ADVERTISEMENT

ಪಕ್ಷ ಸಂಘಟನೆಗೆ ಆದ್ಯತೆ ನೀಡಿ: ಮಹೇಶ್ ಮರಳವಾಡಿ

ಪಿರಿಯಾಪಟ್ಟಣ: ಬಿಜೆ‍‍ಪಿ ತಾಲ್ಲೂಕು ಮಟ್ಟದ ವಿಶೇಷ ಕಾರ್ಯಕಾರಿಣಿ ಸಭೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 13:55 IST
Last Updated 2 ಆಗಸ್ಟ್ 2024, 13:55 IST
<div class="paragraphs"><p>ಪಿರಿಯಾಪಟ್ಟಣದಲ್ಲಿ ಶುಕ್ರವಾರ ನಡೆದ ಬಿಜೆಪಿ ತಾಲ್ಲೂಕು ಮಟ್ಟದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಮರಳವಾಡಿ ಮಾತನಾಡಿದರು.&nbsp;</p></div>

ಪಿರಿಯಾಪಟ್ಟಣದಲ್ಲಿ ಶುಕ್ರವಾರ ನಡೆದ ಬಿಜೆಪಿ ತಾಲ್ಲೂಕು ಮಟ್ಟದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಮರಳವಾಡಿ ಮಾತನಾಡಿದರು. 

   

ಪಿರಿಯಾಪಟ್ಟಣ: ‘ಕಾರ್ಯಕರ್ತರು ಸೇವೆ ಆಧಾರಿತ ಚಟುವಟಿಕೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಪ್ರತಿ ಮನೆಗೆ ಒಂದೊಂದು ಸಸಿ ನೆಟ್ಟು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು’ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಮರಳವಾಡಿ ತಿಳಿಸಿದರು.

ಪಟ್ಟಣದ ಶ್ರೀ ಕನ್ನಂಬಾಡಿಯಮ್ಮ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ತಾಲ್ಲೂಕು ಮಟ್ಟದ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.

ADVERTISEMENT

‘ಪಕ್ಷದ ಪಂಚರತ್ನ ಯೋಜನೆಯಡಿ ಎಲ್ಲಾ ಸಮುದಾಯಗಳಿಗೆ ಸಮಾನ ಆದ್ಯತೆ ನೀಡುವ ಮೂಲಕ ಬಿಜೆಪಿ ಸಂಘಟಿಸಬೇಕು’ ಎಂದು ಕರೆ ನೀಡಿದರು.

‘ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಮತ್ತು ಬೂತ್ ಮಟ್ಟದಲ್ಲಿ ನಿಯಮಿತವಾಗಿ ಸಭೆಗಳನ್ನು ಆಯೋಜಿಸುವ ಮೂಲಕ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯಬೇಕು. ಆ.15 ರಿಂದ 30 ರವರೆಗೆ ಬೂತ್ ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪಕ್ಷವು ಬೂತ್ ಮಟ್ಟದಲ್ಲಿ ಪ್ರಬಲವಾಗಿದ್ದಲ್ಲಿ ಮಾತ್ರ ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಸಾಧ್ಯ’ ಎಂದು ತಿಳಿಸಿದರು.

ಜಿಲ್ಲಾ ಖಜಾಂಚಿ ಹಾಗೂ ತಾಲ್ಲೂಕು ಉಸ್ತುವಾರಿ ಚಂದ್ರಶೇಖರ್ ಮಾತನಾಡಿ, ‘ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಕುಂಠಿತಗೊಂಡಿದ್ದು, ಖಜಾನೆಯ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸರ್ಕಾರ ದಿವಾಳಿಯತ್ತ ಸಾಗುತ್ತಿದೆ’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರದ ಭ್ರಷ್ಟ ಆಡಳಿತವನ್ನು ವಿರೋಧಿಸಿ ಬಿಜೆಪಿ ಆ.3 ರಿಂದ ಹಮ್ಮಿಕೊಂಡಿರುವ ಮೈಸೂರು ಪಾದಯಾತ್ರೆಗೆ ಪಿರಿಯಾಪಟ್ಟಣ ತಾಲ್ಲೂಕಿನಿಂದ ಕನಿಷ್ಠ 150 ಮಂದಿ ಕಾರ್ಯಕರ್ತರು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಮುಖಂಡರು ನೋಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ವಿ.ರಾಜೇಂದ್ರ ಮಾತನಾಡಿ, ‘ತಾಲ್ಲೂಕಿನಲ್ಲಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಸಕ್ರಿಯ ಕಾರ್ಯಕರ್ತರಿಗೆ ವಿಶೇಷ ಆದ್ಯತೆ ನೀಡಲಾಗುವುದು. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳದ ಪದಾಧಿಕಾರಿಗಳನ್ನು ಬದಲಿಸಿ ಹೊಸಬರನ್ನು ನೇಮಕ ಮಾಡಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ರಾಜ್ಯ ಘಟಕದ ಅಧ್ಯಕ್ಷರ ಸೂಚನೆಯಂತೆ ವಿವಿಧ ಹಂತಗಳಲ್ಲಿ ಸಭೆಗಳನ್ನು ಆಯೋಜಿಸುವ ಮೂಲಕ ಪ್ರತಿ ಕಾರ್ಯಕರ್ತರನ್ನು ತಲುಪುವ ಪ್ರಯತ್ನ ಮಾಡಲಾಗುವುದು’ ಎಂದರು.

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕುಮಾರ್, ಕೆ.ಎನ್.ಸೋಮಶೇಖರ್, ಮಾಜಿ ಶಾಸಕ ಎಚ್.ಸಿ.ಬಸವರಾಜ್, ಮುಖಂಡರಾದ ಆರ್.ಟಿ.ಸತೀಶ್, ಪಿ.ಜೆ.ರವಿ, ಎಂ.ಎಂ.ರಾಜೇಗೌಡ, ಜಿ.ಸಿ.ವಿಕ್ರಮ್ ರಾಜ್, ನಳಿನಿ, ಲೋಕಪಾಲಯ್ಯ, ಲೋಕೇಶ್, ಶಿವಸ್ವಾಮಿ, ರವಿ, ಚನ್ನಬಸವರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.