ADVERTISEMENT

ಯಾರನ್ನೂ ಬ್ಲ್ಯಾಕ್‌ಮೇಲ್‌ ಮಾಡುತ್ತಿಲ್ಲ: ಸಾ.ರಾ.ಮಹೇಶ್

ಮೈಮುಲ್‌ ನೇಮಕಾತಿ: ನ್ಯಾಯಾಂಗ ತನಿಖೆಗೆ ಶಾಸಕ ಸಾ.ರಾ.ಮಹೇಶ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಮೇ 2020, 1:08 IST
Last Updated 26 ಮೇ 2020, 1:08 IST
ಸಾ.ರಾ.ಮಹೇಶ್‌
ಸಾ.ರಾ.ಮಹೇಶ್‌   

ಮೈಸೂರು: ‘ಮೈಸೂರು ಜಿಲ್ಲಾ ಹಾಲು ಒಕ್ಕೂಟದ (ಮೈಮುಲ್‌) ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ನಾನು ಯಾರನ್ನೂ ಬ್ಲ್ಯಾಕ್‌ಮೇಲ್‌ ಮಾಡುತ್ತಿಲ್ಲ. ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂಬುದಷ್ಟೇ ನನ್ನ ಉದ್ದೇಶ. ನೇಮಕಾತಿ ಪ್ರಕ್ರಿಯೆ ರದ್ದುಪಡಿಸುವವರೆಗೆ ಹೋರಾಟ ಮುಂದುವರಿಸುವೆ’ ಎಂದು ಶಾಸಕ ಸಾ.ರಾ.ಮಹೇಶ್‌ ತಿಳಿಸಿದರು.

‘ಹೋರಾಟಕ್ಕೂ ಬ್ಲ್ಯಾಕ್‌ ಮೇಲ್‌ ಗೂ ವ್ಯತ್ಯಾಸವಿದೆ. ನಮ್ಮ ಕಾರ್ಯ ಕರ್ತರೊಬ್ಬರ ಬಳಿಯೇ ₹ 20 ಲಕ್ಷ ತೆಗೆದುಕೊಂಡ ವಿಚಾರ ನನ್ನ ಗಮನಕ್ಕೆ ಬಂದಾಗಲೂ ಸುಮ್ಮನಿರಬೇಕಾ? ಅಕ್ರಮ ನಡೆಯುತ್ತಿರುವುದು ಗೊತ್ತಾದ ಮೇಲೆ ದನಿ ಎತ್ತುವುದು ತಪ್ಪಾ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ನೇಮಕಾತಿ ಸಮಿತಿಯಲ್ಲೇ ಜಂಟಿ ನಿಬಂಧಕರು ಇದ್ದಾರೆ. ಹೀಗಿದ್ದು, ಜಿಲ್ಲಾ ನಿಬಂಧಕರ ಮೂಲಕ ತನಿಖೆ ನಡೆಸುವುದು ಎಷ್ಟು ಸರಿ? ತನಿಖಾ ವರದಿಯನ್ನು ಒಪ್ಪುವ ಪ್ರಶ್ನೆಯೇ ಇಲ್ಲ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ADVERTISEMENT

‘ಸಂವಿಧಾನದ ಪ್ರಕಾರ ತನಿಖೆ ನಡೆಸಲು ಒತ್ತಾಯಿಸುತ್ತಿದ್ದೇನೆಯೇ ಹೊರತು ನಾನು ಹೇಳಿದಂತೆ ಅಲ್ಲ. ಸಚಿವರು ಒತ್ತಡಕ್ಕೆ ಒಳಗಾಗಿ ಏನೇನೋ ಹೇಳುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ತಿರುಗೇಟು ನೀಡಿದರು.

‘ಅಕಸ್ಮಾತ್‌ ಅಕ್ರಮ ನಡೆದಿಲ್ಲ ಎಂದು ಸಚಿವರು ಸಮರ್ಥಿಸಿಕೊಳ್ಳುವುದಾದರೆ ಪರೀಕ್ಷೆ ಬರೆದವರಿಗೆ ಓಎಂಆರ್‌ ಶೀಟ್‌ ಏಕೆ ನೀಡಿಲ್ಲ? ಪ್ರಶ್ನೆಗಳ ಉತ್ತರವನ್ನು (ಕೀ ಆನ್ಸರ್‌) ಏಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಲ್ಲ’ ಎಂದು ಪ್ರಶ್ನಿಸಿದರು.

‘ಈಗಿನ ಪ್ರಕ್ರಿಯೆಯಲ್ಲೇ ಸಂದರ್ಶನ ನಡೆಸಿದರೆ ಇಂಥವರೇ ಆಯ್ಕೆಯಾಗುತ್ತಾರೆ ಎಂಬುದರ ಪಟ್ಟಿ ಯನ್ನು ನಾವೇ ಬಿಡುಗಡೆ ಮಾಡುತ್ತೇವೆ’ ಎಂದು ಸವಾಲು ಹಾಕಿದರು.

ಸಹಕಾರಿ ಸಂಘದ ಆಡಳಿತ ಮಂಡಳಿ ಅವಧಿ ಮುಗಿಯುವ ಕೊನೆಯ 3 ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳುವಂತಿಲ್ಲ. ಮೈಮುಲ್‌ನ ಈಗಿನ ಆಡಳಿತ ಮಂಡಳಿ ಅವಧಿ ಸೆ.13ಕ್ಕೆ ಮುಗಿಯಲಿದೆ. ನಿರ್ದೇಶಕರ ಚುನಾವಣೆ ನಡೆಸಲು ಚುನಾವಣಾ ಧಿಕಾರಿ ನೇಮಕಾತಿ ಮಾಡುವ ಸಂಬಂಧ ಮೈಮುಲ್‌ಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ ಎಂದು ದಾಖಲೆ ತೋರಿಸಿದರು. ಶಾಸಕ ಅಶ್ವಿನ್‌ ಕುಮಾರ್‌, ಮೈಮುಲ್‌ ನಿರ್ದೇಶಕ ಸೋಮಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.