ADVERTISEMENT

ಮೈಸೂರು: ಹಲವು ವಿಶೇಷಗಳ ‘ಬ್ರ್ಯಾಂಡ್ ಮೈಸೂರು’ ಲಾಂಛನ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2023, 14:21 IST
Last Updated 10 ಡಿಸೆಂಬರ್ 2023, 14:21 IST
ಬ್ರ್ಯಾಂಡ್‌ ಮೈಸೂರು ಲಾಂಛನ ಹಾಗೂ ಟ್ಯಾಗ್‌ಲೈನ್‌
ಬ್ರ್ಯಾಂಡ್‌ ಮೈಸೂರು ಲಾಂಛನ ಹಾಗೂ ಟ್ಯಾಗ್‌ಲೈನ್‌   

ಮೈಸೂರು: ಜಿಲ್ಲೆಯ ಪ್ರವಾಸೋದ್ಯಮ, ಸಂಸ್ಕೃತಿ, ಕಲೆ, ಪರಂಪರೆಯನ್ನು ಬಿಂಬಿಸುವಂತೆ, ಬ್ರ್ಯಾಂಡ್ ಮೈಸೂರು ಸ್ಪರ್ಧೆಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಆನ್‌ಲೈನ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಲೋಗೊ ಮತ್ತು ಟ್ಯಾಗ್‌ಲೈನ್ (ಲಾಂಛನ ಮತ್ತು ಅಡಿಬರಹ), ಮ್ಯಾಸ್ಕಾಟ್ ಅಥವಾ ಒಂದು ಸುಂದರ ಶುಭಕಾರಿ, ವಿಭಿನ್ನವಾದ ಸ್ಮರಣಿಕೆಗಳು ಹಾಗೂ ಮೈಸೂರಿನಲ್ಲಿ ನಿಮ್ಮ ನೆಚ್ಚಿನ ಕಾರ್ಯ ಚಟುವಟಿಕೆಯನ್ನು ವಿವರಿಸುವ ಒಂದು ಮಿಂಬರಹ (ಬ್ಲಾಗ್‌) ಸ್ಪರ್ಧೆಯಲ್ಲಿ 150 ಮಂದಿ ಭಾಗವಹಿಸಿದ್ದರು. ವಿಜೇತರಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹20 ಸಾವಿರ, ದ್ವಿತೀಯ ₹10 ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ ₹5 ಸಾವಿರ ಬಹುಮಾನ ನೀಡಲಾಯಿತು.

ಲೋಗೊ: ಭಾನುವಾರ ಬಿಡುಗಡೆ ಮಾಡಲಾದ ಲಾಂಛನವು, ಮೈಸೂರು ಅರಮನೆ ಮತ್ತು ದೀಪಾಲಂಕಾರ ಬಿಂಬಿಸುವಂತೆ ಒಳಾಂಗಣ ಬಾರ್ಡರ್‌ ಹೊಂದಿದೆ. ಜಂಬೂಸವಾರಿಯ ಬಿಂಬಿಸಲು ಚಿನ್ನದ ಅಂಬಾರಿ ಹೊತ್ತ ಎರಡು ಆನೆಗಳನ್ನು, ಆನೆಗಳ ಮೇಲಿನ ಹೊದಿಕೆಯು ಮೈಸೂರು ರೇಷ್ಮೆ ಬಿಂಬಿಸುವ ಮೈಸೂರು ರೇಷ್ಮೆವಸ್ತ್ರದಂತೆ ವಿನ್ಯಾಸ ಮಾಡಲಾಗಿದೆ. ಎರಡು ಆನೆಗಳ ಮಧ್ಯದಲ್ಲಿ ಮೈಸೂರು ರಾಜವಂಶದ ಲಾಂಛನ ಗಂಡಭೇರುಂಡದ ವಿನ್ಯಾಸವಿದ್ದು, ಅದರ ನೆತ್ತಿಯಲ್ಲಿ ಮೈಸೂರು ವೀಳ್ಯದೆಲೆಯನ್ನು ಹಾಗೂ ‘ಮೈಸೂರು’ ಎಂಬುದರ ಬದಿಯಲ್ಲಿ ಮೈಸೂರು ಮಲ್ಲಿಗೆಯನ್ನು ವಿನ್ಯಾಸ ಮಾಡಲಾಗಿದೆ.

ADVERTISEMENT

ಈ ಲಾಂಛನವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳ ಪತ್ರ ವ್ಯವಹಾರಕ್ಕಾಗಿ ಹಾಗೂ ಇತರ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮೈಸೂರು ಪರಂಪರೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ಆಗುವಂತೆ ಬಳಸಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.

ಟ್ಯಾಗ್‌ಲೈನ್‌: ‘ನಮ್ಮ ಪರಂಪರೆ ನಿಮ್ಮ ತಾಣ’ ಎಂಬ ಟ್ಯಾಗ್‌ಲೈನ್‌ ನೀಡಲಾಗಿದೆ.

ಮ್ಯಾಸ್ಕಾಟ್: ಮೈಸೂರನ್ನು ಪ್ರತಿನಿಧಿಸುವಂತೆ ಒಂದು ಸುಂದರ ಶುಭಕಾರಿಯನ್ನು ಆಯ್ಕೆ ಮಾಡಲಾಗಿದೆ. ಆನೆಯ ಮುಖವನ್ನು ಹೋಲುವಂತಹ ಗಣೇಶನ ದೇಹಾಕೃತಿಗೆ ವಿನ್ಯಾಸ ಮಾಡಲಾಗಿದೆ. ಅದಕ್ಕೆ ‘ಗಜ್ಜು’ ಎಂದು ಹೆಸರಿಸಲಾಗಿದೆ. ಮೈಸೂರಿನ ಪಾರಂಪರಿಕ ಮೈಸೂರು ರೇಷ್ಮೆ ಪೇಟ, ಮೈಸೂರು ರೇಷ್ಮೆ ಪಂಚೆ ಮತ್ತು ಶಲ್ಯವನ್ನು ಧರಿಸಿದಂತೆ ವಿನ್ಯಾಸ ಮಾಡಲಾಗಿದ್ದು, ಹಣೆಯ ಮೇಲೆ ಗಂಧದ ಬೊಟ್ಟನ್ನು ಹಾಕಿದ್ದು ಮೈಸೂರು ಶ್ರೀಗಂಧವನ್ನು ಪ್ರತಿನಿಧಿಸುತ್ತದೆ.

ಸ್ಮರಣಿಕೆ: ಮೈಸೂರು ಪೇಟ ಮತ್ತು ಮೈಸೂರು ರೇಷ್ಮೆ ಶಲ್ಯವನ್ನು ಧರಿಸಿರುವ ಹ್ಯಾಪಿಮ್ಯಾನ್‌ನಂತೆ, ಚಾಮುಂಡೇಶ್ವರಿ, ಪೆನ್ನು, ಕೀ ಚೇನ್, ಕೊಡೆ ಮೊದಲಾದ ಕಲಾಕೃತಿಗಳು ಅಥವಾ ಆಟಿಕೆಗಳಂತೆ ವಿನ್ಯಾಸ ಮಾಡಲಾಗಿದೆ. ಪ್ರವಾಸಿಗರು ಪ್ರವಾಸಿತಾಣಗಳಲ್ಲಿ ಅವುಗಳನ್ನು ಖರೀದಿಸಿ ಮೈಸೂರು ಪ್ರವಾಸಿ ಪರಂಪರೆಯ ನೆನಪಿನ ಜೊತೆಯಲ್ಲಿ ಕೊಂಡೊಯ್ಯಬಹುದಾದ ಸ್ಮರಣಿಕೆಗಳಾಗಿವೆ.

ಬ್ಲಾಗ್: ಮೈಸೂರಿನ ವಿವಿಧ ನೆಚ್ಚಿನ ತಾಣಗಳನ್ನು 200 ಪದಗಳಲ್ಲಿ ವರ್ಣಿಸಲು ಆಹ್ವಾನಿಸಲಾಗಿತ್ತು. ಅತ್ಯುತ್ತಮ ಬ್ಲಾಗ್‌ಗಳನ್ನು ಆಯ್ಕೆ ಮಾಡಲಾಗಿದೆ.

ಸ್ಪರ್ಧೆಯ ವಿಜೇತರು

ಲಾಂಛನ: ರಾಘವೇಂದ್ರ ಎಲ್.ಎ. (ಪ್ರಥಮ) ಬಾಲಸ್ವಾಮಿ ಎಂ. (ದ್ವಿತೀಯ) ರಿದ್ವ ಶೈಲಾ ರೈ (ತೃತೀಯ) ಮ್ಯಾಸ್ಕಾಟ್ (ಶುಭಕಾರಿ): ಅದಿತಿ ಪಂಡಿತ್ (ಪ್ರಥಮ) ಬಿ.ಪ್ರಣೀತ್ ಆಶ್ವಿನಯ್‌ (ದ್ವಿತೀಯ) ಸಯಾನ್ ಪಂಡಿತ್ (ತೃತೀಯ) ಸ್ಮರಣಿಕೆ: ಬಿ.ಪ್ರಣೀತ್ ಆಶ್ವಿನಯ್‌ (ಪ್ರಥಮ) ಪ್ರತಿಭಾ ಟಿ. (ದ್ವಿತೀಯ) ಎಲ್‌. ಪ್ರೀತಂ ಭಾರದ್ವಾಜ್‌ (ತೃತೀಯ) ಬ್ಲಾಗ್‌ ಪೋಸ್ಟ್‌: ಸಿಂಧು ಎಸ್. ಶಾಸ್ತ್ರಿ (ಪ್ರಥಮ) ಮೇಘನಾ ಭಾಸ್ಕರ (ದ್ವಿತೀಯ) ಎಸ್.ಎಂ. ಮೀನಾಕ್ಷಿ (ತೃತೀಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.