
ಮೈಸೂರು: ‘ಸರ್ಕಾರವು ಮೈಸೂರನ್ನು ಸುಂದರವಾಗಿಡುವುದರ ಜೊತೆಗೆ ಜೀವಿಸಲು ಯೋಗ್ಯವಾದ ನಗರವನ್ನಾಗಿಸಬೇಕು. ನಗರಕ್ಕೆ ಮಾರಕವಾಗುವ ಕೆಲಸಗಳನ್ನು ಕೈಗೊಳ್ಳಬಾರದು. ಬೃಹತ್ ಮೈಸೂರು ಮಹಾನಗರ ಪಾಲಿಕೆ (ಬಿಎಂಸಿಸಿ) ರಚನೆ ನಿರ್ಧಾರ ಕೈಬಿಡಬೇಕು’ ಎಂದು ಜನಾಂದೋಲನ ಮಹಾಮೈತ್ರಿ ಸಂಚಾಲಕ ಉಗ್ರ ನರಸಿಂಹೇಗೌಡ ಒತ್ತಾಯಿಸಿದರು.
ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಗರದ ಎಲ್ಲ ಬಡಾವಣೆಗಳಿಗೂ ಶುದ್ಧ ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಸೌಲಭ್ಯ ಒದಗಿಸಲು ಮಹಾನಗರಪಾಲಿಕೆಗೆ ಸಾಧ್ಯವಾಗಿಲ್ಲ. ಹೀಗಿರುವಾಗ, ಬೃಹತ್ ಪಾಲಿಕೆಯಿಂದ ನಗರ ವ್ಯಾಪ್ತಿ ವಿಸ್ತರಣೆಗೊಂಡರೆ ನಗರಕ್ಕೆ ಮಾರಕವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಬಿಎಂಸಿಸಿ ವಿಷಯದಲ್ಲಿ ಭೂ ಮಾಫಿಯಾ ಲಾಬಿ ನಡೆದಿದೆ ಎಂಬ ಶಂಕೆ ಇದೆ. ರಾಜಕಾರಣಿಗಳು ಕೂಡ ಸುಮ್ಮನಿದ್ದಾರೆ. ಅವರೂ ಇದರಲ್ಲಿ ಶಾಮೀಲಾಗಿರಬಹುದಾದ ಅನುಮಾನವಿದೆ’ ಎಂದು ದೂರಿದರು.
‘2030ರ ವೇಳೆಗೆ ಮೈಸೂರು ಹೇಗಿರಬೇಕೆಂಬ ಯೋಜನೆ ಇತ್ತು. ಅದನ್ನು ಬದಿಗಿಟ್ಟು ಬಿಎಂಸಿಸಿ ರಚನೆಗೆ ಸರ್ಕಾರ ಮುಂದಾಗಿದೆ. ವ್ಯವಸ್ಥಿತ ಮೈಸೂರು ರಚನೆಗೆ ಕಾರಣರಾದ ನಾಲ್ವಡಿ ಅವರಿಗಿಂತ ಸರ್ಕಾರವು ಮೇಧಾವಿಯೇ’ ಎಂದು ಕೇಳಿದರು.
‘ಮೈಸೂರನ್ನು ರೋಗಗ್ರಸ್ಥ ನಗರವನ್ನಾಗಿ ಮಾಡುವುದಕ್ಕೆ ಹೊರಡುವುದು ಸರಿಯಲ್ಲ. ಭೂಮಾಫಿಯಾದವರ ಲಾಬಿಗೆ ಸರ್ಕಾರ ಮಣಿಯಬಾರದು’ ಎಂದರು.
ಚಂದ್ರಶೇಖರ ಮೇಟಿ, ಅಭಿರುಚಿ ಗಣೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.