ADVERTISEMENT

ರಕ್ತದಾನದಿಂದ ಮಾನವೀಯ ಮೌಲ್ಯ ಜಾಗೃತಿ: ಡಿ.ಎಸ್.ಪ್ರತಿಮಾ

ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ 9ನೇ ಸ್ವಯಂಪ್ರೇರಿತ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 7:02 IST
Last Updated 6 ಫೆಬ್ರುವರಿ 2026, 7:02 IST
ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಗುರುವಾರ ನಡೆದ ರಕ್ತದಾನ ಶಿಬಿರದಲ್ಲಿ ಐಕೆಎಸ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು
ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಗುರುವಾರ ನಡೆದ ರಕ್ತದಾನ ಶಿಬಿರದಲ್ಲಿ ಐಕೆಎಸ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು   

ಮೈಸೂರು: ಇಲ್ಲಿನ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಗುರುವಾರ ಶೇಷಾದ್ರಿಪುರಂ ಶಿಕ್ಷಣ ಟ್ರಸ್ಟ್‌ ಮಾಜಿ ಅಧ್ಯಕ್ಷ ದಿ. ಕೆ.ಎಂ.ನಂಜಪ್ಪ ಸ್ಮರಣಾರ್ಥ 9ನೇ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರಿಂದ ಒಟ್ಟು 181 ಯೂನಿಟ್ ರಕ್ತ ಸಂಗ್ರಹವಾಯಿತು.

ಮುಖ್ಯಅತಿಥಿಯಾಗಿದ್ದ ಡಿಸಿಇಎಂ ಪ್ರಾದೇಶಿಕ ನಿರ್ದೇಶಕಿ ಡಿ.ಎಸ್.ಪ್ರತಿಮಾ, ‘ರಕ್ತದಾನದಿಂದ ಅನೇಕ ಜನರ ಪ್ರಾಣ ಕಾಪಾಡಬಹುದು, ಮಾನವೀಯ ಮೌಲ್ಯಗಳನ್ನು ಮೆರೆಯಬಹುದು’ ಎಂದರು.

ADVERTISEMENT

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಖಜಾಂಚಿ ಎಚ್‌.ಬಿ.ದಿನೇಶ್ ಮಾತನಾಡಿ, ‘ಕೆ.ಎಂ. ನಂಜಪ್ಪ ಅವರು ಕರ್ನಾಟಕಕ್ಕೆ ರೆಡ್‌ಕ್ರಾಸ್ ಸೊಸೈಟಿ ಪರಿಚಯಿಸಿದರು. ಮಹಾತ್ಮ ಗಾಂಧೀಜಿ ಕೂಡ ರೆಡ್ ಕ್ರಾಸ್‌ನ ಸದಸ್ಯರಾಗಿದ್ದು, ಆರೋಗ್ಯ ಸುಧಾರಣೆ ಬಗ್ಗೆ ಸಮಾಜಕ್ಕೆ ತಿಳಿಸುವ ಕೆಲಸ ಮಾಡುತ್ತಿದ್ದರು’ ಎಂದರು. 

ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣ ಟ್ರಸ್ಟ್‌ ಕಾರ್ಯದರ್ಶಿ ವೂಡೆ ಪಿ.ಕೃಷ್ಣ, ‘ಸಂಸ್ಥೆಯಿಂದ ಪ್ರತಿ ವರ್ಷ 2,500 ಯೂನಿಟ್ ರಕ್ತ ಸಂಗ್ರಹವಾಗುತ್ತಿದ್ದು 8,000 ಜನರ ಪ್ರಾಣ ಉಳಿಸುವಂತಹ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸೊಸೈಟಿ ರಾಜ್ಯ ಸಂಯೋಜಕ ರಾಜು ಚಂದ್ರಶೇಖರ್, ಕೆ.ಆರ್.ಆಸ್ಪತ್ರೆ ರಕ್ತ ನಿಧಿ ಅಧಿಕಾರಿ ಡಾ.ಕುಸುಮಾ, ರೋಟರಿ ಕ್ಲಬ್ ಆಫ್ ಮೈಸೂರ್ ಮೆಟ್ರೊ ಅಧ್ಯಕ್ಷ ಮೋಹನ್ ಗುರುಮೂರ್ತಿ ಮಾತನಾಡಿದರು.

ಇಂಡಿಯನ್‌ ನಾಲೆಜ್‌ ಸಿಸ್ಟಮ್‌(ಐಕೆಎಸ್) ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಮನಸ್ವಿನಿ ಮಹೇಂದ್ರ ಕಿರಣ(ಪ್ರಥಮ), ಹರ್ಷಿತಾ ಎಂ. (ದ್ವಿತೀಯ), ಪ್ರದ್ಯುಮ್ನ ಕೆ.(ತೃತೀಯ) ಅವರಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎ.ಅನಂತರಾಮ್, ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಈರಪ್ಪ ಕೆ, ಸ್ವತಂತ್ರ ಪಿಯು ಕಾಲೇಜಿನ ಪ್ರಾಂಶುಪಾಲರಾದ ಅರ್ಚನಾ ಸ್ವಾಮಿ ಎನ್., ರೆಡ್‌ಕ್ರಾಸ್ ಘಟಕ ಮತ್ತು ರೋಟರಿ ಕ್ಲಬ್ ಸಂಯೋಜಕ ವಿನಯ್ ಎಂ., ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಗುರುಮೂರ್ತಿ ಭಟ್, ಎನ್‌ಸಿಸಿ ಅಧಿಕಾರಿ ಕುಮಾರ್ ಆರ್. ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.