ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಂವಹನ ಹಾಗೂ ಪತ್ರಿಕೋದ್ಯಮ ಅಧ್ಯಯನ ವಿಭಾಗದಲ್ಲಿ ವಾಮಾಚಾರ ನಡೆದಿದ್ದು, ಈ ಸಂಬಂಧ ವಿಭಾಗದ ಮುಖ್ಯಸ್ಥರು ಕುಲಸಚಿವರಿಗೆ ದೂರು ನೀಡಿದ್ದಾರೆ.
ಸೋಮವಾರ ಕೆಲಸಕ್ಕೆ ಹಾಜರಾದ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ತೇಜಸ್ವಿ ನವಿಲೂರು ಕೊಠಡಿಯ ಬಾಗಿಲು ತೆರೆದು ತಮ್ಮ ಟೇಬಲ್‌ನ ಡ್ರಾಯರ್ ಎಳೆದಾಗ ಕೋಳಿ ತಲೆ, ಕಾಲು, ಕುಂಕುಮ, ಕೂದಲು, ಬಳೆ ಚೂರು ಜತೆಗೆ ಫೋಟೊಕತ್ತರಿಸಿರುವುದು ಕಂಡು ಬಂದಿದೆ.
ತೇಜಸ್ವಿ ಅವರು ಕುಲಪತಿ ವಿಶೇಷಾಧಿಕಾರಿ ಗಮನಕ್ಕೆ ತಂದಿದ್ದಾರೆ. ನಂತರ ವಿಭಾಗದ ಮುಖ್ಯಸ್ಥೆ ಹೇಮಲತಾ ಕುಲಸಚಿವರಿಗೆ ದೂರು ನೀಡಿದ್ದಾರೆ.
ತೇಜಸ್ವಿ ನವಿಲೂರು ಅವರು ಸಿದ್ಧಪಾಠ ತಯಾರಿ ವಿಳಂಬ ಮಾಡಿದ್ದರು ಎಂದು ವಿಶ್ವವಿದ್ಯಾಲಯ ಅಮಾನತು ಮಾಡಿತ್ತು. ಸಂಶೋಧನ ವಿದ್ಯಾರ್ಥಿಗಳ ಮನವಿ ಮೇರೆಗೆ ಅಮಾನತು ಆದೇಶ ಹಿಂಪಡೆಯಾಯಿತು. ಕರ್ತವ್ಯಕ್ಕೆ ಹಾಜರಾದ ದಿನವೇ ಈ ಘಟನೆ ನಡೆದಿದೆ.
‘ವಾಮಾಚಾರ ಸಂಬಂಧ ವಿಭಾಗದ ಮುಖ್ಯಸ್ಥರು ಕುಲಸಚಿವರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.