
ಮೈಸೂರು: ‘ಚಾಮರಾಜ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದಿರುವ ಪ್ರತಾಪ್ ಸಿಂಹ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಅಷ್ಟೇ. ಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ಕೊಡಬಾರದು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಹೇಳಿದರು.
ಮಂಗಳವಾರ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಈ ಹಿಂದೆ, ನನ್ನನ್ನು ಬಿಟ್ಟು ಯಾರಿಗೆ ಲೋಕಸಭಾ ಟಿಕೆಟ್ ನೀಡುತ್ತಾರೆ ಎಂದು ಇದೇ ಪ್ರತಾಪ್ ಸಿಂಹ ಹೇಳಿದ್ದರು. ಕೊನೆಗೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. 2028ಕ್ಕೆ ಯಾರಿಗೆ ಮುಖಭಂಗ ಆಗುತ್ತದೆ ಎಂಬುದನ್ನು ಕಾದು ನೋಡಿ’ ಎಂದರು.
‘ಪ್ರತಾಪ್ ಸಿಂಹ ಯಾವ ನೈತಿಕತೆ ಇಟ್ಟುಕೊಂಡು ಈ ಕ್ಷೇತ್ರಕ್ಕೆ ಬರುತ್ತಾರೆ. ನಿಮಗೆ ಈ ಕ್ಷೇತ್ರವೇ ಬೇಕಾ? ನನ್ನ ಬಲಿ ತೆಗೆದುಕೊಂಡು ಇಲ್ಲಿ ಸ್ಪರ್ಧೆ ಮಾಡಬೇಕಾ? ನಾನು 30 ವರ್ಷಗಳ ಕಾಲ ಪಕ್ಷಕ್ಕೆ ದುಡಿದಿಲ್ಲವಾ? ಪಕ್ಷಕ್ಕೆ ನೀವೇನು ಮಾಡಿದ್ದೀರಾ?’ ಎಂದು ಪ್ರಶ್ನಿಸಿದರು.
‘ಚಾಮರಾಜ ಕ್ಷೇತ್ರ ನನ್ನ ಧರ್ಮ ಹಾಗೂ ಕರ್ಮ ಕ್ಷೇತ್ರವೂ ಆಗಿದೆ. ನಾನು ಇಲ್ಲೇ ಹುಟ್ಟಿ, ಇಲ್ಲೇ ಬೆಳೆದವನು. ಬೇರೆ ಎಲ್ಲಿಂದಲೋ ಇಲ್ಲಿಗೆ ಬಂದಿಲ್ಲ. ಅವರಿಗೆ ನೂರು ಜನ ಕಾರ್ಯಕರ್ತರಿದ್ದರೆ, ನನಗೆ ಸಾವಿರಾರು ಕಾರ್ಯಕರ್ತರು ಇದ್ದಾರೆ’ ಎಂದು ಹೇಳಿದರು.
ಹಗಲುಕನಸು:
‘ವಿಧಾನಸಭೆ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇದೆ. ಆಗಲೇ ಅವರಿಗೆ ಹಗಲು ಕನಸು ಬಿದ್ದಿದೆ. ಅನಗತ್ಯವಾಗಿ ಇಂತಹ ಹೇಳಿಕೆ ನೀಡುವ ಮೂಲಕ ಕ್ಷೇತ್ರದ ಜನರು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಬೇಡಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಯದುವೀರ್ ಒಡೆಯರ್ ಪರ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರಲಿಲ್ಲ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ನನ್ನ ಪರವಾಗಿ ಪ್ರಚಾರಕ್ಕೆ ಬಂದಿಲ್ಲ. ಒಬ್ಬರನ್ನೂ ಗೆಲ್ಲಿಸಿಲ್ಲ. ಪ್ರಧಾನಿ ಮೋದಿ ವರ್ಚಸ್ಸಿನಲ್ಲಿ ನಾವು, ನೀವು ಗೆದ್ದಿರುವುದು. ನಿಮ್ಮ ಗೆಲುವಿಗೆ ನಮ್ಮ ಕೊಡುಗೆಯೂ ಇದೆ’ ಎಂದರು.
‘32 ವರ್ಷದಿಂದ ಪಕ್ಷದ ಕಾರ್ಯಕರ್ತನಿಂದ ಹಿಡಿದು ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ಮೂರು ಬಾರಿ ಪಾಲಿಕೆ ಸದಸ್ಯ, ಒಮ್ಮೆ ಮೇಯರ್ ಹಾಗೂ ಮುಡಾ ಅಧ್ಯಕ್ಷನಾಗಿ ಜವಾಬ್ದಾರಿ ನಿಭಾಯಿಸಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.