ಮೈಸೂರು: ‘ದೇಶದ ಸಂಸ್ಕೃತಿಯ ಶ್ರೇಷ್ಠತೆಗೆ ಬ್ರಾಹ್ಮಣರ ಕೊಡುಗೆ ಅಪಾರ. ಇಲ್ಲಿನ ಆಡಳಿತ ನಿರ್ವಹಣೆಯಲ್ಲೂ ಬ್ರಾಹ್ಮಣರ ಸಹಕಾರವೇ ಪ್ರಧಾನವಾಗಿತ್ತು’ ಎಂದು ಸಂಸ್ಕೃತ ವಿದ್ವಾಂಸ ಎಚ್.ವಿ.ನಾಗರಾಜರಾವ್ ಪ್ರತಿಪಾದಿಸಿದರು.
ನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಭಾನುವಾರ ಹರಿವು ಬುಕ್ಸ್ ಆಯೋಜಿಸಿದ್ದ ಟಿ.ಆರ್.ಅನಂತರಾಮು ಸಂಪಾದಿಸಿರುವ ‘ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ– ಹಿನ್ನೆಲೆ’ ಕೃತಿಯ 3ನೇ ಮುದ್ರಣವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
‘ಜ್ಞಾನಕ್ಕೆ ರಕ್ಷಣೆ ನೀಡುವಾತ ಬ್ರಾಹ್ಮಣ. ಇತರ ಮಾನವ ಸಮುದಾಯ ಹೇಗೆ ಬದುಕಬೇಕು ಎಂದು ಮಾರ್ಗ ತೋರುವ ಕೆಲಸ ಆತನದಾಗಿತ್ತು’ ಎಂದರು.
‘ಇತಿಹಾಸದಲ್ಲಿ ಕನ್ನಡದ ಶ್ರೇಷ್ಠ ಲೇಖಕರೆಲ್ಲ ಬ್ರಾಹ್ಮಣರೇ ಆಗಿದ್ದರು. ಅದಕ್ಕೆ ಪಂಪ ದೊಡ್ಡ ಉದಾಹರಣೆ. ಜೈನ ಹಾಗೂ ಬೌದ್ಧರಲ್ಲಿದ್ದ ಅನೇಕ ವಿದ್ವಾಂಸರು ಬ್ರಾಹ್ಮಣರಿಂದ ಪರಿವರ್ತಿತರಾದವರು. ಬ್ರಾಹ್ಮಣರು ತಮ್ಮ ಬಗ್ಗೆ ಅಭಿಮಾನವನ್ನು ಹೊಂದಬೇಕು. ವಿದ್ಯೆ ಎಂಬುದು ಹಣದ ಮೂಲ ಎಂದು ಭಾವಿಸದೆ ವಿದ್ಯೆಯನ್ನು ಉಳಿಸಬೇಕು ಎಂಬ ಉದ್ದೇಶದಿಂದ ಕಾರ್ಯಪ್ರವೃತ್ತರಾಗಬೇಕು’ ಎಂದು ಸಲಹೆ ನೀಡಿದರು.
‘ಈ ಕೃತಿಯಲ್ಲಿ ಪ್ರತಿಯೊಂದು ಅಂಶವನ್ನು ಪರಿಶೀಲಿಸಿ, ಐತಿಹಾಸಿಕ ದಾಖಲೆಗಳು, ಶಾಸನ, ಗ್ರಂಥಗಳನ್ನು ಆಧಾರವಾಗಿರಿಸಿ ರಚಿಸಲಾಗಿದೆ. ಇದು ಕೇವಲ ಸ್ಮಾರ್ತರ ಬಗ್ಗೆ ಮಾತ್ರವಲ್ಲ, ಇಡೀ ಬ್ರಾಹ್ಮಣ ಸಮುದಾಯದ ಇತಿಹಾಸ ತಿಳಿಸುತ್ತದೆ. ಸ್ಮಾರ್ತರಲ್ಲಿನ ಅನೇಕ ಪಂಗಡಗಳ ಹಿನ್ನೆಲೆಗಳು, ಅವು ಹೇಗೆ ರೂಪುಗೊಂಡವು, ಅಲ್ಲಿನ ವಿಶಿಷ್ಟ ಸಂಸ್ಕೃತಿಯನ್ನು ತಿಳಿಸುವಲ್ಲಿ ಈ ಪುಸ್ತಕ ಅಧ್ಯಯನಯೋಗ್ಯ’ ಎಂದರು.
ಕೃತಿಯ ಸಂಪಾದಕ ಬಿ.ಆರ್.ಅನಂತರಾಮು ಮಾತನಾಡಿ, ‘ಸ್ಮಾರ್ತರಲ್ಲಿನ 29 ಪಂಗಡಗಳ ಮಾಹಿತಿಯನ್ನು ಈ ಪರಿಷ್ಕೃತ ಪುಸ್ತಕದಲ್ಲಿ ನೀಡಲಾಗಿದೆ. ಸ್ಮಾರ್ತ ಎಂಬ ಒಂದು ಎಳೆಯಲ್ಲಿ ಎಲ್ಲ ಪಂಗಡಗಳ ಮಾಹಿತಿಯನ್ನು ಕಟ್ಟಿಕೊಡಲಾಗಿದೆ. ಹೊಸತಾಗಿ ಪಂಚಗ್ರಾಮ ಬ್ರಾಹ್ಮಣ ಪಂಗಡದ ಬಗ್ಗೆಯೂ ಸೇರ್ಪಡೆಯಾಗಿರುವುದು ವಿಶೇಷ’ ಎಂದು ತಿಳಿಸಿದರು.
ವಿದ್ವಾಂಸ ಟಿ.ವಿ.ವೆಂಕಟಾಚಲ ಶಾಸ್ತ್ರಿ, ಸಂಶೋಧಕ ಎನ್.ಎಸ್.ತಾರಾನಾಥ ಉಪಸ್ಥಿತರಿದ್ದರು.
ಕೃತಿ: ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ– ಹಿನ್ನೆಲೆ
ಸಂಪಾದಕ: ಟಿ.ಆರ್.ಅನಂತರಾಮು
ಪ್ರಕಾಶನ: ಹರಿವು ಬುಕ್ಸ್
ಪುಟಗಳು: 562
ಬೆಲೆ– ₹800
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.