ಮೈಸೂರು: ‘ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ವತಿಯಿಂದ ಜುಲೈ 26ರಂದು ಬೆಳಿಗ್ಗೆ 11ಕ್ಕೆ ಬಂಬೂಬಜಾರ್‌ನ ರಿಯೋಮೆರಿಡಿಯನ್ ಹೋಟೆಲ್‌ನಲ್ಲಿ ‘ಜಾತಿ ಜನಗಣತಿ: ಹಿನ್ನೆಲೆ-ಮುನ್ನೆಲೆ’ ವಿಚಾರಸಂಕಿರಣ ಆಯೋಜಿಸಲಾಗಿದೆ’ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು ತಿಳಿಸಿದರು.
‘ಮುಖ್ಯ ಭಾಷಣಕಾರರಾಗಿ ರಾಜ್ಯಸಭಾ ಸದಸ್ಯರೂ ಆದ ಬಿಜೆಪಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಕೆ. ಲಕ್ಷ್ಮಣ್ ಭಾಗವಹಿಸುವರು. ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಉದ್ಘಾಟಿಸುವರು. ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ನಿವೃತ್ತ ಕುಲಪತಿ ಹೇಮಂತ್‌ಕುಮಾರ್, ವಾಣಿಜ್ಯ ಇಲಾಖೆಯ ನಿವೃತ್ತ ಅಧಿಕಾರಿ ಜಗನ್ನಾಥ್ ಸಾಗರ್ ಮಾತನಾಡುವರು. ಹಿಂದುಳಿದ ವರ್ಗಗಳ ಪ್ರಮುಖರು, ಚಿಂತಕರು ಪಾಲ್ಗೊಳ್ಳುವರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆ ವಹಿಸುವರು’ ಎಂದು ಮಾಹಿತಿ ನೀಡಿದರು.
‘ನಗರದಲ್ಲಿ ಬಹಳ ದಿನಗಳ ನಂತರ ಹಿಂದುಳಿದ ಸಮುದಾಯಗಳ ಕುರಿತ ದೊಡ್ಡ ಪ್ರಮಾಣದ ಹಾಗೂ ದೇಶವನ್ನು ಗಮನಸೆಳೆಯುವ ವಿಚಾರಸಂಕಿರಣ ಇದಾಗಲಿದೆ. ವಿಭಾಗಮಟ್ಟದ ವಿಚಾರಸಂಕಿರಣ ಇದಾಗಿದ್ದು, ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ 500ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುವರು’ ಎಂದು ತಿಳಿಸಿದರು.
ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ
‘ಜಾತಿ ಜನಗಣತಿಯನ್ನು ಕಾಂಗ್ರೆಸ್ ಸರ್ಕಾರದವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಕಾಂತರಾಜು ಆಯೋಗದ ವರದಿಯನ್ನು 10 ವರ್ಷಗಳವರೆಗೆ ಇಟ್ಟಕೊಂಡು, ನನೆಗುದಿಗೆ ಹಾಕಿ ರಾಹುಲ್ ಗಾಂಧಿ ಹೇಳಿದರೆಂದು ಕಸದ ಬುಟ್ಟಿಗೆ ಹಾಕಿ ಮತ್ತೊಂದು ವರದಿಗಾಗಿ ಕೇವಲ 15 ದಿನಗಳಲ್ಲಿ ಸಮೀಕ್ಷೆ ನಡೆಸುತ್ತೇವೆ ಎಂದು ಹೊರಟಿದ್ದಾರೆ. ಈ ಮೂಲಕ ಹಿಂದುಳಿದ ಸಮುದಾಯಗಳಿಗೆ ಕಿವಿಗೆ ಹೂವು ಮುಡಿಸುವಂತಹ ಕೆಲಸಕ್ಕೆ ಮುಂದಾಗಿದ್ದಾರೆ. ಇದು ಖಂಡನೀಯ’ ಎಂದರು.
‘ಆಗ ಸಮೀಕ್ಷೆಗಾಗಿ ರಾಜ್ಯದ ತೆರಿಗೆದಾರರ ₹ 165 ಕೋಟಿ ಹಣ ವ್ಯಯ ಮಾಡಲಾಯಿತು. ಈಗ, ಮತ್ತೊಮ್ಮೆ ಜನರ ತೆರಿಗೆ ಹಣ ಬಳಸುತ್ತಿದ್ದಾರೆ. ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಡಬೇಕು ಎಂಬ ಕಾಳಜಿಯನ್ನು ಕಾಂಗ್ರೆಸ್‌ನವರು ನೆಹರೂ ಕಾಲದಿಂದಲೂ ತೋರಲಿಲ್ಲ’ ಎಂದು ದೂರಿದರು.
ವಿನಿಮಯ ಮಾಡಿಕೊಳ್ಳಬಹುದಿತ್ತು...
‘ಶಾಶ್ವತವಾದ ಹಿಂದುಳಿದ ವರ್ಗಗಳ ಆಯೋಗ ರಚಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ. 2026ರಲ್ಲಿ ಜನಗಣತಿ ಜೊತೆಗೆ ಜಾತಿ ಜನಗಣತಿ ನಡೆಸುವುದಾಗಿ ಕೇಂದ್ರ ಸರ್ಕಾರ ಐತಿಹಾಸಿಕ ಹೆಜ್ಜೆಯನ್ನು ಇಟ್ಟಿದೆ. ಹಿಂದುಳಿದ ವರ್ಗಗಳ ಆರ್ಥಿಕ, ಔದ್ಯೋಗಿಕ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯ ವರದಿ ಸಿದ್ಧಪಡಿಸಲಿದೆ. ಮುಖ್ಯಮಂತ್ರಿಗೆ ನಿಜವಾಗಿಯೂ ಬದ್ಧತೆ ಇದ್ದರೆ, ಸಮೀಕ್ಷೆಯಿಂದ ದೊರೆತ ದತ್ತಾಂಶವನ್ನು ಕೇಂದ್ರದೊಂದಿಗೆ ವಿನಿಮಯ ಮಾಡಿಕೊಂಡು ಸಹಕಾರ ಕೊಡಬಹುದಾಗಿತ್ತು. ಆದರೆ, ಅಹಿಂದ ಹೆಸರಿನಲ್ಲಿ ಮತಬ್ಯಾಂಕ್ ಮಾಡಿಕೊಂಡು ಅಧಿಕಾರದಲ್ಲಿ ಉಳಿಯಲು ತಂತ್ರ ರೂಪಿಸಿದ್ದಾರೆ’ ಎಂದು ರಘು ಆರೋಪಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್. ಸುಬ್ಬಣ್ಣ ಪಾಲ್ಗೊಂಡಿದ್ದರು.
ರಾಜ್ಯ ಸರ್ಕಾರ ಹಿಂದುಳಿದ ವರ್ಗದವರಿಗೆ ಪೂರಕವಾಗಿ ನಡೆದುಕೊಂಡಿಲ್ಲ. ಸಮಪಾಲು ಪಡೆಯುವಂತೆ ಮಾಡದಿರುವುದು ಘೋರ ದುರಂತ– ಆರ್. ರಘು, ಅಧ್ಯಕ್ಷ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.