ಮೈಸೂರು: ವಿಶ್ವವಿಖ್ಯಾತ ದಸರೆಗೆ ಆಗಮಿಸುವ ಸಾಹಿತ್ಯಾಸಕ್ತರು, ಪುಸ್ತಕ ಪ್ರೇಮಿಗಳನ್ನು ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ 50ಕ್ಕೂ ಅಧಿಕ ಪ್ರಕಾಶಕರು, ಪುಸ್ತಕ ಮಾರಾಟ ಸಂಸ್ಥೆಗಳು 93 ಮಳಿಗೆಗಳಲ್ಲಿ ಹಲವು ಪುಸ್ತಕಗಳನ್ನು ಪ್ರದರ್ಶನಕ್ಕಿರಿಸಿದ್ದು, ಜನರು ತಮ್ಮ ಅಭಿರುಚಿಯ ಲೇಖಕರು ಹಾಗೂ ವಿಷಯ ಕುರಿತ ಪುಸ್ತಕಗಳನ್ನು ಕೊಂಡು ಸಂಭ್ರಮಿಸುತ್ತಿದ್ದಾರೆ.
ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕೃತಿಯಿಂದ ಹಿಡಿದು ಲೇಖಕಿ ಬಾನು ಮುಷ್ತಾಕ್ ಅವರ ಎದೆಯ ಹಣತೆ ಕೃತಿವರೆಗೂ ಓದುಗರ ಬೇಡಿಕೆಯ ಹುಡುಕಾಟವು ಗಮನ ಸೆಳೆಯುತ್ತಿದೆ. ಶಿವರಾಮ ಕಾರಂತ, ಎಸ್.ಎಲ್.ಭೈರಪ್ಪ, ಪೂರ್ಣಚಂದ್ರ ತೇಜಸ್ವಿ, ಪಿ.ಲಂಕೇಶ್, ರವಿ ಬೆಳಗೆರೆ ಕೃತಿಗಳೂ ಜನರ ಕೈ ಸೇರುತ್ತಿವೆ. ಹೊಸ ಲೇಖಕರನ್ನೂ ಆದರಿಸುತ್ತಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ, ಯಕ್ಷಗಾನ, ಜಾನಪದ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಜಾನಪದ ವಿಶ್ವವಿದ್ಯಾಲಯ, ಮೈಸೂರು ಹಾಗೂ ಹಂಪಿ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟಿತವಾದ ಅನೇಕ ಗ್ರಂಥಗಳನ್ನು ಅರಸಿ ಬರುವ ಸಂಶೋಧನಾ ವಿದ್ಯಾರ್ಥಿಗಳು, ವಿದ್ವಾಂಸರಿಗೂ ಹಬ್ಬದೂಟ ದೊರೆತಂತಾಗಿದೆ.
ಪುಸ್ತಕಗಳಿಗೆ ರಿಯಾಯಿತಿ:
ಕೆಲ ಪ್ರಕಾಶಕರೂ ತಮ್ಮ ಪ್ರಕಟಣೆಗಳಿಗೆ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ವಿವಿಧ ಅಕಾಡೆಮಿ, ಪ್ರಸಾರಾಂಗ ಹೊರ ತಂದಿರುವ ಕನ್ನಡ ಪುಸ್ತಕಗಳಿಗೆ ಶೇ 50ರವರೆಗೆ ರಿಯಾಯಿತಿ ಇದ್ದು, ಓದುಗರ ಕೈ ಸೇರುತ್ತಿದೆ.
ಅ.1ರವರೆಗೆ ನಡೆಯುವ ಮೇಳದಲ್ಲಿ ದಿನವೂ ಸಂಜೆ 4.30ಕ್ಕೆ ಸಾಹಿತಿಗಳೊಂದಿಗೆ ಸೆಲ್ಫಿ ಕಾರ್ಯಕ್ರಮ, ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಪುಸ್ತಕ ಖರೀದಿ ಸಂಭ್ರಮವನ್ನು ಇಮ್ಮಡಿಸಲಿದೆ.
ದಿನವೂ ಸಾಹಿತಿಗಳೊಂದಿಗೆ ಸೆಲ್ಫಿ, ಸಾಂಸ್ಕೃತಿಕ ಕಾರ್ಯಕ್ರಮ ಶೇ 50ರವರೆಗೆ ರಿಯಾಯಿತಿ ದರದ ಮಾರಾಟ
ಪುಸ್ತಕದೊಂದಿಗೆ ‘ಕನ್ನಡ’ ಧಿರಿಸು ಸಂಭ್ರಮ
ಬೆಂಗಳೂರಿನ ಕರ್ನಾಟ ಬಲ ಹೆಸರಿನ ನವೋದ್ಯಮವು ಪುಸ್ತಕಗಳ ಜತೆ ಕನ್ನಡ ಸಂಸ್ಕೃತಿ ಇತಿಹಾಸ ಕಲೆ ಸಾಹಿತ್ಯ ಚಲನಚಿತ್ರಗಳ ಮಾಹಿತಿಯುಳ್ಳ ಟೀ ಶರ್ಟ್ ಪುಲೊವರ್ ಮುಂತಾದ ಧಿರಿಸುಗಳ ಪ್ರದರ್ಶನ ಹಾಗೂ ಮಾರಾಟ ಮಾಡುತ್ತಿದ್ದು ಜನರ ಗಮನ ಸೆಳೆಯುತ್ತಿದೆ. ‘ಕರ್ವಾಲೊ ಇಮ್ಮಡಿ ಪುಲಕೇಶಿ ಕನ್ನಡ ಬೆಳವಣಿಗೆ ಕನ್ನಡಿಗ ಶಂಕರ್ ನಾಗ್ ಮುಂತಾದ 60 ಥೀಮ್‌ಗಳಲ್ಲಿ ಮುದ್ರಿತ ಟೀ ಶರ್ಟ್ ಪ್ರದರ್ಶನವಿದೆ. ಹೊಸದಾಗಿ ನಾಲ್ವಡಿಯವರ ಚಿತ್ರ ಹಾಗೂ ಸಾಧನೆಗಳನ್ನು ಬಿಂಬಿಸುವ ಟೀ ಶರ್ಟ್‌ನೊಂದಿಗೆ ಮೇಳಕ್ಕೆ ಆಗಮಿಸಿದ್ದು ಜನರ ಸ್ಪಂದನೆಯ ನಿರೀಕ್ಷೆಯಲ್ಲಿದ್ದೇವೆ’ ಎಂದು ಸಂಸ್ಥೆ ಮಾಲೀಕ ಭುವನೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.