ADVERTISEMENT

ಮೈಸೂರು: ‘ನ್ಯಾಯ’ಕ್ಕಾಗಿ ಬಾಂಬ್‌ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 13:28 IST
Last Updated 18 ಜೂನ್ 2025, 13:28 IST
ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಜ್ಞಾನಸರೋವರ ವಸತಿ ಶಾಲೆಯಲ್ಲಿ ಶ್ವಾನ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು
ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಜ್ಞಾನಸರೋವರ ವಸತಿ ಶಾಲೆಯಲ್ಲಿ ಶ್ವಾನ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು   

ಮೈಸೂರು: ಇಲ್ಲಿನ ಬನ್ನೂರು ರಸ್ತೆಯಲ್ಲಿರುವ ಜ್ಞಾನಸರೋವರ ವಸತಿ ಶಾಲೆಗೆ ಬಾಂಬ್‌ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿ ಇ–ಮೇಲ್‌ ಕಳಿಸಿದ್ದು, ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಪ‍್ರಕರಣ ದಾಖಲಾಗಿದೆ.

ಮಧ್ಯಾಹ್ನ 12.30ಕ್ಕೆ ಶಾಲೆಯ ಇ–ಮೇಲ್‌ ವಿಳಾಸಕ್ಕೆ ಸಂದೇಶ ಬಂದಿತು. ‘ಹೈದರಾಬಾದ್‌ನಲ್ಲಿ ಈಚೆಗೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ನ್ಯಾಯ ಒದಗಿಸಲು ಶಾಲೆಯಲ್ಲಿ ಬಾಂಬ್‌ ಸ್ಫೋಟಿಸುತ್ತಿದ್ದೇವೆ. ಅತ್ಯಾಚಾರ ಪ್ರಕರಣದ ಆರೋಪಿಯು ಬೆಂಗಳೂರಿನವನಾಗಿದ್ದು, ಆತನ ವಿರುದ್ಧ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ. ವಿದ್ಯಾರ್ಥಿಗಳು ಸತ್ತರಷ್ಟೇ, ಪೊಲೀಸರು ಎಚ್ಚೆತ್ತುಕೊಂಡು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬ ಬರಹವುಳ್ಳ ಇ–ಮೇಲ್‌ ಕಳಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಶಾಲೆಯ ಆಡಳಿತ ಮಂಡಳಿ ನೀಡಿದ ದೂರನ್ನು ಆಧರಿಸಿ ಪರಿಶೀಲನೆ ನಡೆಸಿದ್ದೇವೆ, ಯಾವುದೇ ಸ್ಫೋಟಕ ವಸ್ತುಗಳ ಕಂಡುಬಂದಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇ–ಮೇಲ್‌ ಕಳಿಸಿದವರ ಪತ್ತೆಗೆ ಕ್ರಮವಹಿಸಲಾಗಿದೆ. ಶಾಲೆಯಲ್ಲಿ ಬಾಂಬ್‌ ನಿಷ್ಕ್ರೀಯ ದಳ, ಶ್ವಾನ ದಳ ಹಾಗೂ ವಿಧ್ವಂಸಕ ಕೃತ್ಯ ತಡೆ ತಂಡವು ಪರಿಶೀಲನೆ ಮುಂದುವರೆಸಿದೆ’ ಎಂದು ಎಸ್‌.ಪಿ ಎನ್‌.ವಿಷ್ಣುವರ್ಧನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.