ್ತಿದ್ದಾರೆ. ಆಯೋಗದ ಬಗ್ಗೆ ಅಪಪ್ರಚಾರವನ್ನು ಅವರು ಮಾಡುತ್ತಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು. ಸುಳ್ಳು ಪ್ರಚಾರ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.
‘ಮಾದಕವಸ್ತು ತಯಾರಿಕೆ ಘಟಕ ಪತ್ತೆಯಾಗಿರುವ ಪ್ರಕರಣದಲ್ಲಿ ಶಾಸಕ ತನ್ವೀರ್ ಸೇಠ್ ನೈತಿಕ ಹೊಣೆ ಹೊರಬೇಕು. ಇಲ್ಲಿ ನಡೆಯುತ್ತಿರುವ ಅಕ್ರಮವನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚುತ್ತಾರೆಂದರೆ, ರಾಜ್ಯದ ಗೃಹ ಸಚಿವರಿಗೆ ನಾಚಿಕೆಯಾಗಬೇಕು, ತಲೆತಗ್ಗಿಸಬೇಕು’ ಎಂದು ಒತ್ತಾಯಿಸಿದರು.
ಪಕ್ಷದ ನಗರ ಮಾಧ್ಯಮ ಸಂಚಾಲಕ ಮಹೇಶ್‌ರಾಜೇ ಅರಸ್, ಜಿಲ್ಲಾ ವಕ್ತಾರ ದಯಾನಂದ ಪಟೇಲ್, ಮಾಧ್ಯಮ ಸಹ ಸಂಚಾಲಕ ಸಂತೋಷ್ ಕುಮಾರ್ ಬಿ.ಎಂ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.