ADVERTISEMENT

ಬಸವರಾಜ ಬೊಮ್ಮಾಯಿಗೆ ಧಮ್ಮೂ ಇಲ್ಲ, ತಾಕತ್ತೂ ಇಲ್ಲ: ಸಿದ್ದರಾಮಯ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 7 ಮೇ 2023, 12:54 IST
Last Updated 7 ಮೇ 2023, 12:54 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಮೈಸೂರು: ‘ನಿಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಮಾಡಿದ್ದರೆ ಸಾರ್ವಜನಿಕವಾಗಿ ಚರ್ಚಿಸೋಣ ಒಂದೇ ವೇದಿಕೆಗೆ ಬನ್ನಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಲವು ಬಾರಿ ಸವಾಲು ಹಾಕಿದ್ದೇನೆ. ಅದಕ್ಕೆ ಅವರು ತಯಾರಿಲ್ಲ. ಏಕೆಂದರೆ, ಅವರಿಗೆ ಧಮ್ಮೂ ಇಲ್ಲ, ತಾಕತ್ತೂ ಇಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಜಿಲ್ಲೆಯ ಎಚ್‌.ಡಿ.ಕೋಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನಿಲ್‌ ಚಿಕ್ಕಮಾದು ಪರವಾಗಿ ಭಾನುವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಅಭಿವೃದ್ಧಿ ಮಾಡಿದ್ದರಲ್ಲವೇ ಅವರಿಗೆ ಮಾತನಾಡಲು ಧಮ್ ಹಾಗೂ ತಾಕತ್ತು ಇರುತ್ತದೆ?’ ಎಂದು ವ್ಯಂಗ್ಯವಾಗಿ ಕೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಪ್ರಚಾರಕ್ಕೆಂದು ಪದೇ ಪದೇ ಕರ್ನಾಟಕಕ್ಕೆ ಬಂದು ಹೋಗಿದ್ದಾರೆ. ಅವರು ಎಂದಾದರೂ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆಯೇ? ರಾಜ್ಯ ಸರ್ಕಾರದ ಭ್ರಷ್ಟಾಚಾರದ ಪ್ರಸ್ತಾಪ ಮಾಡಿದ್ದಾರೆಯೇ? ರೈತರು, ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ಭಾವನಾತ್ಮಕವಾದ ವಿಚಾರಗಳನ್ನು ಪ್ರಸ್ತಾಪ ಮಾಡಿ ಜನರ ಭಾವನೆಗಳನ್ನು ಕೆರಳಿಸಿ ಹಿಂದುತ್ವದ ಹೆಸರಿನಲ್ಲಿ ಮತ ತೆಗೆದುಕೊಳ್ಳಬೇಕು ಎನ್ನುವುದು ಬಿಜೆಪಿಯ ಹುನ್ನಾರವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಪ್ರತಿ ವ್ಯಕ್ತಿಗೆ 7 ಕೆ.ಜಿ. ಅಕ್ಕಿ ಕೊಟ್ಟಿದ್ದರೆ ಇವರಪ್ಪನ ಮನೆಯ ಗಂಟೇನು ಹೋಗುತ್ತಿತ್ತು? ಇಂಥವರು ಅಧಿಕಾರದಲ್ಲಿ ಮುಂದುವರಿಯಲು ನಾಲಾಯಕ್’ ಎಂದರು.

‘ನಾನು ಲಂಚ ತಿನ್ನುವುದಿಲ್ಲ; ತಿನ್ನಲು ಬಿಡುವುದಿಲ್ಲ ಎನ್ನುವ ಪ್ರಧಾನಿಯು, ಬೊಮ್ಮಾಯಿ ತಿನ್ನುವುದಕ್ಕೆ ಏಕೆ ಬಿಟ್ಟಿದ್ದಾರೆ. ಎಲ್ಲ ಇಲಾಖೆಯಲ್ಲೂ ಶೇ 40ರಷ್ಟು ಕಮಿಷನ್‌ ನಡೆಯುತ್ತಿದೆ. ಇದು ಗೊತ್ತಿಲ್ಲವೇ ಪ್ರಧಾನಿಯವರೇ?’ ಎಂದು ಕೇಳಿದರು.

ಜಿಲ್ಲೆಯ ಎಚ್‌.ಡಿ.ಕೋಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನಿಲ್‌ ಚಿಕ್ಕಮಾದು ಪರವಾಗಿ ಸಿದ್ದರಾಮಯ್ಯ ಭಾನುವಾರ ಮಾತಯಾಚಿಸಿದರು.

‘ರೋಡ್ ಶೋ ನಡೆಸಿ ಮತ ಕೇಳಲು ಬರುವ ‍‍ಪ್ರಧಾನಿಗೆ ನಾಚಿಕೆಯಾಗಬೇಕು. ಏನು ನೈತಿಕತೆ ಇದೆ?’ ಎಂದು ಕೇಳಿದರು.

‘ಬಿಜೆಪಿಯವರು ಒಬ್ಬ ಮುಸ್ಲಿಂ ಅಥವಾ ಕ್ರೈಸ್ತರಿಗೆ ಟಿಕೆಟ್ ಕೊಟ್ಟಿಲ್ಲ. ಕೋಪ ಬರುವುದಿಲ್ಲವೇ? ಬಿಜೆಪಿಯನ್ನು ಬೇರು ಸಹಿತ ಕಿತ್ತು ಹಾಕಬೇಕು’ ಎಂದು ತಿಳಿಸಿದರು.

ಜಿಲ್ಲೆಯ ಎಚ್‌.ಡಿ.ಕೋಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನಿಲ್‌ ಚಿಕ್ಕಮಾದು ಪರವಾಗಿ ಸಿದ್ದರಾಮಯ್ಯ ಭಾನುವಾರ ಮಾತಯಾಚಿಸಿದರು.

‘ನಾನಿದ್ದಾಗ ಜೆಡಿಎಸ್‌ ಜಾತ್ಯತೀತ ಪಕ್ಷವಾಗಿತ್ತು. ಈಗ ಅದು ಕೋಮುವಾದಿಯಾಗಿದೆ. ಒಂದು ಕುಟುಂಬದ ಪಕ್ಷ. ಆ ಪಕ್ಷಕ್ಕೆ ಮತ ಹಾಕಬೇಡಿ. ಯಾವ ಪಕ್ಷಕ್ಕೂ ಬಹುಮತ ಬರದಿರಲೆಂದು ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ನಿತ್ಯವೂ ದೇವರಲ್ಲಿ ಪ್ರಾರ್ಥಿಸಿ ಪೂಜೆ ಮಾಡುತ್ತಿದ್ದಾರೆ. ಆಗ ನಮ್ಮ ಬೇಳೆ ಕಾಳು ಬೇಯುತ್ತದೆ ಎಂದು ಭಾವಿಸಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಶಾಸಕ ಅನಿಲ್‌ ಚಿಕ್ಕಮಾದು, ವಿಧಾನಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ, ಮುಖಂಡರಾದ ಸಂದೇಶ್‌ ನಾಗರಾಜ್‌, ಸೀತಾರಾಂ, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.