ADVERTISEMENT

ತಿ.ನರಸೀಪುರ | ನನೆಗುದಿಗೆ ಸರ್ಕಾರಿ ಬಸ್ ಡಿಪೊ ನಿರ್ಮಾಣ

3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಗತ್ಯ ಸ್ಥಳದ ಕೊರತೆ

ಎಂ.ಮಹದೇವ್
Published 30 ಆಗಸ್ಟ್ 2025, 5:43 IST
Last Updated 30 ಆಗಸ್ಟ್ 2025, 5:43 IST
ತಿ.ನರಸೀಪುರ ಪಟ್ಟಣದ ಸಾರಿಗೆ ಬಸ್‌ನಿಲ್ದಾಣ
ತಿ.ನರಸೀಪುರ ಪಟ್ಟಣದ ಸಾರಿಗೆ ಬಸ್‌ನಿಲ್ದಾಣ   

ತಿ.ನರಸೀಪುರ: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕ  ಸಂಚಾರ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಸೌಲಭ್ಯಕ್ಕಾಗಿ ತಾಲ್ಲೂಕು ಕೇಂದ್ರದಲ್ಲಿ ಬಸ್ ಡಿಪೊ ಸ್ಥಾಪಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಪಟ್ಟಣದಿಂದ 3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಡಿಪೊಗೆ ಅಗತ್ಯವಿರುವಷ್ಟು ಹಾಗೂ ರಸ್ತೆ ಪಕ್ಕದಲ್ಲಿರುವ ಯಾವುದೇ ಸರ್ಕಾರಿ ಜಮೀನು ಸಿಗದ ಕಾರಣ ಡಿಪೊ ನಿರ್ಮಾಣ ನನೆಗುದಿಗೆ ಬಿದ್ದಿದೆ. ಪಟ್ಟಣದ ಸುತ್ತಮುತ್ತ ಬಡಾವಣೆಗಳು, ನೀರಾವರಿ ಹಾಗೂ ಖಾಸಗಿ ಜಮೀನುಗಳಿರುವುದರಿಂದ ಡಿಪೊಗೆ ಕನಿಷ್ಠ 7-8 ಕಿಮಿ‌ ಹೊರ ವಲಯಕ್ಕೆ ಹೋಗುವಂತಾಗಿರುವುದು ಸಾರಿಗೆ ಇಲಾಖೆಗೆ ಸಮಸ್ಯೆಯಾಗುತ್ತಿದೆ.

ಹಲವು ದಶಕಗಳಿಂದ ಸಂಪೂರ್ಣವಾಗಿ ಖಾಸಗಿ‌ ಬಸ್ ಗಳ ಸಂಚಾರದ ಮೇಲೆ ಅವಲಂಬಿತರಾಗಿದ್ದ ತಾಲ್ಲೂಕಿನ ಜನರು ಈಗ ಸರ್ಕಾರಿ ಬಸ್ ಸಂಚಾರದಲ್ಲಿ ಖುಷಿ ಪಡುತ್ತಿದ್ದಾರೆ. ಈಗಿರುವ ಮಾಹಿತಿ ಪ್ರಕಾರ ಪ್ರತಿನಿತ್ಯ ವಿವಿಧೆಡೆಗಳಿಂದ ಹೋಗಿ ಬರುವ ಟ್ರಿಪ್ ಗಳಿಂದ ದಿನವೂ ತಾಲ್ಲೂಕಿನ‌ ಜನರು ಸೇರಿದಂತೆ ವಿವಿಧೆಡೆಗಳಿಂದ 30 ಸಾವಿರ ಜನ ಈ ನಿಲ್ದಾಣದ ಮೂಲಕ ಸಂಚರಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಸಂಚರಿಸುವವರ ಪ್ರಮಾಣ ಹೆಚ್ಚುತ್ತದೆ‌

ADVERTISEMENT

ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ಬಸ್ ಡಿಪೊಗಳಿವೆ. ಆದರೆ ತಿ. ನರಸೀಪುರದಲ್ಲಿ ಬಸ್ ಡಿಪೊ ಇಲ್ಲ. ಡಿಪೊ ಸ್ಥಾಪಿಸಿದರೆ ಜನ ಸಂಚಾರಕ್ಕೆ ಇನ್ನು ಹೆಚ್ಚಿನ ಸೌಲಭ್ಯಗಳು ಸಿಗಲಿವೆ. ಆದರೆ ಡಿಪೊ ಇಲ್ಲದ ಕಾರಣ ಅಗತ್ಯವಿರುವ ಕಡೆ ಹೆಚ್ಚುವರಿ ಬಸ್ ಸೌಲಭ್ಯ, ಗ್ರಾಮೀಣ ಸಾರಿಗೆ ಹಾಗೂ ಪರ್ಯಾಯ ಬಸ್ ವ್ಯವಸ್ಥೆಯ ಕೊರತೆ ಇದೆ‌. ಡಿಪೊ ನಿರ್ಮಾಣವಾದಲ್ಲಿ ಈ‌ ಕೊರತೆ ನೀಗಲಿದೆ ಎಂಬುದು ಜನರ ಅಭಿಪ್ರಾಯವಾಗಿದೆ.

ಮೈಸೂರು, ಚಾಮರಾಜನಗರ ಕೊಳ್ಳೇಗಾಲ, ನಂಜನಗೂಡು, ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಸರ್ಕಾರಿ ಬಸ್ ಸಂಚಾರ ಶುರುವಿನ ಬಳಿಕ, ದಶಕದ ಹಿಂದೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಾರಿಗೆ ಬಸ್ ನಿಲ್ದಾಣ ನಿರ್ಮಿಸಲಾಯಿತು. ಸಾರ್ವಜನಿಕರು ಖಾಸಗಿ ಬಸ್ ಬಿಟ್ಟು ಸರ್ಕಾರಿ ಬಸ್ ಗಳಲ್ಲಿ ಹೆಚ್ಚು ಸಂಚರಿಸಲು ಪ್ರಾರಂಭಿಸಿದ್ದರಿಂದ ಸರ್ಕಾರಿ ಬಸ್‌ಗಳ ಸಂಚಾರ ಕೂಡ ಜಾಸ್ತಿಯಾಯಿತು.‌ ಜತೆಗೆ ಸರ್ಕಾರದ ಇತ್ತೀಚಿನ ಶಕ್ತಿ ಗ್ಯಾರಂಟಿ ಯೋಜನೆ ಮಹಿಳಾ ಸಂಚಾರವನ್ನು ಮತ್ತಷ್ಟು ಹೆಚ್ಚಿಸಿದೆ. ಪಟ್ಟಣದ ಬಸ್ ನಿಲ್ದಾಣ ಮಾರ್ಗವಾಗಿ ಮೈಸೂರಿನಿಂದ ಚಾಮರಾಜನಗರ, ಕೊಳ್ಳೇಗಾಲ, ಮಹದೇಶ್ವರ ಬೆಟ್ಟದ ಮೂಲಕ ನೆರೆಯ ತಮಿಳುನಾಡಿಗೂ ಬಸ್ ಸಂಚಾರವಿದೆ.

‘ತಾಲ್ಲೂಕನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಮಹದೇವಪ್ಪನವರು ಅಧಿಕಾರದಲ್ಲಿರುವಾಗಲೇ ಹೆಚ್ಚಿನ ಅನುದಾನ ನೀಡಿ ಸುಸಜ್ಜಿತ ಬಸ್ ಡಿಪೊ ನಿರ್ಮಾಣವಾಗಲಿ ಎಂಬುದು ನಮ್ಮ ಆಶಯ. ಆದ್ದರಿಂದ ಇಬ್ಬರೂ ಜನ‌ ಪ್ರತಿನಿಧಿಗಳು ಹೆಚ್ಚಿನ‌ ಗಮನ‌ ನೀಡಿ ಅಗತ್ಯವಿರುವ ಭೂಮಿ‌ ಮಂಜೂರು ಮಾಡಿಸಿ ಡಿಪೊ ನಿರ್ಮಾಣ ಮಾಡಿಸಬೇಕು ಎನ್ನುವುದು ನಮ್ಮ ಆಗ್ರಹ’ ಎನ್ನುತ್ತಾರೆ ಸ್ಥಳೀಯ ನಿವಾಸಿ ನಾಗರಾಜು.

ಸರ್ಕಾರಿ ಸಾರಿಗೆ ಬಸ್‌ಗೆ ಹೆಚ್ಚಿದ ಪ್ರಯಾಣಿಕರು ಸರಾಸರಿ 30 ಸಾವಿರ ಜನ ತಾಲ್ಲೂಕು ನಿಲ್ದಾಣದ ಮೂಲಕ ಸಂಚಾರ ಡಿಪೊ ನಿರ್ಮಾಣವಾದಲ್ಲಿ ಹೆಚ್ಚಿನ ಬಸ್‌ ಸಂಚಾರ ಸಾಧ್ಯ

‘ಹತ್ತಿರದಲ್ಲಿ ಅನುಕೂಲಕರ ಸ್ಥಳವಿಲ್ಲ’

‘ಪಟ್ಟಣದ ಒಂದೆರೆಡು ಕಿ.ಮಿ ವ್ಯಾಪ್ತಿಯಲ್ಲಿ ಡಿಪೊ ನಿರ್ಮಾಣಕ್ಕೆ ಅಗತ್ಯವಾದ ಯಾವುದೇ ಸ್ಥಳವಿಲ್ಲ. ಈಗಾಗಲೇ ತಾಲ್ಲೂಕು ಆಡಳಿತ ಕೂಡ ಸ್ಥಳಗಳನ್ನು ಪರಿಶೀಲಿಸಿದೆ. ರಸ್ತೆಗೆ ಹೊಂದಿಕೊಂಡಂತೆ ಯಾವುದೇ ಜಾಗವಿಲ್ಲ. ಕೇಂದ್ರದಿಂದ ಹೊರ ವಲಯದಲ್ಲಿರುವ ಬಂಗಾರಪ್ಪ ಬಡಾವಣೆ ಕೂಡ್ಲೂರು ಪ್ರದೇಶಗಳಲ್ಲಿ ಪರಿಶೀಲಿಸಲಾಗಿದೆಯಾದರೂ ಆ ಪ್ರದೇಶ ನಿಲ್ದಾಣದಿಂದ ತುಂಬಾ ದೂರವಿದೆ. 7-8 ಕಿ.ಮೀ. ದೂರವಾದರೆ ಸಾರಿಗೆ ಸಿಬ್ಬಂದಿಗೆ ಹೋಗಿ‌ ಬರಲು ಅನಾನುಕೂಲವಾಗುತ್ತದೆ. ಸೂಕ್ತ ಸ್ಥಳ ಹುಡುಕಿ ಮಂಜೂರು ಮಾಡಿಸಿದರೆ ಕೂಡಲೇ ಪ್ರಸ್ತಾವನೆ ಸಲ್ಲಿಸಿ ಡಿಪೊ ನಿರ್ಮಾಣಕ್ಕೆ ಸೂಕ್ತ ಕ್ರಮ ವಹಿಸಲಾಗುವುದು’ ಎನ್ನುತ್ತಾರೆ ಸಾರಿಗೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.