ADVERTISEMENT

ಬೆಂಬಲ ಬೆಲೆ ನೀಡಿ ಭತ್ತ ಖರೀದಿಸಿ

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 3:16 IST
Last Updated 10 ಡಿಸೆಂಬರ್ 2025, 3:16 IST
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು   

ಮೈಸೂರು: ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಆರಂಭಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಿದರು.

‘ಅಧಿಕಾರಿಗಳು ಭತ್ತ ಖರೀದಿ ಕೇಂದ್ರ ಆರಂಭಿಸಿದ್ದೇವೆ ಎಂದು ರೈತರ ನೋಂದಣಿ ಮಾಡಿಕೊಳ್ಳುವ ಮೂಲಕ ವಿಳಂಬ ಮಾಡುತ್ತಿದ್ದಾರೆ. ಭತ್ತದ ಬೆಲೆ ಕುಸಿಯುತ್ತಿದೆ. ವಿಳಂಬವಾಗಿ ಖರೀದಿ ಕೇಂದ್ರ ಆರಂಭವಾದರೆ, ರೈತರ ಬದಲಿಗೆ ದಲ್ಲಾಳಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಹೀಗಾಗಿ ಕೂಡಲೇ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ರಾಜ್ಯ ಸರ್ಕಾರ ಟನ್ ಕಬ್ಬಿಗೆ ಹೆಚ್ಚುವರಿ ₹ 100 ನಿಗದಿ ಮಾಡಿದ್ದು, ಅದನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕೂಡಲೇ ಕೊಡಿಸಬೇಕು. ಕಳೆದ ವರ್ಷದ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಿ ರೈತರಿಗೆ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಘಟನೆ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ‘ಬಣ್ಣಾರಿ ಸಕ್ಕರೆ ಕಾರ್ಖಾನೆ ರೈತರಿಗೆ ನ್ಯಾಯ ಸಮ್ಮತ ಬೆಲೆ ನೀಡುತ್ತಿಲ್ಲ. ಆದರೆ, ರೈತರನ್ನು ಹೆಚ್ಚು ಕಬ್ಬು ಬೆಳೆಯುವಂತೆ ಆಮಿಷ ಒಡ್ಡುತ್ತಿದೆ. ಇಂತಹ ಆಮಿಷಕ್ಕೆ ರೈತರು ಬಲಿ ಆಗಬಾರದು. ಜನಸಾಮಾನ್ಯರು ತಿನ್ನುವ ಭತ್ತಕ್ಕೆ ಬೆಂಬಲ ಬೆಲೆ ₹ 2,365, ದನಕರುಗಳು, ಪ್ರಾಣಿಗಳು ತಿನ್ನುವ ಮೆಕ್ಕೆಜೋಳಕ್ಕೆ ₹ 2,400 ನಿಗದಿ ಮಾಡಿದ್ದು, ಇದರಿಂದ ರೈತರ ಬದುಕು ನರಕವಾಗುತ್ತಿದೆ. ಕೇಂದ್ರ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಭತ್ತದ ಬೆಂಬಲ ಬೆಲೆಯನ್ನು ₹ 3 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು. 

ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ‘ಡಿ. 11ರಂದು ರೈತರಿಂದ ಭತ್ತ, ರಾಗಿ ಖರೀದಿ ಕೇಂದ್ರ ಆರಂಭಿಸಲಾಗುವುದು. ಕಬ್ಬಿಗೆ ಹೆಚ್ಚುವರಿ ಹಣ ಕೊಡಿಸುವ ಬಗ್ಗೆ ಹಾಗೂ ಸಮಸ್ಯೆಗಳ ಚರ್ಚಿಸುವ ಸಂಬಂಧ ಡಿ.29ರಂದು ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರ ಸಭೆ ಕರೆಯಲಾಗುವುದು’ ಎಂದು ಭರವಸೆ ನೀಡಿದರು.

ಸಂಘಟನೆಯ ಮುಖಂಡರಾದ ಅತ್ತಹಳ್ಳಿ ದೇವರಾಜ್, ಸೋಮಶೇಖರ್, ಬರಡನಪುರ ನಾಗರಾಜ್, ಮೂಕಳ್ಳಿ ಮಹದೇವಸ್ವಾಮಿ, ಕುರುಬೂರು ಸಿದ್ದೇಶ್, ಲಕ್ಷ್ಮೀಪುರ ವೆಂಕಟೇಶ್, ದೇವನೂರು ವಿಜಯೇಂದ್ರ, ಪಟೇಲ್ ಶಿವಮೂರ್ತಿ, ಮಾರ್ಬಳ್ಳಿ ನೀಲಕಂಠಪ್ಪ, ಉಡಿಗಾಲ ರೇವಣ್ಣ, ಬಿ.ಪಿ.ಪರಶಿವಮೂರ್ತಿ, ಕೆಂಡಗಣಪ್ಪ, ಅಂಬಳೆ ಮಂಜುನಾಥ್, ಎಚ್.ಡಿ.ಕೋಟೆ ಸುನೀಲ್, ದೇವನೂರು ಮಹಾದೇವ ಭಾಗವಹಿಸಿದ್ದರು.