ADVERTISEMENT

ಬಸ್ ನಿಲ್ದಾಣದ ‘ಗುಂಬಜ್’ ತೆರವಿಗೆ ಸಿದ್ಧ: ಪ್ರತಾಪ ಸಿಂಹ

ಸಂಸದ ಪ್ರತಾಪ ಸಿಂಹ ಹೇಳಿಕೆ; ರಾತ್ರೋರಾತ್ರಿ ಕಳಶ ಹೇಗೆ ಬಂತು?

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 20:47 IST
Last Updated 15 ನವೆಂಬರ್ 2022, 20:47 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮೈಸೂರು: ‘ಇಲ್ಲಿನ ಊಟಿ ರಸ್ತೆಯ ಜೆಎಸ್‌ಎಸ್‌ ಕಾಲೇಜು ಬಳಿ ನಿರ್ಮಿಸಿರುವ ಬಸ್‌ ನಿಲ್ದಾಣದ ಮೇಲಿನ ಗುಂಬಜ್ ತೆರವಿಗೆ ಶತಸಿದ್ಧ’ ಎಂದು ಸಂಸದ ಪ್ರತಾಪ ಸಿಂಹ ಮಂಗಳವಾರ ತಿಳಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿ, ‘ಗುಂಬಜ್ ತೆರವಿಗೆ ನಾನು ನೀಡಿದ್ದ ಗಡುವಿನಲ್ಲಿ 2 ದಿನ ಬಾಕಿ ಇದೆ. ಅಷ್ಟರಲ್ಲಿ ತೆರವುಗೊಳಿಸದಿದ್ದರೆ, ಈಗಾಗಲೇ ಹೇಳಿದಂತೆ ನಾನೇ ತೆರವು ಮಾಡುತ್ತೇನೆ’ ಎಂದರು.

‘ನಾನು ಹೇಳಿಕೆ ಕೊಡುವ ಮುನ್ನ ಗುಂಬಜ್ ಮಾತ್ರ ಇತ್ತು. ರಾತ್ರೋರಾತ್ರಿ ಅದರ ಮೇಲೆ ಕಳಶ ಹೇಗೆ ಬಂತು?’ ಎಂದು ಕೇಳಿದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿನ ಚರ್ಚೆಯನ್ನು ಉಲ್ಲೇಖಿಸಿ ‘ಮೈಸೂರಿನ ಅಂಬಾವಿಲಾಸ ಅರಮನೆಯ ಮೇಲಿನ ಗೋಪುರಕ್ಕೂ, ಮಸೀದಿ ಮೇಲಿನ ಗುಂಬಜ್‌ಗೂ ವ್ಯತ್ಯಾಸ ಇಲ್ಲವೇ? ಹೋಲಿಕೆ ಮಾಡುವ ಮುನ್ನ ವಾಸ್ತುಶಿಲ್ಪ ಕುರಿತು ಓದಿ’ ಎಂದು ಹೇಳಿದರು.

ADVERTISEMENT

‘ಅರಮನೆಯ ಗೋಪುರ ಇಂಡೋ-ಸಾರ್ಸೆನಿಕ್ ವಾಸ್ತುಶಿಲ್ಪದ್ದು. ಬಸ್ ನಿಲ್ದಾಣದ ಮೇಲೆ ಯಾವ ವಾಸ್ತುಶಿಲ್ಪ ಸೃಷ್ಟಿಸುತ್ತಾರೆ? ನಾನು ಪ್ರಸ್ತಾಪಿಸದಿದ್ದರೆ ಅಲ್ಲಿ ಅರ್ಧಚಂದ್ರ ಆಕೃತಿಯನ್ನೂ ಕಟ್ಟಿ ಬಿಡುತ್ತಿದ್ದರು.ಶಾಸಕ ಎಸ್.ಎ.ರಾಮದಾಸ್ ಈ ಬಗ್ಗೆ ಮೌನ ವಹಿಸಿದ್ದಾರೆ ಎಂದರೆ ಸಹಮತ ಇದೆ ಎಂದೇ ಅರ್ಥ’ ಎಂದರು.

‘ತೆರವಿಗೆ ಜಿಲ್ಲಾಡಳಿತದ ಅನುಮತಿ ಬೇಡ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ್ದು, ಅನುಮತಿ ಪಡೆದಿಲ್ಲ. ತೆರಿಗೆ ಹಣ ನಷ್ಟ ಆಗದಿರಲೆಂದು ನಿಲ್ದಾಣ ಉಳಿಸಿ, ಗುಂಬಜ್ ತೆರವುಗೊಳಿಸಲಾಗುತ್ತದೆ’ ಎಂದು ಹೇಳಿದರು.

‘ಅರಮನೆಯ ಮಾದರಿ, ಧರ್ಮದ ಆಧಾರದ್ದಲ್ಲ’
‘ಪಾರಂಪರಿಕ ನಗರಿಯ ಮಹತ್ವ ಸಾರಲು ಕೃಷ್ಣರಾಜ ಕ್ಷೇತ್ರದಲ್ಲಿ ಬಸ್ ಪ್ರಯಾಣಿಕರ ತಂಗುದಾಣಗಳನ್ನು ಅರಮನೆ ವಿನ್ಯಾಸದ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಯಾವುದೇ ಧರ್ಮದ ಆಧಾರದಲ್ಲಲ್ಲ’ ಎಂದು ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟಪಡಿಸಿದ್ದಾರೆ.

‘ನಿಲ್ದಾಣದ ಮೇಲೆ ಗುಂಬಜ್‌ ವಿನ್ಯಾಸ ಮಾಡಲಾಗಿದೆ’ ಎಂಬ ವಿವಾದ ಕುರಿತು ಹೇಳಿಕೆ ನೀಡಿರುವ ಅವರು, ‘ವಿನ್ಯಾಸವನ್ನು ತಪ್ಪಾಗಿ ಅರ್ಥೈಸಿ ಮಸೀದಿಯಂತೆ ನಿರ್ಮಿಸಲಾಗುತ್ತಿದೆ, ಗುತ್ತಿಗೆದಾರ ಮುಸ್ಲಿಂ ಎಂದು ವದಂತಿ ಹಬ್ಬಿಸುವ ಕುರಿತು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ದೂರು ನೀಡಿದ್ದೇನೆ’ಎಂದು ತಿಳಿಸಿದ್ದಾರೆ.

‘ನಗರದಲ್ಲಿ ಈಗಾಗಲೇ ಹಲವೆಡೆ ಇದೇ ಮಾದರಿಯ ತಂಗುದಾಣಗಳಿವೆ. ನಾವು ಅದೇ ಮಾದರಿ ಅನುಸರಿಸಿದ್ದೇವೆ. ಸಂಸದ ಪ್ರತಾಪ ಸಿಂಹ ಹೇಳಿಕೆ ನಂತರ ರಾತ್ರೋರಾತ್ರಿ ಕಳಶ ಅಳವಡಿಸಿಲ್ಲ. ಕಳೆದ ವಾರವೇ ಹಾಕಲಾಗಿದೆ‘ ಎಂದು ಸಮರ್ಥಿಸಿಕೊಂಡಿದ್ದಾರೆ.

‘ವಿನ್ಯಾಸವನ್ನು ಪರಿಶೀಲಿಸಲು ತಜ್ಞರಸಮಿತಿ ರಚಿಸಲು ಸರ್ಕಾರಕ್ಕೆಪತ್ರ ಬರೆದಿದ್ದು,ತಪ್ಪಿದೆ ಎಂದು ಸಮಿತಿ ಹೇಳಿದರೆ ಬದಲಾಯಿಸಲು ನಮ್ಮ ಅಭ್ಯಂತರವೇನಿಲ್ಲ’ ಎಂದು ತಿಳಿಸಿದ್ದಾರೆ.

ಗುಂಬಜ್‌ ಕೆಡವಲು ಅವನ್ಯಾರು?– ಸಿದ್ದರಾಮಯ್ಯ
‘ಗುಂಬಜ್ ಕೆಡವಲು ಅವನ್ಯಾರು. ಸಂಸದನಾಗಿ ಸಾಮಾನ್ಯಜ್ಞಾನ ಬೇಡವೇ. ಮನೆ ದುಡ್ಡು ಹಾಕಿ ನಿಲ್ದಾಣ ಕಟ್ಟಿಸಿದ್ದಾನಾ? ಅಧಿಕಾರಿಗಳು ವಿನ್ಯಾಸ ನೀಡಿದಾಗ ಏನು ಮಾಡ್ತಿದ್ದರು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಬಸ್ ನಿಲ್ದಾಣದ ಮೇಲಿನ ಗುಂಬಜ್ ತೆರವು ಕುರಿತ ಬಿಜೆಪಿ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು,‘ಮತಗಳ ಕ್ರೋಡೀಕರಣ ಮತ್ತು ಅಶಾಂತಿ ಮೂಡಿಸಲು ಹೇಳಿಕೆ ಕೊಡುತ್ತಿದ್ದಾರೆ.ವಿನ್ಯಾಸ ಹೀಗೇ ಇರಬೇಕೆಂಬ ನಿಯಮ ಎಲ್ಲಿದೆ? ಗುಂಬಜ್ ರೀತಿ ಇರುವುದನ್ನೆಲ್ಲಾ ಒಡೆಯುತ್ತೀರಾ? ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.